ಬೆಂಗಳೂರು | ಪಿಎಸ್ಸೈಗೆ ಪ್ರೀತಿಸುವಂತೆ ಬೆದರಿಕೆ ಆರೋಪ: ಸಹಪಾಠಿ ಪಿಎಸ್ಸೈ ಬಂಧನ

Update: 2024-03-14 17:11 GMT

ಬೆಂಗಳೂರು: ಮಹಿಳಾ ಪಿಎಸ್ಸೈ ಜೊತೆಗಿರುವ ಫೋಟೋಗಳನ್ನು ಹಿಡಿದು, ಪ್ರೀತಿಸುವಂತೆ ಬೆದರಿಕೆ ಹಾಕುತ್ತಿದ್ದ ಆರೋಪದಡಿ ಮತ್ತೊಬ್ಬ ಸಹಪಾಠಿ ಪಿಎಸ್ಸೈನನ್ನು ಚಂದ್ರಾಲೇಔಟ್ ಠಾಣಾ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ಸಂಜಯ್ ಕುಮಾರ್(34) ಎಂಬುವನನ್ನು ಬಂಧಿತ ವ್ಯಕ್ತಿ ಆರೋಪಿ ಎಂದು ಗುರುತಿಸಲಾಗಿದೆ. ಈತನ ಸಹಪಾಠಿ 28 ವರ್ಷದ ಮಹಿಳಾ ಪಿಎಸ್ಸೈ ನೀಡಿದ ದೂರಿನನ್ವಯ ನಗರದ ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂಜಯ್ ಕುಮಾರ್ ಕರ್ನಾಟಕ ಕೈಗಾರಿಕಾ ಭದ್ರತಾಪಡೆಯಲ್ಲಿ ಪಿಎಸ್ಸೈ ಆಗಿ ಕೆಲಸ ಮಾಡುತ್ತಿದ್ದರು. ಪಿಎಸ್ಸೈ ತರಬೇತಿ ಪಡೆಯುವಾಗ ಪರಿಚಯವಾಗಿದ್ದ ಸಂಜಯ್, ಮಹಿಳಾ ಪಿಎಸ್ಸೈ ಬಳಿ ಪ್ರೇಮನಿವೇದನೆ ಮಾಡಿಕೊಂಡಿದ್ದರು. ಇದಕ್ಕೆ ಮಹಿಳಾ ಪಿಎಸ್ಸೈ ನಿರಾಕರಿಸಿದ್ದರು. ಭವಿಷ್ಯದಲ್ಲಿ ಯುಪಿಎಸ್‍ಸಿ ಪರೀಕ್ಷೆ ಬರೆಯಲು ಹಣಕಾಸಿನ ಅಗತ್ಯವಿದೆ ಎಂದು ಹೇಳಿ 2020ರಲ್ಲಿ 5.50 ಲಕ್ಷ ರೂ. ಹಣವನ್ನೂ ಪಡೆದುಕೊಂಡಿದ್ದರು. ಓದುವ ನೆಪದಲ್ಲಿ ಹತ್ತಿರವಾಗಿ ಮಹಿಳೆ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಇದೇ ಫೋಟೋಗಳನ್ನಿಡಿದು ಪ್ರೀತಿಸುವಂತೆ ಸಂಜಯ್ ಕುಮಾರ್ ದುಂಬಾಲು ಬಿದ್ದಿದ್ದರು ಎಂದು ಎಫ್‍ಐಆರ್‍ನಲ್ಲಿ ಉಲ್ಲೇಖಿಸಿಲಾಗಿದೆ.

‘ಸಂಜಯ್‍ನ ಪ್ರೀತಿಯನ್ನು ನಿರಾಕರಿಸಿದರೂ ಚಾಕುವಿನಿಂದ ಕೈ ಕೊಯ್ದುಕೊಳ್ಳುವುದಾಗಿ ಬೆದರಿಸಿ ನನ್ನನ್ನು ಕರೆಸಿಕೊಳ್ಳುತ್ತಿದ್ದರು. ಮದ್ಯಪಾನ, ಆನ್‍ಲೈನ್ ಬೆಟ್ಟಿಂಗ್ ಚಟ ಹೊಂದಿರುವುದು ಗಮನಕ್ಕೆ ಬಂದು ನಾನು ಸುಮ್ಮನಿದ್ದೆ. ಸಂಜಯ್ ಬಳಿ ಮಾತನಾಡದೇ ಇದ್ದಾಗ ಅವರು ನನ್ನ ಕರ್ತವ್ಯದ ಸ್ಥಳದಲ್ಲಿ ಸಿಬ್ಬಂದಿಗೆ ಕರೆ ಮಾಡುತ್ತಿದ್ದರು ಎಂದು ದೂರಿದ್ದಾರೆ.

ನನ್ನ ಬ್ಯಾಚ್‍ನವರಿಗೆ ಕರೆಮಾಡಿ ನನ್ನ ಬಗ್ಗೆ ಇಲ್ಲ-ಸಲ್ಲದ ಆರೋಪ ಮಾಡಿದ್ದಾರೆ. ನನ್ನ ಮನೆಯ ಸುತ್ತ ಚಾಕು ಹಿಡಿದು ತಿರುಗಾಡಿ ಜೀವ ಬೆದರಿಕೆ ಹಾಕಿದ್ದಾರೆ. ಕೆಲಸದ ಸ್ಥಳಕ್ಕೆ ಬಂದು ಥಳಿಸಿ ನನಗೆ ತೊಂದರೆ ಕೊಟ್ಟಿದ್ದಾರೆ. ನನ್ನ ಖಾಕಿ ಗೌರವ ಮತ್ತು ನನ್ನ ಘನತೆಗೆ ಚ್ಯುತಿ ತಂದಿದ್ದಾರೆ. ನೀವು ನನ್ನನ್ನು ತಿರಸ್ಕರಿಸಿದರೆ ಅಪಹರಿಸಿಕೊಂಡು ಹೋಗಿ ತಾಳಿ ಕಟ್ಟುವುದಾಗಿ ಹೇಳಿ ಬೆದರಿಕೆಯೊಡ್ಡಿದ್ದಾರೆ. ಮಾ.11ರಂದು ಸಂಜಯ್ ನನ್ನ ಮನೆಗೆ ನುಗ್ಗಿ ನನ್ನ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ' ಎಂದು ಎಫ್‍ಐಆರ್ ನಲ್ಲಿ ಮಹಿಳಾ ಪಿಎಸ್ಸೈ ಆರೋಪಿಸಿದ್ದಾರೆ. ಸದ್ಯ ಚಂದ್ರಾ ಲೇಔಟ್ ಠಾಣೆ ಪೊಲೀಸರು ಪಿಎಸ್ಸೈ ಸಂಜಯ್‍ನನ್ನು ಬಂಧಿಸಿದ್ದು, ವಿಚಾರಣೆ ನಡೆಸಿ ಕಾನೂನು ಕ್ರಮ ಕೈಗೊಂಡಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News