ರಾಜ್ಯದ ನಾಲ್ಕು ಸಾರಿಗೆ ನಿಗಮಗಳಿಗೆ ಐದು ಪ್ರಶಸ್ತಿಗಳ ಗರಿ

Update: 2024-03-01 15:59 GMT

ಬೆಂಗಳೂರು: ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳಿಗೆ ಹೊಸದಿಲ್ಲಿಯ ದೇಶದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಒಕ್ಕೂಟದ 2022-23ನೆ ಸಾಲಿನ ಒಟ್ಟು ಐದು ರಾಷ್ಟ್ರೀಯ ಸಾರ್ವಜನಿಕ ಬಸ್ ಸಾರಿಗೆ ಪ್ರಶಸ್ತಿಗಳು ಲಭಿಸಿರುತ್ತವೆ ಎಂದು ಕೆಎಸ್ಸಾರ್ಟಿಸಿ ತಿಳಿಸಿದೆ.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಒಕ್ಕೂಟದ ವ್ಯಾಪ್ತಿಯಲ್ಲಿ ದೇಶದ 62 ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳು ಸದಸ್ಯತ್ವವನ್ನು ಹೊಂದಿವೆ. ಸದರಿ ಒಕ್ಕೂಟವು 13ನೆ ಆಗಸ್ಟ್ 1965ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಕೇಂದ್ರ ಸರಕಾರದ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯದ ನಿರ್ದೇಶನದ ಅನುಸಾರ ಕಾರ್ಯ ನಿರ್ವಹಿಸುತ್ತದೆ

ಈ ಸಂಸ್ಥೆಯು 58 ವರ್ಷಗಳ ಅನುಭವವನ್ನು ಹೊಂದಿದ್ದು, ದೇಶದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಕೆಎಸ್ಸಾರ್ಟಿಸಿಗೆ ‘ಬ್ರ್ಯಾಂಡಿಂಗ್ ಹಾಗೂ ವರ್ಚಸ್ಸು ಅಭಿವೃದ್ಧಿ’ ಉಪಕ್ರಮ ಮತ್ತು ಸಿಬ್ಬಂದಿಗಳ ಕಲ್ಯಾಣಕ್ಕಾಗಿ ಕೈಗೊಂಡಿರುವ ವಿನೂತನ ಉಪಕ್ರಮಕ್ಕಾಗಿ ಎರಡು ಪ್ರಶಸ್ತಿಗಳು ಲಭಿಸಿರುತ್ತದೆ.

ಬಿಎಂಟಿಸಿಗೆ ‘ವಿದ್ಯುತ್ ಚಾಲಿತ ವಾಹನ’ಗಳಾದ ‘ಅಸ್ತ್ರ’ ಕಾರ್ಯಾಚರಣೆಗೊಳಿಸುತ್ತಿರುವ ಉಪಕ್ರಮಕ್ಕೆ ಪ್ರಶಸ್ತಿ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ‘ರಸ್ತೆ ಸಾರಿಗೆ ಸುರಕ್ಷತೆಯ ಉಪಕ್ರಮ’ ಅನುಷ್ಠಾನಕ್ಕಾಗಿ ಪ್ರಶಸ್ತಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ‘ರಸ್ತೆ ಸಾರಿಗೆ ಸುರಕ್ಷತೆ ಪದ್ಧತಿ’ಯ ಅನುಷ್ಠಾನಕ್ಕಾಗಿ ಪ್ರಶಸ್ತಿಯು ಸಿಕ್ಕಿದೆ.

ಪ್ರಶಸ್ತಿ ಪ್ರಧಾನ ಸಮಾರಂಭವು 2024ರ ಮಾರ್ಚ್ 15ರಂದು ಹೊಸದಿಲ್ಲಿಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಒಕ್ಕೂಟದಲ್ಲಿ ನಡೆಯಲಿದ್ದು, ಅಂದು ಕರ್ನಾಟಕ ರಾಜ್ಯದ ರಸ್ತೆ ಸಾರಿಗೆ ಸಂಸ್ಥೆಗಳಿಗೆ ಪ್ರಶಸ್ತಿಗಳನ್ನು ಪ್ರಧಾನ ಮಾಡಲಾಗುವುದು ಎಂದು ಸಂಸ್ಥೆ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News