ಖಾಸಗಿ ಆಸ್ಪತ್ರೆಗಳಲ್ಲಿ ಭ್ರೂಣ ಹತ್ಯೆ ಕುರಿತು ತನಿಖೆ‌ ನಡೆಸಲು ತಂಡ ರಚನೆ

Update: 2024-03-22 12:32 GMT

ಬೆಂಗಳೂರು: ಹೊಸಕೋಟೆ ಹಾಗೂ ನೆಲಮಂಗಲ ಪಟ್ಟಣಗಳಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಭ್ರೂಣ ಹತ್ಯೆ, ಕಾನೂನು ಬಾಹಿರ ಗರ್ಭಪಾತ ಪ್ರಕರಣಗಳ ಕುರಿತು ಕೂಲಂಕಷವಾಗಿ ಪರಿಶೀಲಿಸಿ ತನಿಖೆ ನಡೆಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಯೋಜನಾ ನಿರ್ದೇಶಕ(ಆರ್ ಸಿಎಚ್)ರ ನೇತೃತ್ವದಲ್ಲಿ ತನಿಖಾ ತಂಡ ರಚನೆ ಮಾಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಯುಕ್ತರು ಆದೇಶ ಹೊರಡಿಸಿದ್ದಾರೆ.

ಈ ಪಟ್ಟಣಗಳಲ್ಲಿ ಪಿಸಿ, ಪಿಎನ್‍ಡಿಟಿ ಮತ್ತು ಎಂಟಿಪಿ ಕಾಯ್ದೆ ಉಲ್ಲಂಘನೆ, ಖಾಸಗಿ ಆಸ್ಪತ್ರೆಗಳಲ್ಲಿ ಭ್ರೂಣ ಹತ್ಯೆ, ಕಾನೂನು ಬಾಹಿರ ಗರ್ಭಪಾತ ಪ್ರಕರಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಮತ್ತು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗಿ, ಅಹವಾಲುಗಳನ್ನು ಸಲ್ಲಿಸಿಕೊಂಡಿರುವುದರಿಂದ ಈ ಕುರಿತು ಕೂಲಂಕಷವಾಗಿ ಪರಿಶೀಲಿಸಿ, ತನಿಖೆ ನಡೆಸುವಂತೆ ಆದೇಶಿಸಲಾಗಿದೆ.

ತನಿಖಾ ತಂಡದಲ್ಲಿ ಯೋಜನಾ ನಿರ್ದೇಶಕರೊಂದಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಉಪ ನಿರ್ದೇಶಕರು(ವೈದ್ಯಕೀಯ/ಪಿಸಿ ಪಿಎನ್‍ಡಿಟಿ) ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಉಪ ನಿರ್ದೇಶಕರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ. ಈ ತಂಡವು ಆಸ್ಪತ್ರೆಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಗೆ ಭೇಟಿ ನೀಡಿ ಎಲ್ಲ ಅಂಶಗಳ ಕುರಿತು ವಾಸ್ತವಾಂಶದ ತನಿಖೆ ನಡೆಸಿ ಸೂಕ್ತ ದಾಖಲೆಗಳೊಂದಿಗೆ ವಿವರವಾದ ವರದಿಯನ್ನು ಮಾ.26ರಂದು ಆಯುಕ್ತಾಲಯಕ್ಕೆ ಸಲ್ಲಿಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News