ಶಾಸಕ ಹರೀಶ್ ಪೂಂಜ ಬಂಧನ ವಿಚಾರ | ಹೈಡ್ರಾಮದ ಸ್ಪಷ್ಟೀಕರಣ ನೀಡುವಂತೆ ಕೋರಿ ಡಿಜಿಪಿಗೆ ಮನವಿ

Update: 2024-05-24 17:54 GMT

ಬೆಂಗಳೂರು: ಪೊಲೀಸ್ ಅಧಿಕಾರಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಠಾಣೆಗೆ ಬೆಂಕಿ ಹಚ್ಚುತ್ತೇವೆಂದು ಪ್ರಚೋದನೆಯ ಭಾಷಣ ಮಾಡಿದ ಶಾಸಕ ಹರೀಶ್ ಪೂಂಜ ಬಂಧನಕ್ಕೆ ಸಂಬಂಧಿಸಿದಂತೆ ನಡೆದ ಹೈಡ್ರಾಮ ವಿಚಾರಕ್ಕೆ ಸ್ಪಷ್ಟೀಕರಣದ ಜತೆಗೆ ಪೊಲೀಸ್ ಇಲಾಖೆಯ ಗೌರವವನ್ನು ರಕ್ಷಿಸುವಂತೆ ಕೋರಿ ಸಾಮಾಜಿಕ ಕಾರ್ಯಕರ್ತ ಎನ್.ಹನುಮೇಗೌಡ ಎಂಬುವರು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ ಅವರಿಗೆ ಮನವಿ ಪತ್ರ ನೀಡಿದ್ದಾರೆ.

ಕಲ್ಲು ಗಣಿ ವಿಚಾರಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ತಾಲೂಕಿನ ವ್ಯಕ್ತಿಯೊಬ್ಬನನ್ನು ಬಂಧಿಸಿದ ಕಾರಣಕ್ಕಾಗಿ ಪೊಲೀಸ್ ಠಾಣೆಗೆ ನುಗ್ಗಿ ಅಪರಾಧಿಗೆ ಬೆಂಬಲಿಸಿ ರೌಡಿಸಂ ಮಾಡಿದ ಶಾಸಕ ಹರೀಶ್ ಪೂಂಜ ವಿರುದ್ಧ ಸರಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಕ್ಕೆ ಎರಡು ಪ್ರಕರಣಗಳಲ್ಲಿ ದೂರು ದಾಖಲಾಗಿರುವ ಬಗ್ಗೆ ಮಾಧ್ಯಮದಲ್ಲಿ ವರದಿಯಾಗಿದೆ.

ಶಾಸಕ ಎಂಬ ಕಾರಣಕ್ಕೆ ಆತನನ್ನು ಬಂಧಿಸಲು ವಿಳಂಬ ಮಾಡಿದ್ದರಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಪ್ರತಿಭಟನೆ ಕೂಡ ಮಾಡಿದ್ದು ಇದಕ್ಕೆ ಅವಕಾಶ ಕೊಟ್ಟ ಪೊಲೀಸ್ ಇಲಾಖೆ ಹೊಣೆಗಾರರಲ್ಲವೇ ಎಂದು ಪತ್ರದಲ್ಲಿ ಪ್ರಶ್ನಿಸಿದ್ದಾರೆ.

ಶಾಸಕ ಹರೀಶ್ ಪೂಂಜ ಬಂಧನಕ್ಕೆ ಪೊಲೀಸರು ಶಾಸಕರ ಮನೆ ಬಳಿ ಹೋದಾಗ ಅವರು ಠಾಣೆಗೆ ಬರಲಾರೆ ಎಂದರು. ಈ ಪ್ರಕರಣದಲ್ಲಿ ಬಂಧಿಸುವ ಅಗತ್ಯ ಇರಲಿಲ್ಲವೇ, ಬಂಧಿಸುವ ಅಗತ್ಯ ಇಲ್ಲವಾದಲ್ಲಿ ಕೇವಲ ನೋಟೀಸ್ ನೀಡಿ ಬರಬಹುದಿತ್ತಲ್ಲವೇ ಎಂದು ಎನ್.ಹನುಮೇಗೌಡ ಪತ್ರದಲ್ಲಿ ಪ್ರಶ್ನಿಸಿದ್ದಾರೆ.

ಪೊಲೀಸ್ ಅಧಿಕಾರಿಗಳು ರಾಜಕಾರಣಿಗಳಿಗೆ ನಡುಬಗ್ಗಿಸುತ್ತಾರೆ, ಗುಲಾಮರಂತೆ ವರ್ತಿಸುತ್ತಾರೆ ಎಂಬಿತ್ಯಾದಿ ಅಪವಾದಗಳು ಈಗಾಗಲೇ ಅಧಿಕಾರಿ, ಸಿಬ್ಬಂದಿಗಳ ಮೇಲೆ ಇರುವಾಗ ಈ ಘಟನೆಯು ರಾಜ್ಯದ ಜನತೆಗೆ ಯಾವ ಸಂದೇಶ ಕೊಡುತ್ತದೆ ಎಂದು ಪತ್ರದಲ್ಲಿ ಅವರು ತಿಳಿಸಿದ್ದಾರೆ.

ಇನ್ಮುಂದೆ ಪೊಲೀಸ್ ಠಾಣೆಗೆ ನುಗ್ಗಿ ದಾಂದಲೆ, ರೌಡಿಸಂ ಮಾಡಿದರೆ ಅವರನ್ನು ಬಂಧಿಸುವುದಿಲ್ಲವೇ, ಶಾಸಕ ಹರೀಶ್ ಪೂಂಜರನ್ನು ಬಂಧಿಸದೆ ಠಾಣೆಗೆ ಬರುವಂತೆ ಅವಕಾಶ ಕೊಟ್ಟಂತೆ ಚುನಾಯಿತ ಎಲ್ಲರಿಗೂ ಇನ್ಮುಂದೆ ಅವಕಾಶ ಕೊಡುತ್ತೀರಾ, ಹಾಗಾದಲ್ಲಿ ಸಂವಿಧಾನದ ಆಶಯಗಳಿಗೆ ವ್ಯತಿರಿಕ್ತ ಆಗುತ್ತದೆಯಲ್ಲವೇ ಎಂದು ಎನ್.ಹನುಮೇಗೌಡ ಪತ್ರದಲ್ಲಿ ಪ್ರಶ್ನಿಸಿದ್ದಾರೆ.

ಸಾರ್ವಜನಿಕರಿಗೆ ಪೊಲೀಸರ ನಡವಳಿಕೆಯ ಕುರಿತಾಗಿ ಸ್ಪಷ್ಠೀಕರಣದ ಅವಶ್ಯಕತೆಯಿದ್ದು, ಡಿಜಿಪಿ ಅಲೋಕ್ ಮೋಹನ್ ಅವರು ಯಾರನ್ನು ಯಾವಾಗ ಯಾವ ಪ್ರಕರಣಗಳಲ್ಲಿ ಬಂಧಿಸಬೇಕೆಂಬ ನಮ್ಮ ಪ್ರಶ್ನೆಗಳಿಗೆ ಸ್ಪಷ್ಠೀಕರಣದ ಜತೆಗೆ ಏನು ಮಾಡಬೇಕು, ಏನು ಮಾಡಬಾರದು ಎಂಬ ವಿಷಯಗಳನ್ನು ಠಾಣಾಧಿಕಾರಿಗಳಿಗೆ, ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ಸುತ್ತೋಲೆ ಕಳುಹಿಸಬೇಕು ಹಾಗೂ ಸಾರ್ವಜನಿಕ ಪ್ರಕಟನೆ ಹೊರಡಿಸಬೇಕು ಎಂದು ಎನ್.ಹನುಮೇಗೌಡ ಪತ್ರದಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News