ಡಿಜಿಟಲ್ ಉಪಕರಣಗಳ ಬಗ್ಗೆ ಎಚ್ಚರವಿರಲಿ:ನ್ಯಾ.ಎನ್.ವಿ.ಅಂಜಾರಿಯಾ

Update: 2024-03-05 17:09 GMT

ಬೆಂಗಳೂರು: ಡಿಜಿಟಲ್ ಉಪಕರಣಗಳಿಂದ ಮಕ್ಕಳ ಮನಸ್ಸು ಕಲುಶಿತವಾಗದಂತೆ ಎಚ್ಚರವಹಿಸಬೇಕು. ಜತೆಗೆ, ಅವರಿಗೆ ಆರೋಗ್ಯಕರ ಭವಿಷ್ಯ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಹೇಳಿದ್ದಾರೆ.

ಮಂಗಳವಾರ ಕರ್ನಾಟಕ ನ್ಯಾಯಾಂಗ ಅಕಾಡೆಮಿಯಲ್ಲಿ ಹೈಕೋರ್ಟಿನ ಬಾಲ ನ್ಯಾಯ ಸಮಿತಿ, ಕರ್ನಾಟಕ ನ್ಯಾಯಾಂಗ ಅಕಾಡೆಮಿ ಹಾಗೂ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸಹಯೋಗದಲ್ಲಿ ಏರ್ಪಡಿಸಿದ್ದ ಆನ್‍ಲೈನ್‍ನಿಂದ ಮಕ್ಕಳ ಮೇಲಾಗುತ್ತಿರುವ ದುಷ್ಪರಿಣಾಮಗಳು ಮತ್ತು ಮಕ್ಕಳ ಸಾಕ್ಷರತೆ  ಕುರಿತು ಹಮ್ಮಿಕೊಳ್ಳಲಾದ ರಾಜ್ಯಮಟ್ಟದ ಸಭೆಯಲ್ಲಿ ಅವರು ಮಾತನಾಡಿದರು.

ಪ್ರಸ್ತುತ ಮೊಬೈಲ್, ಇಂಟರ್ ನೆಟ್‍ನಿಂದ ಮಕ್ಕಳು ಹೊರಜಗತ್ತಿಗೆ ಸುಲಭವಾಗಿ ಸಂಪರ್ಕ ಹೊಂದಬಲ್ಲವರಾಗಿದ್ದಾರೆ. ಅವರಿಗೆ ಈ ಡಿಜಿಟಲ್ ಉಪಕರಣಗಳ ಬಗ್ಗೆ ಕುತೂಹಲ, ಆಸಕ್ತಿ ಹಾಗೂ ಅವಲಂಬನೆ ಹೆಚ್ಚಾಗುತ್ತದೆ. ಅವುಗಳಲ್ಲಿ ಎಷ್ಟು ಸಕಾರಾತ್ಮಕ ಅಂಶಗಳಿವೆಯೋ ಅಷ್ಟೇ ನಕಾರಾತ್ಮಕ ಅಂಶಗಳು ಸಹ ನಮಗೆ ಕಾಣಸಿಗುತ್ತವೆ. ಅವು ನಮ್ಮ ಆಲೋಚನೆ, ಬುದ್ಧಿವಂತಿಕೆಯನ್ನು ಕೆಲವೊಮ್ಮೆ ಬೇರೆಡೆಗೆ ಕೊಂಡೊಯ್ಯುತ್ತದೆ ಎಂದು ಹೇಳಿದರು.

ಅದರಲ್ಲೂ ಮೊಬೈಲ್, ಕಂಪ್ಯೂಟರ್ ಬಳಕೆಯಿಂದ ಮಕ್ಕಳಲ್ಲಿ ಜೀವನಶೈಲಿ ಬದಲಾಗಿ ಪಠ್ಯ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸುವುದು ಸಹ ಕಡೆಮೆಯಾಗುತ್ತಿದೆ. ಕಲಿಕೆ ಕೇವಲ ಮಾಹಿತಿ ಪಡೆಯುವುದಲ್ಲ, ಇದಕ್ಕೆ ತನ್ನದೇ ಆದ ಸವಾಲುಗಳಿವೆ. ಮೊಬೈಲ್ ಬಳಕೆಯಲ್ಲಿ ಕೇವಲ ಕಲಿಕೆಗಷ್ಟೇ ಬಳಸಿಕೊಂಡರೆ ಮಕ್ಕಳ ಭವಿಷ್ಯ ಉತ್ತಮವಾಗುವುದು. ಬಿಡುವಿನ ವೇಳೆಯಲ್ಲಿ ಅವರು ಆಟ, ಸಹಪಾಠಿಗಳ ಒಡನಾಟ, ಪರಿಸರ, ಪ್ರಕೃತಿಯ ಬಾಂಧವ್ಯ ಇನ್ನಿತರ ಚಟುವಟಿಕೆಗಳನ್ನು ಇಟ್ಟುಕೊಂಡರೆ ಅವರು ಮನಸ್ಸು, ಆರೋಗ್ಯ ಉತ್ತಮವಾಗಿರುತ್ತದೆ ಎಂದು ಸಲಹೆ ಮಾಡಿದರು.

ಈ ಸಂದರ್ಭದಲ್ಲಿ ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ವಿಕಲಚೇತನರ ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಡಾ.ಪ್ರಕಾಶ್ ಜಿ.ಸಿ., ಹೈಕೋರ್ಟಿನ ನ್ಯಾಯಮೂರ್ತಿ ಕೆ.ಸೋಮಶೇಖರ್ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News