ನಗರ್ತಪೇಟೆ ಘಟನೆ | ಗಲಭೆ ಎಬ್ಬಿಸಲು ಯತ್ನಿಸಿದ ಆರೋಪ : ಬಿಜೆಪಿ ಸಂಸದರು, ಶಾಸಕರುಗಳ ಮೇಲೆ ಕ್ರಮಕ್ಕೆ ಚುನಾವಣಾ ಆಯುಕ್ತರಿಗೆ ದೂರು

Update: 2024-03-20 14:50 GMT

ಬೆಂಗಳೂರು: ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ನಗರ್ತಪೇಟೆಯಲ್ಲಿ ಕೋಮುದ್ವೇಷ ಹೆಚ್ಚಿಸಿ ಗಲಭೆ ಎಬ್ಬಿಸಲು ಯತ್ನಿಸಿದ ಬಿಜೆಪಿ ಸಂಸದರು ಮತ್ತು ಶಾಸಕರುಗಳ ಮೇಲೆ ಕ್ರಮ ಜರುಗಿಸುವಂತೆ ಒತ್ತಾಯಿಸಿ ‘ಜಾಗೃತ ನಾಗರಿಕರು-ಕರ್ನಾಟಕ’ ವತಿಯಿಂದ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು ಸಲ್ಲಿಸಲಾಗಿದೆ.

ಬುಧವಾರ ಜಾಗೃತ ನಾಗರಿಕರು ಕರ್ನಾಟಕದ ನಿಯೋಗವು ಮುಖ್ಯ ಚುನಾವಣಾ ಅಧಿಕಾರಿಗಳಿಗೆ ದೂರು ನೀಡಿದ್ದು, ‘ಬೆಂಗಳೂರಿನ ನಗರ್ತಪೇಟೆ ಪ್ರದೇಶದಲ್ಲಿ ನಡೆಯಿತೆನ್ನಲಾದ ಒಂದು ಘಟನೆಯನ್ನಾಧರಿಸಿ ಬಿಜೆಪಿಯ ಸಂಸದ ತೇಜಸ್ವಿ ಸೂರ್ಯ, ಕೇಂದ್ರದ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಶಾಸಕ ಎಸ್. ಸುರೇಶ್ ಕುಮಾರ್ ಸೇರಿದಂತೆ ಬಿಜೆಪಿಯ ಕೆಲ ಕಾರ್ಯಕರ್ತರು ನಗರ್ತಪೇಟೆಯಲ್ಲಿ ಸಾವಿರಾರು ಜನರನ್ನು ಸೇರಿಸಿ ಪ್ರತಿಭಟನೆ ನಡೆಸಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಇದು ಆತಂಕಕಾರಿ ವಿಷಯವೂ ಹೌದು’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

‘ನಗರ್ತಪೇಟೆ ಪ್ರಕರಣ ವಿಚಾರವಾಗಿ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ದೂರಿನಲ್ಲಿ ಯಾವುದೇ ಧಾರ್ಮಿಕ ಘಟನೆಗೆ ಧಾರ್ಮಿಕ ನೆಲೆಯ ಗಲಾಟೆಗಳ ಕುರಿತು ಉಲ್ಲೇಖವಿಲ್ಲ. ಅಲ್ಲದೇ ಅಂತಹ ಯಾವ ಘಟನೆಗಳು ನಡೆದಿಲ್ಲ ಎಂಬ ಪೋಲೀಸರ ಹೇಳಿಕೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಅಲ್ಲಿ ಯಾವುದೇ ಇಂತಹ ಘಟನೆ ನಡೆದಿದ್ದರೂ ಅದರ ಗಹನತೆಯನ್ನಾಧರಿಸಿ ಪೋಲೀಸರು ಕ್ರಮ ಕೈಗೊಳ್ಳುವುದು ನೆಲದ ಕಾನೂನಿನ ಪ್ರಕಾರ ನಡೆಯಬೇಕು. ಆದರೆ ನಡೆದ ಘಟನೆಗೆ ಕೋಮುವಾದದ ಬಣ್ಣ ಬಳಿದು ಅದನ್ನು ಕೋಮುದ್ವೇಷ ಹರಡಲು ಸಂಸದ ತೇಜಸ್ವಿ ಸೂರ್ಯ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ.

‘ಮಾ.19ರಂದು ನಗರ್ತಪೇಟೆಯ ಬೀದಿಗಳಲ್ಲಿ ಹಿಂದೂ ಜಾಗರಣ ವೇದಿಕೆ ಹಾಗೂ ಭಜರಂಗ ದಳದ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ ಮತ್ತು ಆ ಪ್ರತಿಭಟನೆಯಲ್ಲಿ ಸಚಿವೆ ಶೋಭಾ ಕರಂದ್ಲಾಜೆ, ಶಾಸಕ ಸುರೇಶ್ ಕುಮಾರ್, ಸಂಸದ ತೇಜಸ್ವಿ ಸೂರ್ಯ ಭಾಗವಹಿಸಿ, ಪ್ರತಿಭಟನಾಕಾರರು ರಸ್ತೆಯ ಮೇಲೆ ಹನುಮಾನ್ ಚಾಲೀಸ್ ಪಠಣ ಮಾಡಲು ಕುಳಿತಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ದೇಶದಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಲ್ಲಿದೆ. ಇಂತಹ ಸಂದರ್ಭದಲ್ಲಿ ಜನಪ್ರತಿನಿಧಿಗಳು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಆದರೆ ಕೋಮುದ್ವೇಷವನ್ನು ಹೆಚ್ಚಿಸುವ ರೀತಿ ಪ್ರಚೋದನಕಾರಿಯಾಗಿ ಮಾತನಾಡಿರುವುದು ಶಿಕ್ಷಾರ್ಹ ಅಪರಾಧ. ಕೂಡಲೇ ಕ್ರಮ ಜರುಗಿಸಬೇಕೆಂದು ‘ಜಾಗೃತ ಕರ್ನಾಟಕ’ದ ನಿಯೋಗ ದೂರಿನಲ್ಲಿ ಒತ್ತಾಯಿಸಿದೆ.

ನಿಯೋಗದಲ್ಲಿ ‘ದ್ವೇಷ ಮಾತುಗಳ ವಿರುದ್ಧ ಅಭಿಯಾನ’ ತಂಡದ ಸದಸ್ಯರಾದ ಪ್ರೊ.ಎಸ್.ಜಿ. ಸಿದ್ದರಾಮಯ್ಯ, ವಿಮಲಾ ಕೆ.ಎಸ್., ಮಾವಳ್ಳಿ ಶಂಕರ್, ಬಿ.ಶ್ರೀಪಾದ ಭಟ್, ಡಾ.ಬಂಜಗೆರೆ ಜಯಪ್ರಕಾಶ್, ಟಿ.ಸುರೇಂದ್ರ ರಾವ್, ದಿನೇಶ್ ಅಮಿನ್ ಮಟ್ಟು, ಜಾಣಗೆರೆ ವೆಂಕಟರಾಮಯ್ಯ ಸೇರಿದಂತೆ ಹಲವರು ಇದ್ದರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News