ನೈಜ ಇತಿಹಾಸ ತಿರುಚುವ ಕೆಲಸ ನಡೆಯುತ್ತಿದೆ: ಸಚಿವ ಎಂ.ಸಿ. ಸುಧಾಕರ್

Update: 2024-03-15 15:28 GMT

ಬೆಂಗಳೂರು: ರಾಜಕೀಯ ಪಕ್ಷಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಇತಿಹಾಸ ರಚಿಸಿ, ನೈಜ ಇತಿಹಾಸವನ್ನು ತಿರುಚುವ ಕೆಲಸವನ್ನು ಮಾಡುತ್ತಿವೆ ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಆರೋಪಿಸಿದ್ದಾರೆ. 

ಶುಕ್ರವಾರ ನಗರದ ಸರಕಾರಿ ಕಲಾ ಕಾಲೇಜಿನಲ್ಲಿ ಭಾರತೀಯ ಇತಿಹಾಸ ಅನುಸಂಧಾನ ಪರಿಷತ್ ಹೊಸದಿಲ್ಲಿ, ರಾಜ್ಯ ಪತ್ರಾಗಾರ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ‘ಕರ್ನಾಟಕ ಇತಿಹಾಸ ಪರಿಷತ್ತಿನ ವಾರ್ಷಿಕ ಮಹಾ ಅಧಿವೇಶನ’ದಲ್ಲಿ ಮಾತನಾಡಿದ ಅವರು, ರಾಜಕೀಯ ಅಧಿಕಾರಕ್ಕಾಗಿ ಸಮಾಜದಲ್ಲಿ ಗೊಂದಲ ಸೃಷ್ಠಿಸುವವರು ಹೆಚ್ಚಾಗುತ್ತಿದ್ದಾರೆ. ಇತಿಹಾಸದ ತಪ್ಪು ಮಾಹಿತಿ ನೀಡಲು ವಾಟ್ಸಾಪ್ ವಿವಿಗಳು ಸ್ಥಾಪನೆಯಾಗಿವೆ ಎಂದು ಟೀಕಿಸಿದರು. 

ಚರಿತ್ರೆ ತಿಳಿಯದವರಿಂದ ಆತಂಕ: ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಮಾತನಾಡಿ, ‘ನಾನು ಇತಿಹಾಸದ ವಿದ್ಯಾರ್ಥಿ ಅಲ್ಲ, ಇತಿಹಾಸದ ಅಧ್ಯಾಪಕನೂ ಅಲ್ಲ. ಆದರೆ, ಇತಿಹಾಸದ ಭಾಗವಾಗಿದ್ದೇನೆ. ಚರಿತ್ರೆಯನ್ನು ತಿಳಿಯದವರೇ ಚರಿತ್ರೆಯ ಬಗ್ಗೆ ಹೆಚ್ಚು ಮಾತನಾಡುತ್ತಿರುವುದು ಆತಂಕ ಸೃಷ್ಠಿಸಿದೆ. ನೈಜ ಇತಿಹಾಸವನ್ನು ತಿಳಿಸಲು ಅಧ್ಯಯನಕಾರರು ಮಾತನಾಡುವ ಅಗತ್ಯವಿದೆ. ಚರಿತ್ರೆಯನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳುವ ಕಾಲದಲ್ಲಿ ನಾವಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು. 

ಈ ಸಂದರ್ಭದಲ್ಲಿ ಪರಿಷತ್ ಸದಸ್ಯ ಪುಟ್ಟಣ್ಣ, ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಅಶ್ವತ್ಥನಾರಾಯಣ, ಸರಕಾರಿ ಕಾಲೇಜು ಅಧ್ಯಾಪಕರ ಸಂಘದ ಅಧ್ಯಕ್ಷ ಪ್ರೊ.ಟಿ.ಎಂ.ಮಂಜುನಾಥ, ಪತ್ರಾಗಾರ ಇಲಾಖೆಯ ನಿರ್ದೇಶಕ ಡಾ.ಗವಿಸಿದ್ದಯ್ಯ, ಕೆಪಿಎಸ್‍ಸಿ ಸದಸ್ಯೆ ಕಾವಾಲಮ್ಮ, ಇತಿಹಾಸ ಪರಿಷತ್‍ನ ಅಧ್ಯಕ್ಷ ಪ್ರೊ.ಆರ್.ರಾಜಣ್ಣ,  ಪ್ರೊ.ಐ.ಕೆ.ಪತ್ತಾರ, ಪ್ರೊ.ಪಿ.ಟಿ.ಶ್ರೀನಿವಾಸ ನಾಯಕ, ಕಾಲೇಜು ಶಿಕ್ಷಣ ಇಲಾಖೆಯ ಆಡಳಿತಾಧಿಕಾರಿ ಟಿ.ಆರ್.ಶೋಭಾ, ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಜಿ.ಜಗದೀಶ್, ಪ್ರೊ.ಎಸ್.ಎ.ಬಾರಿ ಮತ್ತಿತರರು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News