ಹೈಕೋರ್ಟ್ ಶಿಕ್ಷಣ ಹಕ್ಕು ಕಾಯ್ದೆಯನ್ನು ಎತ್ತಿಹಿಡಿದಿದೆ: ಪ್ರೊ.ನಿರಂಜನಾರಾಧ್ಯ

Update: 2024-03-07 16:31 GMT

ಬೆಂಗಳೂರು: ಐದನೆ ತರಗತಿ ಬೋರ್ಡ್ ಪರೀಕ್ಷೆಗೆ ರಾಜ್ಯ ಸರಕಾರ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್‍ನ ಏಕಸದಸ್ಯ ಪೀಠ ರದ್ದುಗೊಳಿಸಿ, ಶಿಕ್ಷಣ ಹಕ್ಕು ಕಾಯ್ದೆಯ ಆಶಯವನ್ನು ಎತ್ತಿ ಹಿಡಿದಿದೆ ಎಂದು ಶಿಕ್ಷಣದ ಮೂಲಭೂತ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯದ ಸಂಚಾಲಕ ಪ್ರೊ. ನಿರಂಜನಾರಾಧ್ಯ ವಿ.ಪಿ. ತಿಳಿಸಿದ್ದಾರೆ.

ಗುರುವಾರ ಈ ಕುರಿತು ಪ್ರಕಟನೆ ನೀಡಿರುವ ಅವರು, 5 ಹಾಗೂ 8ನೆ ತರಗತಿ ಬೋರ್ಡ್ ಪರೀಕ್ಷೆ ನಡೆಸಲು ಸರಕಾರ ಪ್ರಜಾಸತ್ತಾತ್ಮಕ ಮಾರ್ಗವನ್ನು ಅನುಸರಿಸಿಲ್ಲ. ಹಾಗೂ ಕಾನೂನಿಗೆ ವಿರುದ್ಧವಾಗಿದೆ ಎಂಬ ಹೈಕೋರ್ಟ್‍ನ ಅಭಿಪ್ರಾಯ ಸರಿಯಾಗಿದೆ. ಸರಕಾರ ಕ್ರಮ ಅನುಸರಿಸಿ ಮಾಡಲು ಮುಂದಾದರೂ, ದೇಶದಾದ್ಯಂತ ಈಗಾಗಲೇ ಶಿಕ್ಷಣ ಹಕ್ಕು ಕಾಯ್ದೆಯ ನಿಯಮಗಳನ್ನು ರೂಪಿಸಿರುವುದರಿಂದ ಕರ್ನಾಟಕ ಶಿಕ್ಷಣ ಕಾಯ್ದೆ-1983ಕ್ಕೆ ವಿರುದ್ಧವಾಗುತ್ತದೆ ಎಂದು ತಿಳಿಸಿದ್ದಾರೆ.

ಪರೀಕ್ಷೆಗೆ ಸರಕಾರ ವ್ಯಯ ಮಾಡುತ್ತಿರುವ ಆರ್ಥಿಕ ಹಾಗೂ ಮಾನವ ಸಂಪನ್ಮೂಲವನ್ನು ಮಕ್ಕಳ ಕಲಿಕೆಗೆ ಉಪಯೋಗಿಸಿದರೆ, ಮಕ್ಕಳ ಕಲಿಕೆ ಉತ್ತಮವಾಗುತ್ತದೆ. ಸರಕಾರದ ತನ್ನ ಪ್ರತಿಷ್ಠೆ ಬಿಟ್ಟು ಮಕ್ಕಳ ಹಿತಾಸಕ್ತಿಯನ್ನು ಗೌರವಿಸಬೇಕು. ಶಾಲಾ ಹಂತದಲ್ಲಿ ನಡೆದಿರುವ ಮಕ್ಕಳ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ಆಧಾರದಲ್ಲಿ ಮಕ್ಕಳ ಫಲಿತಾಂಶ ತಿಳಿದು ಮುಂದಿನ ಶೈಕ್ಷಣಿಕ ವರ್ಷದ ಕಲಿಕೆ ಸಿದ್ಧಗೊಳಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

‘ಶಿಕ್ಷಣ ಹಕ್ಕು ಕಾಯ್ದೆಯ ಪ್ರಕಾರ ಮಕ್ಕಳು 8ನೆ ತರಗತಿ ಮುಗಿಸುವವರೆಗೆ ಯಾವುದೇ ಬೋರ್ಡ್ ಪರೀಕ್ಷೆ ಪಾಸ್ ಮಾಡುವ ಅಗತ್ಯತೆಯನ್ನು ತಳ್ಳಿಹಾಕುತ್ತದೆ. ಪರೀಕ್ಷೆ ಎಂದರೆ ನಿರಂತರ ಮೌಲ್ಯಮಾಪನ. ಈಗಾಗಲೇ ನಡೆದಿರುವ ರೂಪಣಾತ್ಮಕ ಮತ್ತು ಸಂಕಲನಾತ್ಮಕ ಪರೀಕ್ಷೆಗಳು ಮಕ್ಕಳ ಕಲಿಕೆಯನ್ನು ಮೌಲ್ಯಮಾಪನ ಮಾಡಲು ಅಗತ್ಯ ದತ್ತಾಂಶಕ್ಕಿಂತ ಹೆಚ್ಚಿನ ವಿವರಗಳನ್ನು ಶಾಲಾ ಹಂತದಲ್ಲಿ ಹೊಂದಿವೆ. ಈ ವಿವರಗಳು ಮಕ್ಕಳ ಮೌಲ್ಯಾಂಕನ ಮಾಡಲು ಹತ್ತಾರು ಬಗೆಯ ಮಾಹಿತಿ ಒದಗಿಸುತ್ತವೆ’

ಪ್ರೊ.ನಿರಂಜನಾರಾಧ್ಯ ವಿ.ಪಿ., ಶಿಕ್ಷಣ ತಜ್ಞ

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News