ದೇಶದಲ್ಲಿನ ದೊಡ್ಡ ವಿಪತ್ತು ಎಂದರೆ ನಿರುದ್ಯೋಗ, : ಎಐಸಿಸಿ ವಕ್ತಾರ ಅಂಶುಲ್ ಅವಿಜಿತ್

Update: 2024-02-08 14:51 GMT

ಬೆಂಗಳೂರು: ದೇಶದಲ್ಲಿ ಎದುರಾಗಿರುವ ದೊಡ್ಡ ವಿಪತ್ತು ಎಂದರೆ ನಿರುದ್ಯೋಗ. ಈ ಸಮಸ್ಯೆಯಿಂದ ಯುವಕರ ಗಮನ ಬೇರೆಡೆ ಸೆಳೆಯಲು ಕೇಂದ್ರ ಸರಕಾರ ಪ್ರಯತ್ನಿಸುತ್ತಿದೆ ಎಂದು ಎಐಸಿಸಿ ವಕ್ತಾರ ಅಂಶುಲ್ ಅವಿಜಿತ್ ಆರೋಪಿಸಿದ್ದಾರೆ.

ಗುರುವಾರ ನಗರದ ಕ್ವೀನ್ಸ್‍ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರದ ಯೋಜನೆಗಳು ವಿಫಲವಾಗಿವೆ. ಅದರಲ್ಲಿ ಪ್ರಮುಖವಾದುದು ಅಗ್ನಿಪತ್ ಯೋಜನೆ. 1.50 ಲಕ್ಷ ಅಗ್ನಿಪತ್ ಪರೀಕ್ಷೆ ಬರೆದ ಯುವಕರಿಗೆ ನ್ಯಾಯ ಒದಗಿಸಲು ನಾವು ಆಂದೋಲನ ಆರಂಭಿಸಿದ್ದೇವೆ. ರಾಹುಲ್ ಗಾಂಧಿ ಅವರು ಭಾರತ ಜೋಡೋ ನ್ಯಾಯ ಯಾತ್ರೆ ಸಂದರ್ಭದಲ್ಲಿ ಯುವ ನ್ಯಾಯ ಆಂದೋಲನ ಆರಂಭಿಸಿದ್ದಾರೆ ಎಂದರು.

ನಿರುದ್ಯೋಗ ಸಮಸ್ಯೆ ಬಗ್ಗೆ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಅವರು ಪ್ರಸ್ತಾಪ ಮಾಡಿಯೇ ಇಲ್ಲ. ಸದ್ಯ ದೇಶದಲ್ಲಿ 4 ಕೋಟಿಗೂ ಹೆಚ್ಚು ನಿರುದ್ಯೋಗಿ ಯುವಕರಿದ್ದಾರೆ. ಅದರಲ್ಲಿ 25 ವರ್ಷದೊಳಗಿನ ಪದವೀಧರ ನಿರುದ್ಯೋಗಿಗಳ ಪ್ರಮಾಣ ಶೇ.40ರಷ್ಟಿದೆ. ಯುವಕರು ಪದವೀಧರರಾದರೆ ಅವರಿಗೆ ಕೆಲಸ ಸಿಗುವ ಖಚಿತತೆ ಇಲ್ಲ. ನಿರುದ್ಯೋಗಿ ಯುವಕರ ನೆರವಿಗೆ ಕೇಂದ್ರ ಬಜೆಟ್‍ನಲ್ಲಿ ಅನುದಾನವನ್ನೇ ಮೀಸಲಿಟ್ಟಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ನಿರುದ್ಯೋಗದ ಕಾರಣ ಬಡವರ ಪ್ರಮಾಣ ನಿರಂತರವಾಗಿ ಹೆಚ್ಚುತ್ತಿದೆ. ಪ್ರಧಾನಿ ಮೋದಿ ಅವರು ಉಲ್ಲೇಖಿಸಿರುವ ಗ್ಯಾನ್ ವರ್ಗದಲ್ಲಿ ಬಡವರು, ಯುವಕರು, ಅನ್ನದಾತ, ನಾರಿ ಸಮುದಾಯಗಳಿದ್ದು, ಅದರಲ್ಲಿ ಯುವ ವರ್ಗವನ್ನು ಕೇಂದ್ರ ಸರಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಅಂಶುಲ್ ಅವಿಜಿತ್ ದೂರಿದರು.

ಅಗ್ನಿಪತ್ ಯೋಜನೆಯ ನ್ಯೂನ್ಯತೆ ಬಗ್ಗೆ ಮಾಜಿ ಸೈನಿಕರು ಬಹಿರಂಗಪಡಿಸಿದ್ದಾರೆ. ಈ ಯೋಜನೆಯಿಂದ ದೇಶದ ಸೈನಿಕರಿಗೆ ಯಾವುದೇ ರೀತಿಯ ಪ್ರಯೋಜನವಾಗುವುದಿಲ್ಲ. ಈ ಆಂದೋಲನದ ಮೂಲಕ ಅಗ್ನಿಪತ್ ಯೋಜನೆಯಿಂದ ಸಮಸ್ಯೆ ಎದುರಿಸಿರುವ ಯುವಕರಿಗೆ ನೆರವಾಗಲು ಮುಂದಾಗಿದ್ದೇವೆ. ಇವರಿಗೆ ನ್ಯಾಯ ಸಿಗುವಂತೆ ಮಾಡಬೇಕು. ಈ ಆಂದೋಲನದಲ್ಲಿ 30 ಲಕ್ಷ ಅಗ್ನಿಪತ್ ಸಂತ್ರಸ್ತ ಕುಟುಂಬಗಳನ್ನು ಸಂಪರ್ಕ ಮಾಡಲಾಗುವುದು ಎಂದು ಅಂಶುಲ್ ಅವಿಜಿತ್ ತಿಳಿಸಿದರು.

ಅಗ್ನಿಪತ್ ಒಂದು ಬೋಗಸ್ ಯೋಜನೆ: ಅಗ್ನಿಪತ್ ಯೋಜನೆ ಒಂದು ಬೋಗಸ್ ಯೋಜನೆ. ಈ ಯೋಜನೆ ಬಂದ ನಂತರ ದೇಶದ ಯುವಕರು ಸೇನೆಗೆ ಸೇರುವ ಉತ್ಸಾಹ ಕಳೆದುಕೊಂಡಿದ್ದಾರೆ. ಈ ಯೋಜನೆ ಜಾರಿಗೂ ಮುನ್ನ 2021-22ರಲ್ಲಿ ಸೇನೆ ಸೇರಲು 34 ಲಕ್ಷ ಯುವಕರು ಅರ್ಜಿ ಹಾಕುತ್ತಿದ್ದರು, 2023-24ರಲ್ಲಿ ಸೇನೆಗೆ ಸೇರಲು ಅರ್ಜಿ ಹಾಕಿದವರ ಪ್ರಮಾಣ ಕೇವಲ 10 ಲಕ್ಷ. ಈ ಯೋಜನೆ ಸೇನೆಗೆ ಸೇರುವ ಆಕರ್ಷಣೆಯನ್ನು ನಾಶಪಡಿಸಿದೆ. ಈ ಯೋಜನೆ ಮೂಲಕ ಸೇನೆಗೆ ಸೇರಿದರೆ, ಆರೋಗ್ಯದ ನೆರವು, ತುಟ್ಟಿಭತ್ಯೆ, ಸಹಾಯಧನ, ಮಾಜಿ ಸೈನಿಕರಿಗೆ ಸಿಗುವ ಸೌಲಭ್ಯ, ಯುದ್ಧದಲ್ಲಿ ಸತ್ತರೆ ಹುತಾತ್ಮರಿಗೆ ಸಿಗುವ ಸೌಲಭ್ಯ ಸಿಗುವುದಿಲ್ಲ. ಇಂತಹ ಸಂದರ್ಭದಲ್ಲಿ ನಾಲ್ಕು ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ ಹೊರಬರುವ ಯುವಕರಿಗೆ ಕೆಲಸ ಸಿಗುವುದಿಲ್ಲ, ಬೇರೆ ಉದ್ಯೋಗ ಅವಕಾಶಗಳು ಇಲ್ಲವಾಗಿದೆ ಎಂದು ಎಐಸಿಸಿ ವಕ್ತಾರ ಅಂಶುಲ್ ಅವಿಜಿತ್ ಟೀಕಿಸಿದರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News