ದೇಶವನ್ನು ಕಟ್ಟಿದವರು ತುಪ್ಪ ತಿಂದವರಲ್ಲ, ಮಾಂಸ ತಿಂದವರು : ಪ್ರೊ.ಎಲ್.ಎನ್.ಮುಕುಂದರಾಜ್

Update: 2024-05-12 17:47 GMT

ಬೆಂಗಳೂರು : ಎಲ್ಲ ತಳ ಸಮುದಾಯಗಳಲ್ಲಿ ಪ್ರತಿಭಾವಂತರು ಇದ್ದಾರೆ. ಈ ದೇಶವನ್ನು ಕಟ್ಟಿದವರು ತುಪ್ಪ ತಿಂದವರಲ್ಲ, ಮಾಂಸ ತಿಂದವರು ದೇಶವನ್ನು ಕಟ್ಟಿದ್ದಾರೆ ಎಂದು ಕನ್ನಡ ಸಾಹಿತ್ಯ ಅಕಾಡಮಿಯ ನಿಯೋಜಿತ ಅಧ್ಯಕ್ಷ ಪ್ರೊ.ಎಲ್.ಎಲ್.ಮುಕುಂದರಾಜ್ ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ನಗರದ ಚಾಮರಾಜಪೇಟೆಯಲ್ಲಿರುವ ಕಸಾಪ ಅಕ್ಕ ಮಹಾದೇವಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಾ.ನಾ.ರಮೇಶ್ ಅವರ ‘ನನಸುಗಾರನ ಸ್ವಗತ’-ಸಾಗಿ ಸರಿದ ಬದುಕಿನ ಸ್ಮರಣೆಗಳು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾ.ನಾ. ರಮೇಶ್ ಅವರು ತಳ ಸಮುದಾಯದಲ್ಲಿ ಹುಟ್ಟಿರುವುದರಿಂದ ಸಹಜವಾಗಿತಯೇ ಪ್ರತಿಭೆಯಿದೆ. ಅದಕ್ಕಾಗಿ ಕುರುಬ ಸಮುದಾಯ ಮತ್ತು ಹಿಂದುಳಿದ ಎಲ್ಲ ಸಮುದಾಯಗಳ ಕುರಿತು ಈಗಾಗಲೇ ಕೆಲವು ಅಧ್ಯಯನಗಳು ನಡೆದಿವೆ. ಆದರೆ ಇನ್ನೂ ದೀರ್ಘವಾದ ಅಧ್ಯಯನಗಳು ನಡೆಯಬೇಕು ಎಂದು ಹೇಳಿದರು.

ತಳ ಸಮುದಾಯಗಳ ಏಳಿಗೆಗೆ ಕಾರಣರಾದ ಬಸವಣ್ಣ ಹುಟ್ಟಿದ ದಿನವನ್ನು ಕೇವಲ ದನಗಳನ್ನು ಪೂಜಿಸುಂತೆ ಮಾಡಿ ಜನರ ತಲೆಯಿಂದ ಬಸವಣ್ಣರನ್ನು ತಗೆಯು ಕೆಲಸ ಮಾಡಲಾಗಿದೆ. ಮುಂದಿನ ದಿನಗಳಲ್ಲಾದರೂ ಯುವ ಪೀಳಿಗೆ ಬಸವಣ್ಣ ಅವರ ಕುರಿತು ಚಿಂತನೆ ನಡೆಸಬೇಕು. ಒಬ್ಬರ ಆತ್ಮಕತೆಯನ್ನು ಇತರರು ಯಾಕೆ ಓದಬೇಕು. ಎಂದರೆ ಅದರಿಂದ ಪ್ರೇರಣೆ ಸಿಗಬಹುದು ಎಂಬ ನಂಬಿಕೆಯಿಂದ. ಈ ನಿಟ್ಟಿನಲ್ಲಿ ಸಾ.ನಾ.ರಮೇಶ್ ಅವರ ಆತ್ಮಕಥೆ ಪ್ರೇರಣೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಬರಹಗಾರ ಯೋಗೇಶ್ ಮಾಸ್ಟರ್ ಮಾತನಾಡಿ, ಸಾ.ನಾ.ರಮೇಶ್ ಅವರು ಮೇಕೆಯ ಗುಣಲಕ್ಷಣಗಳನ್ನು ಬೆಳೆಸಿಕೊಂಡು ತಾಜಾತನವನ್ನು ಹುಡುಕಿದವರು. ಆರ್ಕಿಸ್ಟಕ್ಚರ್ ಪದದ ಅರ್ಥವೇ ಗೊತ್ತಿರದ ಹಳ್ಳಿಯ ಹುಡುಗನೊಬ್ಬ ದೊಡ್ಡ ವಾಸ್ತುಶಿಲ್ಪಿಯಾಗಿ ನಂತರ ಉದ್ಯಮಿಯಾಗಿ ಪರಿವರ್ತನೆಯಾಗಿರುವುದು ವಿಶಿಷ್ಟ ಸಂಗತಿ. ಸೃಜನಶೀಲತೆಯೆನ್ನುವುದು ತಾನಾಗಿಯೇ ಸೃಜಿಸುತ್ತದೆ. ಅದನ್ನು ನಾವು ಕಂಡುಕೊಳ್ಳಬೇಕು ಎಂದು ಹೇಳಿದರು.

ಲೇಖಕಿ ಡಾ.ವಸುಂಧರಾ ಭೂಪತಿ ಮಾತನಾಡಿ, ಬರಹಗಾರನ ವ್ಯಕ್ತಿತ್ವ ಆತ್ಮಕಥನದ ಮೂಲಕ ವ್ಯಕ್ತವಾಗುತ್ತದೆ. ಅದರಲ್ಲಿ ಅನುಭವವೇ ಮೂಲ ದ್ರವ್ಯವಾಗಿರುತ್ತದೆ. ನನಸುಗಾರನ ಸ್ವಗತ ಪುಸ್ತಕ ಕೇವಲ ಸಾ.ನಾ.ರಮೇಶ್ ಅವರ ಪಯಣ ಮಾತ್ರವಲ್ಲದೇ ಒಂದು ತಲೆಮಾರಿನ ರಾಜಕೀಯ, ಸಾಂಸ್ಕೃತಿಕ ಚರಿತ್ರೆಯನ್ನು ಒಳಗೊಂಡಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಅವರ ‘ನನಸುಗಾರನ ಸ್ವಗತ’ - ಸಾಗಿ ಸರಿದ ಬದುಕಿನ ಸ್ಮರಣೆಗಳು ಪುಸ್ತಕದ ಲೇಖಕ ಸಾ.ನಾ.ರಮೇಶ್, ಜನಪದ ಹಾಡುಗಾರ ಮೋಹನ್ ಕುಮಾರ್, ಪ್ರಕಾಶಕಿ ಕೈವಲ್ಯ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News