ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಬೇಡಿ : ಸ್ಪೀಕರ್ ಯು.ಟಿ.ಖಾದರ್

Update: 2024-02-28 18:04 GMT

ಬೆಂಗಳೂರು : ರಾಷ್ಟ್ರಧ್ವಜಕ್ಕೆ ಅವಮಾನ ಮಾಡಬೇಡಿ. ಒಂದು ವೇಳೆ ಅವಮಾನ ಮಾಡುವುದು ಕಂಡರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಎಚ್ಚರಿಕೆ ನೀಡಿದ್ದಾರೆ.

ಬುಧವಾರ ಬೆಳಗ್ಗೆ ಸದನ ಆರಂಭಗೊಂಡಾಗ ಪ್ರಸ್ತಾಪಿಸಿದ ಅವರು, ‘ಅಧಿಕಾರಿಗಳಿಂದ ನನಗೆ ಮಾಹಿತಿ ಬಂದಿದೆ. ರಾಷ್ಟ್ರಧ್ವಜವನ್ನು ಸದನದೊಳಗೆ ತಂದಿದ್ದಾರೆಂಬ ಮಾಹಿತಿ ಇದೆ. ಯಾರೂ ಅವಮಾನ ಮಾಡಬಾರದು. ಸದನದ ಹೊರಗೆ ನಡೆದಿರುವ ಘಟನೆ ಬಗ್ಗೆ ಚರ್ಚೆ ಮಾಡಲು ಅಡ್ಡಿಯಿಲ್ಲ. ಆದರೆ, ನನ್ನ ಜವಾಬ್ದಾರಿ, ಕರ್ತವ್ಯವನ್ನು ನಿಭಾಯಿಸಬೇಕು’ ಎಂದರು.

ಅನಂತರ, ಪ್ರತಿಪಕ್ಷದ ನಾಯಕ ಆರ್.ಅಶೋಕ್ ಸೇರಿದಂತೆ ಬಿಜೆಪಿ ಸದಸ್ಯರು, ‘ರಾಷ್ಟ್ರಧ್ವಜಕ್ಕೆ ಅಗೌರವ ನಾವು ಮಾಡಿಲ್ಲ. ಒಂದು ವೇಳೆ ನಾವು ಮಾಡಿದ್ದರೆ ಕಾನೂನು ಕ್ರಮ ಜರುಗಿಸಿ. ಭಾರತದ ಧ್ವಜವನ್ನು ಹಿಡಿದು ಬರುವುದು ತಪ್ಪೇ?, ಭಾರತದ ಧ್ವಜವನ್ನು ಹಿಡಿಯಲು ನಮಗೆ ಹೆಮ್ಮೆ ಎನಿಸುತ್ತದೆ. ಯಾರು ನಿಮಗೆ ಬಾವುಟ ಕುರಿತು ಮಾಹಿತಿ ನೀಡಿದ್ದಾರೆಂದು ತಿಳಿಸಿ’ ಎಂದು ಕೇಳಿದರು.

ಈ ವೇಳೆ ಆಡಳಿತ ಪಕ್ಷದ ಹಲವು ಸದಸ್ಯರು ಎದ್ದು ನಿಂತು ಪ್ರತಿಯಾಗಿ ಮಾತನಾಡಲು ಮುಂದಾದಾಗ, ಗದ್ದಲ ಉಂಟಾಯಿತು. ಆಗ ಸ್ಪೀಕರ್ ಖಾದರ್ ಅವರು, ‘ಸದನದ ಹೊರಗೆ ನಡೆದಿರುವ ವಿಚಾರ ಬಗ್ಗೆ ಸರಕಾರ ತನಿಖೆ ಮಾಡಲಿ, ತಕ್ಷಣ ತಪ್ಪಿತಸ್ಥರಿದ್ದರೆ ಕ್ರಮ ಕೈಗೊಳ್ಳಲಿ’ ಎಂದು ನುಡಿದರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News