ಸಾಮಾಜಿಕ ಅಭಿಪ್ರಾಯ ರೂಪಿಸುವಲ್ಲಿ ಮಾಧ್ಯಮಗಳ ಪಾತ್ರ ಮುಖ್ಯ : ದಯಾನಂದ

Update: 2024-05-21 15:35 GMT

ಬೆಂಗಳೂರು : ಸಮೂಹ ಮಾಧ್ಯಮವು ಇಂದಿನ ದಿನಗಳಲ್ಲಿ ಜನರನ್ನು ತಲುಪುವ ಪರಿಣಾಮಕಾರಿ ಮಾಧ್ಯಮ. ಹಲವರನ್ನು ಪ್ರಭಾವಿಸುವ ಹಾಗೂ ಸಾಮಾಜಿಕ ಅಭಿಪ್ರಾಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಕತೆಗಾರ ದಯಾನಂದ ಅಭಿಪ್ರಾಯಪಟ್ಟಿದ್ದಾರೆ.

ಮಂಗಳವಾರ ನಗರದ ಎಚ್‍ಎಸ್‍ಆರ್ ಬಡಾವಣೆಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗ ಮತ್ತು ಕನ್ನಡ ಸಂಘದ ವತಿಯಿಂದ ಆಯೋಜಿಸಿದ್ದ ಸಮೂಹ ಮಾಧ್ಯಮ ಕೌಶಲ್ಯ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಪ್ರತಿ ನಿಮಿಷವು ಹೊಸ ಸುದ್ದಿಗಳನ್ನು ತಿಳಿಸುವುದರೊಂದಿಗೆ ಹೊಸ ತಂತ್ರಜ್ಞಾನಕ್ಕೆ ನಮ್ಮನ್ನು ತೆರೆದು ಕೊಳ್ಳುವಂತೆ ಮಾಡುತ್ತದೆ ಎಂದು ಹೇಳಿದರು.

ಸುದ್ದಿಗಳನ್ನು ಸರಿಯಾದ ಕ್ರಮದಲ್ಲಿ ಅರ್ಥೈಸಿಕೊಳ್ಳಬೇಕಾದ ಸಾಮಾಜಿಕ ಹೊಣೆಗಾರಿಕೆ ನಮ್ಮೆಲ್ಲರ ಮೇಲಿರುತ್ತದೆ. ವಿದ್ಯಾರ್ಥಿಗಳು ಸಾಮಾಜಿಕ ಎಚ್ಚರದೊಂದಿಗೆ ಮಾದ್ಯಮಗಳೊಂದಿಗೆ ಒಡನಾಡ ಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಕನ್ನಡ ಸಂಘದ ಸಂಚಾಲಕಿ ಡಾ.ಲಕ್ಷ್ಮಿ ಕೆ. ಮಾತನಾಡಿ, ಸಮೂಹ ಮಾಧ್ಯಮಗಳು ಸಾಮಾಜಿಕ ಎಚ್ಚರವನ್ನು ಕಾಯ್ದು ಕೊಳ್ಳುವಲ್ಲಿ ವಿಫಲವಾಗಿದ್ದು, ಯುವಜನರು ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಳ್ಳುವುದರ ಮೂಲಕ ಸಾಮಾಜಿಕ ನ್ಯಾಯ ಮತ್ತು ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯಬೇಕಾಗಿದೆ ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಚಂದ್ರಕಲಾ ಎಂ., ಮಂಜುನಾಥ ಎಂ., ಡಾ.ನರ್ಮದಾ, ನಂದಕುಮಾರ್ ಬಿ.ಎ., ಪಲ್ಲವಿ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News