‘ಚುನಾವಣಾ ಬಾಂಡ್’ | ಬಿಜೆಪಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

Update: 2024-03-16 14:02 GMT

ಬೆಂಗಳೂರು: ‘ರಾಷ್ಟ್ರೀಯತೆಯ ಬಗ್ಗೆ ಬೊಗಳೆ ಬಿಡುವ ಬಿಜೆಪಿ ಮುಖಂಡರು, ಪಾಕಿಸ್ತಾನ ಮೂಲದ ‘ಹುಬ್ಬಕೋ’ ಸಂಸ್ಥೆಯು ಚುನಾವಣೆ ಬಾಂಡ್ ಖರೀದಿಸಿದೆ. ಅವರಿಂದಲೂ ಬಿಜೆಪಿಯವರು ದೇಣಿಗೆಯನ್ನು ಪಡೆದಿದ್ದಾರೆ. ರಾಜಕೀಯಕ್ಕಾಗಿ ಪಾಕಿಸ್ತಾನವನ್ನು ನಿತ್ಯ ಎಳೆದು ತರುವ ಬಿಜೆಪಿಗರು, ಪಾಕ್ ಮೂಲದ ಸಂಸ್ಥೆಯಲ್ಲಿ ದೇಣಿಗೆ ಪಡೆದಿದ್ದು, ಇಂತಹ ನಕಲಿ ದೇಶಭಕ್ತರು ಬೇಕೆ?’ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

ಶನಿವಾರ ಇಲ್ಲಿನ ಆನಂದ ರಾವ್ ವೃತ್ತದಲ್ಲಿನ ಕಾಂಗ್ರೆಸ್ ಕಚೇರಿ ಆವರಣದಲ್ಲಿನ ಗಾಂಧಿ ಪುತ್ಥಳಿ ಬಳಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಕಾರ್ಯಕರ್ತರು, ಭ್ರಷ್ಟಾಚಾರದ ಮೂಲಕ ಹಣ ಗಳಿಸಿರುವ ಪಕ್ಷವೆಂದರೆ ಅದು ಬಿಜೆಪಿ ಎಂಬುದು ಇದೀಗ ಚುನಾವಣಾ ಬಾಂಡ್ ಅಕ್ರಮದ ಮೂಲಕ ಸಾಬೀತಾಗಿದೆ ಎಂದು ದೂರಿದರು.

ಬಾಂಡ್ ಮುಖೇನ 7ಸಾವಿರ ಕೋಟಿ ರೂ.ಗೂ ಅಧಿಕ ಮೊತ್ತವನ್ನು ಪಡೆದಿರುವ ಬಿಜೆಪಿ ಜಾರಿ ನಿರ್ದೇಶನಲಯ(ಇಡಿ), ಆದಾಯ ತೆರಿಗೆ(ಐಟಿ) ಇಲಾಖೆಯಿಂದ ದಾಳಿಗೆ ಒಳಗಾದ ಸಂಸ್ಥೆಗಳಿಂದ ಹಣ ಪಡೆದಿರುವುದು ಬಿಜೆಪಿಯ ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಮೋದಿ ಸುಳ್ಳು ಘೋಷಣೆ ಎಂದು ಬಹಿರಂಗವಾಗಿದೆ ‘ನಾನು ತಿನ್ನಲ್ಲ, ತಿನ್ನಲು ಬಿಡುವುದಿಲ್ಲ' ಎಂಬುದು, ಇದೀಗ ‘ನಾನು ಹೆಚ್ಚು ತಿಂದು ಇನ್ನೊಬ್ಬರನ್ನು ತಿನ್ನಲು ಬಿಡುತ್ತೇನೆ’ ಎಂಬುದಾಗಿ ಬದಲಾಗಿದೆ ಎಂದು ಮುಖಂಡರು ವಾಗ್ದಾಳಿ ನಡೆಸಿದರು.

ಸರ್ವಾಧಿಕಾರಿ ಮೋದಿ ದುರಾಡಳಿತ ಕೊನೆಗಾಣಬೇಕು. ಲೋಕಸಭಾ ಚುನಾವಣೆಯಲ್ಲಿ ಮೋದಿ ವಿರುದ್ಧ ಜನ ಮತ ಹಾಕಿ ಅವರಿಗೆ ತಕ್ಕ ಪಾಠವನ್ನು ಕಲಿಸಿ, ದೇಶ ಉಳಿಸಬೇಕು ಎಂದು ಮುಖಂಡರು ಮನವಿ ಮಾಡಿದರು. ಈ ವೇಳೆ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್‍ನ ಅಧ್ಯಕ್ಷ ಎಸ್.ಮನೋಹರ್, ಮುಖಂಡರಾದ ಆನಂದ್ ಜಿ., ಜನಾರ್ಧನ್, ಎಲ್.ಜಯಸಿಂಹ, ಬಾಲಕೃಷ್ಣ, ಪ್ರಕಾಶ್, ಹೇಮರಾಜು, ಪುಟ್ಟರಾಜು, ಚಂದ್ರಶೇಖರ್, ಕೆ.ಟಿ.ನವೀನ್, ಉಮೇಶ್, ಆನಂದ್ ಕುಮಾರ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News