ಪ್ರಜ್ವಲ್ ರೇವಣ್ಣ ಪ್ರಕರಣ | ಸಂತ್ರಸ್ತೆಯರಿಗೆ ಸಿಎಂ, ಡಿಸಿಎಂ ಧೈರ್ಯ ತುಂಬಲಿ : ಅಕ್ಕೈ ಪದ್ಮಶಾಲಿ

Update: 2024-05-27 14:45 GMT

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಕೂಡಲೇ ಹಾಸನಕ್ಕೆ ತೆರಳಿ ಪ್ರಕರಣದಲ್ಲಿನ ಸಂತ್ರಸ್ತೆಯರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ ಆಗ್ರಹಿಸಿದ್ದಾರೆ.

ಸೋಮವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ‘ನಾವೆದ್ದು ನಿಲ್ಲದಿದ್ದರೆ’ ವತಿಯಿಂದ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜ್ವಲ್‍ನ ಜಾಗದಲ್ಲಿ ಯಾರಾದರೂ ಸಾಮಾನ್ಯ ವ್ಯಕ್ತಿ ಇದ್ದರೆ, ಒಂದು ದಿನದಲ್ಲಿ ಬಂಧಿಸಲಾಗುತ್ತಿತ್ತು. ಆದರೆ ಪ್ರಜ್ವಲ್ ಪ್ರಭಾವಿಯಾದ ಕಾರಣ ಇದುವರೆಗೂ ಬಂಧಿಸಿಲ್ಲ ಎಂದು ದೂರಿದರು.

ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಖಂಡಿಸಿ ಮೇ.30ರಂದು ಹಾಸನದಲ್ಲಿ ಬೃಹತ್ ಹೋರಾಟವನ್ನು ರೂಪಿಸಲಾಗಿದೆ. ಈ ಹೋರಾಟವು ಅತ್ಯಾಚಾರಿಗಳ ವಿರುದ್ಧ, ಕೇಂದ್ರ ಸರಕಾರ ವಿರುದ್ಧ, ಎಲ್ಲವನ್ನೂ ತಿಳಿದು ಮೌನವಾಗಿದ್ದವರ ವಿರುದ್ಧ ನಡೆಯಲಿರುವ ಹೋರಾಟವಾಗಿದೆ. ಜತೆಗೆ ಸಂತ್ರಸ್ತ ಮಹಿಳೆಯರಿಗೆ ನೈತಿಕ ಸ್ಥೈರ್ಯ ನೀಡುವ ಉದ್ದೇಶವಿದೆ ಎಂದು ಅವರು ಅಭಿಪ್ರಾಯಪಟ್ಟರು.

ಹೋರಾಟಗಾರ್ತಿ ಕೆ.ಎಸ್.ವಿಮಲಾ ಮಾತನಾಡಿ, ‘ಈ ಹೋರಾಟ ಕರ್ನಾಟಕ ರಾಜ್ಯಕ್ಕೆ ಮಾತ್ರ ಸೀಮಿತವಾಗಿರದೇ ದೇಶದ ಹಲವು ರಾಜ್ಯದಲ್ಲಿ ನಡೆಯುತ್ತದೆ. ಸಂಸದನೊಬ್ಬ ದೊಡ್ಡ ಲೈಂಗಿಕ ಹಗರಣ ಮಾಡಿ, ಮತದಾನ ಮುಗಿದ ತಕ್ಷಣ ದೇಶ ಬಿಟ್ಟು ಹೋಗಿರುವುದು ನಮ್ಮ ದೇಶ ಮತ್ತು ಸಂವಿಧಾನಕ್ಕೆ ಮಾಡುವ ಅವಮಾನವಾಗಿದೆ. ಭೇಟಿ ಬಚಾವೋ ಎಂದು ಹೇಳುವ ಪ್ರಧಾನಿ ಮೋದಿ ಮೌನವಾಗಿದ್ದು, ಇದುವರೆಗೂ ‘ರೆಡ್ ಕಾರ್ನರ್’ ನೋಟೀಸ್ ನೀಡಿಲ್ಲ. ಪ್ರಧಾನಿ ಕೇವಲ ಸಿಂಪತಿಯ ಮಾತುಗಳನ್ನು ಮಾತ್ರ ಆಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಹೋರಾಟಗಾರ್ತಿ ಮಲ್ಲಿಗೆ ಸಿರಿಮನೆ, ಅಖಿಲಾ ವಿದ್ಯಾಸಂದ್ರ ಮತ್ತಿತರರು ಹಾಜರಿದ್ದರು.

ಹಕ್ಕೊತ್ತಾಯಗಳು:

► ಪ್ರಜ್ವಲ್ ಬಂಧನಕ್ಕೆ ಕೂಡಲೇ ರೆಡ್ ಕಾರ್ನರ್ ನೋಟೀಸ್ ಜಾರಿ ಮಾಡಬೇಕು

► ಪ್ರಜ್ವಲ್ ರೇವಣ್ಣನನ್ನು ಬಂಧಿಸಬೇಕು, ಆತನ ಬ್ಯಾಂಕ್ ಖಾತೆ ಮುಟ್ಟುಗೋಲು ಹಾಕಿಕೊಳ್ಳಬೇಕು

 ► ಸಂತ್ರಸ್ತೆಯರ ಗೌಪ್ಯತೆ, ಪುನರ್ವಸತಿ, ಪರಿಹಾರ ಕಲ್ಪಿಸಬೇಕು.

► ಸಂತ್ರಸ್ತೆಯರಿಗೆ ಆಪ್ತ ಸಮಾಲೋಚನೆ ನಡೆಸಬೇಕು, ವೀಡಿಯೊ ಹಂಚಿಕೆ ಮಾಡಿದವರನ್ನು ಬಂಧಿಸಬೇಕು

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News