ಆರ್ಥಿಕ ಮಾನದಂಡದ ಮೇಲೆ ಮೀಸಲಾತಿ ನೀಡುವ ಬಗ್ಗೆ ಸಂವಿಧಾನದಲ್ಲಿ ತಿಳಿಸಿಲ್ಲ: ಎಚ್.ಎನ್. ನಾಗಮೋಹನ್ ದಾಸ್

Update: 2024-01-31 16:44 GMT

ಬೆಂಗಳೂರು: ಭಾರತದ ಸಂವಿಧಾನದಲ್ಲಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಹಿಂದುಳಿದವರಿಗೆ ಮೀಸಲಾತಿ ಕೊಡಬೇಕು ಎಂಬುದು ಸಂವಿಧಾನದ ಆಶಯವಾಗಿದ್ದು, ಎಲ್ಲಿಯೂ ಆರ್ಥಿಕ ಮಾನದಂಡದ ಮೇಲೆ ಮೀಸಲಾತಿ ಕೊಡಬೇಕು ಎಂದು ಸಂವಿಧಾನದಲ್ಲಿ ತಿಳಿಯಪಡಿಸಿಲ್ಲ ಎಂದು ಸುಪ್ರೀಂ ಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಸ್ಪಷ್ಟಪಡಿಸಿದ್ದಾರೆ.

ಬುಧವಾರ ಗಾಂಧಿ ಭವನದಲ್ಲಿ ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟವು ಹಮ್ಮಿಕೊಂಡಿದ್ದ `ಸಂವಿಧಾನ ಜಾರಿಯಾಗಿ 74 ವರ್ಷಗಳು ಕಳೆದಿದ್ದರೂ ಸಂವಿಧಾನದ ಆಶಯಗಳು ಇನ್ನೂ ಈಡೇರಲಿಲ್ಲ ಏಕೆ? ಮುಂದೇನು?' ಎಂಬ ವಿಷಯದ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆರ್ಥಿಕ ಮಾನದಂಡದ ಆಧಾರದಲ್ಲಿ ಶೇ.10 ಮೀಸಲಾತಿ ಕೊಟ್ಟಿರುವಂತದ್ದು ಸರಿಯಲ್ಲ. ಬೇರೆ ಧರ್ಮಗಳು, ಬೇರೆ ಜಾತಿಗಳು, ಮೇಲ್ಜಾತಿ, ಮೇಲ್ವರ್ಗದಲ್ಲಿ ಬಡವರಿಲ್ಲವೇ? ಅವರಲ್ಲಿ ಬುದ್ದಿವಂತರಿಲ್ಲವೇ? ಅವರಿಗೆ ಅವಕಾಶ ಬೇಡವೇ? ದೇಶ ಕಟ್ಟಲು ಎಲ್ಲ ಜನರಲ್ಲಿರುವ ಪ್ರತಿಭೆಗಳನ್ನು ನಾವು ಬಳಸಿಕೊಳ್ಳಬೇಕು. ಅದಕ್ಕೆ ಶೇ.10 ಮೀಸಲಾತಿ ಒಂದೇ ಮಾರ್ಗವಲ್ಲ ಎಂದು ಅವರು ವಿವರಿಸಿದರು.

ಸಂವಿಧಾನವನ್ನು ತಿದ್ದುಪಡಿ ಮಾಡಲು ಪಾರ್ಲಿಮೆಂಟ್‍ಗೆ ಅಧಿಕಾರ ಇದೆ. ಆದರೆ, ಈ ಅಧಿಕಾರ ಬಳಸಿ ಪಾರ್ಲಿಮೆಂಟ್ ಸಂವಿಧಾನದಲ್ಲಿರುವ ಏನನ್ನಾದರೂ ತಿದ್ದುಪಡಿ ಮಾಡಬಹುದೇ ಎನ್ನುವ ಪ್ರಶ್ನೆ ಸುಪ್ರೀಂ ಕೋರ್ಟ್ ಮುಂದೆ ಕೇಶವಾನಂದ ಭಾರತಿ ಪ್ರಕರಣದಲ್ಲಿ ಪ್ರಸ್ತಾಪವಾಗಿತ್ತು. `ಸಂವಿಧಾನದ ಮೂಲ ತತ್ವಗಳನ್ನು ಪಾರ್ಲಿಮೆಂಟ್‍ಗೆ ಮುಟ್ಟಲೂ ಅವಕಾಶವಿಲ್ಲ’ ಎಂದು ಹೇಳಿತ್ತು. ಹೀಗಾಗಿ ಇವತ್ತಿನ ಪರಿಸ್ಥಿತಿಯಲ್ಲಿ ಎಷ್ಟೇ ಬಹುಮತ ಬಂದರೂ ಸಂವಿಧಾನವನ್ನಾಗಲಿ, ಸಂವಿಧಾನದ ಮೂಲ ತತ್ವಗಳನ್ನಾಗಲಿ ಬದಲಾಯಿಸಲು ಆಗುವುದಿಲ್ಲ ಎಂದು ಅವರು ಹೇಳಿದರು.

ನಮ್ಮ ಸಂವಿಧಾನವನ್ನು ಅರ್ಥ ಮಾಡಿಕೊಂಡು ಅದರಂತೆ ನಾವು ಬದುಕಿದರೆ ಸಮಸ್ಯೆಗಳನ್ನು ಪರಿಹಾರ ಮಾಡಿಕೊಂಡು, ಸವಾಲುಗಳನ್ನು ಹಿಮ್ಮೆಟ್ಟಿಸಬಹುದು. ಭವ್ಯ ಭಾರತವನ್ನು ನಿರ್ಮಿಸಬಹುದು ಎಂದು ನಾಗಮೋಹನ್ ದಾಸ್ ಹೇಳಿದರು.

ಕಾರ್ಯಕ್ರಮದಲ್ಲಿ ಹಿರಿಯ ದಲಿತ ಮುಖಂಡ ಕೋಟಿಗಾನಹಳ್ಳಿ ರಾಮಯ್ಯ, ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಬಿ.ಚನ್ನಕೃಷ್ಣಪ್ಪ ಸೇರಿದಂತೆ ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News