ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಬಂಧನಕ್ಕೆ ಎಎಪಿ ಮಾಧ್ಯಮ ಸಂಚಾಲಕ ಜಗದೀಶ್ ಸದಂ ಒತ್ತಾಯ

Update: 2024-03-23 16:39 GMT

ಬೆಂಗಳೂರು: ಅಬಕಾರಿ ನೀತಿಗೆ ಸಂಬಂಧಿಸಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿ ಪಿ.ಶರತ್ ಚಂದ್ರ ರೆಡ್ಡಿ ಅವರ ಅರಬಿಂದೋ ಫಾರ್ಮಾ ಕಂಪೆನಿಯು ಚುನಾವಣಾ ಬಾಂಡ್‍ಗಳ ಮೂಲಕ ಬಿಜೆಪಿಗೆ ಕೋಟ್ಯಂತರ ರೂ.ದೇಣಿಗೆ ನೀಡಿದ್ದು ಬಹಿರಂಗಗೊಂಡಿದೆ. ಹೀಗಾಗಿ ಬಿಜೆಪಿ ವಿರುದ್ಧ ಪ್ರಕರಣ ದಾಖಲಿಸಿ ಅದರ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾರನ್ನು ಬಂಧಿಸಬೇಕು ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ.ಸದಂ ಒತ್ತಾಯಿಸಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿಲ್ಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಅನೇಕ ಈ.ಡಿ ದಾಳಿಗಳು ಮತ್ತು ಎರಡು ವರ್ಷಗಳ ಸುದೀರ್ಘ ತನಿಖೆ ಹೊರತಾಗಿಯೂ ಯಾವುದೇ ಎಎಪಿ ನಾಯಕರ ಬಳಿಯಾಗಲಿ, ಕಾರ್ಯಕರ್ತರ ಬಳಿಯಾಗಲಿ ಒಂದೇ ಒಂದು ರೂಪಾಯಿ ಅಕ್ರಮ ಹಣವನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ ಎಂದು ತಿಳಿಸಿದರು.

ತಪ್ಪಿತಸ್ಥರು ಎನ್ನಲು ಅವರ ಬಳಿ ಪುರಾವೆಗಳೂ ಇಲ್ಲ. ನಡೆದಿರದ ಭ್ರಷ್ಟಾಚಾರವನ್ನು ನಡೆದಿದೆ ಎಂದು ಸುಳ್ಳಾಗಿ ಬಿಂಬಿಸಿ ಎದುರಾಳಿಯಾಗಿ ನಿಂತಿರುವ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರನ್ನು ಹತ್ತಿಕ್ಕುವ ಪ್ರಯತ್ನವನ್ನು ಪ್ರಧಾನಿ ನರೇಂದ್ರ ಮೋದಿ ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಅರಬಿಂದೋ ಫಾರ್ಮಾ ಒಟ್ಟು 52 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್‍ಗಳನ್ನು ಖರೀದಿಸಿದ್ದು, ಅದರಲ್ಲಿ 34.5 ಕೋಟಿ ರೂ. ಬಿಜೆಪಿ ಪಾಲಾಗಿದೆ. ಭಾರತ್ ರಾಷ್ಟ್ರ ಸಮಿತಿಗೆ 15 ಕೋಟಿ ರೂ. ಹಾಗೂ ತೆಲುಗು ದೇಶಂ ಪಕ್ಷಕ್ಕೆ 2.5 ಕೋಟಿ ದೇಣಿಗೆ ನೀಡಿದೆ ಎಂದು ಜಗದೀಶ್ ವಿ.ಸದಂ ತಿಳಿಸಿದರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News