ʼಎಂಎಸ್‍ಪಿ ಖಾತರಿʼ ಕಾನೂನಿಗೆ ನಡೆಯುತ್ತಿರುವ ರೈತ ಚಳವಳಿಯನ್ನು ಬೆಂಬಲಿಸಿ : ಜಗಜಿತ್ ಸಿಂಗ್ ದಲೈವಾಲ

Update: 2024-06-26 14:58 GMT

ಬೆಂಗಳೂರು : ದಕ್ಷಿಣ ಭಾರತ ರಾಜ್ಯಗಳ ರೈತರು, ‘ಎಂಎಸ್‍ಪಿ ಖಾತರಿ ಕಾನೂನಿಗಾಗಿ’ ನಡೆಯುತ್ತಿರುವ ಹೋರಾಟವನ್ನು ಬೆಂಬಲಿಸಿ ಎಂದು ಸಂಯುಕ್ತ ಕಿಸಾನ್ ಬೇಡ ಮೋರ್ಚಾ(ರಾಜಕೀಯತರ) ಸಂಘಟನೆಯ ರಾಷ್ಟ್ರೀಯ ರೈತ ಮುಖಂಡ ಜಗಜಿತ್ ಸಿಂಗ್ ದಲೈವಾಲ ಕರೆ ನೀಡಿದ್ದಾರೆ.

ಬುಧವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಎಂಎಸ್‍ಪಿ ಖಾತರಿ ಕಾನೂನಿಗೆ ಫೆ.13 ರಿಂದ 4 ಸ್ಥಳಗಳಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಸಾವಿರಾರು ರೈತರು ರಸ್ತೆಗಿಳಿದಿದ್ದಾರೆ. ಕೇಂದ್ರ ಸರಕಾರ ಈಡೇರಿಸುವವರೆಗೆ ಈ ಪ್ರತಿಭಟನೆ ಮುಂದುವರಿಯುತ್ತದೆ. ದೇಶದ ರೈತರ ಬೆಂಬಲ ನಮಗಿದೆ ನಾವು ಹೋರಾಟದಲ್ಲಿ ಗೆದ್ದೆ ಗೆಲ್ಲುತ್ತೇವೆ ಎನ್ನುವ ಛಲ ನಮ್ಮಲ್ಲಿದೆ ಎಂದು ಹೇಳಿದರು.

ರೈತ ಸಮುದಾಯದ ಆಕ್ರೋಶದಿಂದ ಗ್ರಾಮೀಣ ಪ್ರದೇಶದಲ್ಲಿ 2019ರ ಚುನಾವಣೆಗೆ ಹೋಲಿಸಿದರೆ, 2024ರ ಚುನಾವಣೆಯಲ್ಲಿ ಬಿಜೆಪಿ ಸರಕಾರ 71 ಲೋಕಸಭಾ ಸ್ಥಾನಗಳನ್ನು ಕಳೆದುಕೊಂಡಿದೆ. ಬಿಜೆಪಿ ನೇತೃತ್ವದ ಎನ್‍ಡಿಎ ಸರಕಾರವು ತಮ್ಮ ರೈತ ವಿರೋಧಿ ನೀತಿಯನ್ನು ಬದಲಾಯಿಸದಿದ್ದರೆ, ಹರಿಯಾಣ ಮತ್ತು ಮಹಾರಾಷ್ಟ್ರ ಸೇರಿದಂತೆ ಮುಂಬರುವ ಎಲ್ಲ ವಿಧಾನಸಭಾ ಚುನಾವಣಾ ರಾಜ್ಯಗಳಲ್ಲಿ ಬಿಜೆಪಿ ರೈತರ ಆಕ್ರೋಶವನ್ನು ಎದುರಿಸುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

ಜು.8ರಂದು ಎಸ್‍ಕೆಎಂ(ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ವತಿಯಿಂದ ಬಿಜೆಪಿಯ 240 ಸಂಸದರನ್ನು ಹೊರತುಪಡಿಸಿ, ಎಲ್ಲ ಸಂಸತ್ ಸದಸ್ಯರಿಗೆ ತಮ್ಮ 12 ಬೇಡಿಕೆಗಳ ಕುರಿತು ಜ್ಞಾಪಕ ಪತ್ರವನ್ನು ನೀಡಲಿದೆ. ಜುಲೈ ತಿಂಗಳಲ್ಲಿ ಎರಡು ವೇದಿಕೆಗಳಲ್ಲಿ ಹೊಸದಿಲ್ಲಿಯಲ್ಲಿ ಬೃಹತ್ ರೈತ ಸಮಾವೇಶವನ್ನು ಆಯೋಜಿಸಲಿದ್ದೇವೆ. ಎಸ್‍ಕೆಎಂ (ರಾಜಕೀಯೇತರ) ಸೆಪ್ಟೆಂಬರ್ ನಲ್ಲಿ ಹರಿಯಾಣದಲ್ಲಿ ರೈತ ರ್ಯಾಲಿಯನ್ನು ಆಯೋಜಿಸುತ್ತಿದ್ದು, ಇದರಲ್ಲಿ ಎಲ್ಲ ರಾಜ್ಯಗಳಿಂದ 1 ಲಕ್ಷಕ್ಕೂ ಹೆಚ್ಚು ರೈತರು ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಸಂಯುಕ್ತ ಕಿಸಾನ್ ಮೋರ್ಚಾ ದಕ್ಷಿಣ ಭಾರತ ಸಂಚಾಲಕ ಹಾಗೂ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ಮಾತನಾಡಿ, ಕನಿಷ್ಠ ಬೆಂಬಲ ಬೆಲೆ ಹೆಚ್ಚಳ ಮಾಡಿದ ತಕ್ಷಣ ರೈತರಿಗೆ ಲಾಭ ಸಿಗುವುದಿಲ್ಲ, ರೈತರು ಕೇಳುತ್ತಿರುವುದು ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಅದಕ್ಕಾಗಿಯೆ ಹೋರಾಟ. ಒಡಿಸ್ಸಾ ಮತ್ತು ಚತ್ತೀಸ್‍ಗಢ ರಾಜ್ಯಗಳು ಭತ್ತಕ್ಕೆ 3,100ರೂ. ಪ್ರೋ ತ್ಸಹ ಬೆಂಬಲ ಬೆಲೆ ಘೋಷಣೆ ಮಾಡಿದ್ದಾರೆ. ಆದರೆ ಕೇಂದ್ರ ಸರಕಾರ 2,300ರೂ. ಬೆಂಬಲ ಬೆಲೆ ನಿಗದಿ ಮಾಡಿರುವುದು ಯಾವ ನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಬರಗಾಲದಿಂದ ರೈತರು ತತ್ತರಿಸಿದ್ದರು ಸೂಕ್ತ ಪರಿಹಾರ ಸಿಕ್ಕಿಲ್ಲ. ಆದರೆ ತೆಲಂಗಾಣ ಸರಕಾರ ರೈತರ 2ಲಕ್ಷ ಸಾಲ ಮನ್ನಾ ಮಾಡಿದೆ. ಪ್ರತಿ ಎಕರೆಗೆ ವರ್ಷಕ್ಕೆ 15ಸಾವಿರ ಪ್ರೋತ್ಸಾಹಧನ ನೀಡುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ತೀವ್ರ ಬರಗಾಲವಾಗಿದ್ದರು ರೈತರಿಗೆ ನೀಡುತ್ತಿದ್ದ ಕಿಸಾನ್ ಸಮ್ಮಾನ್ ಹಣ 4ಸಾವಿರ ನಿಲ್ಲಿಸಿದ್ದಾರೆ. ಇದು ರಾಜ್ಯ ಸರಕಾರ ರೈತರಿಗೆ ಬಗೆದ ಮಹಾದ್ರೋಹವಾಗಿದೆ. ರೈತರ ಹೆಸರಿನಲ್ಲಿ ಹಾಲು ದರ ಹೆಚ್ಚಳ ಮಾಡುತ್ತಿದ್ದಾರೆ ಆದರೆ ಹಾಲು ಉತ್ಪಾದಕರಿಗೆ ರಾಜ್ಯ ಸರಕಾರ ನೀಡುತ್ತಿದ್ದ 5ರೂ. ಪ್ರೋತ್ಸಾಹ ಧನ ಸುಮಾರು 700 ಕೋಟಿ 8 ತಿಂಗಳಿಂದ ಬಿಡುಗಡೆ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ರೈತ ಸಂಘದ ಗೋವಿಂದ ರೆಡ್ಡಿ,ಹರಿಯಾಣ ರಾಜ್ಯದ ರೈತ ಮುಖಂಡ ಅಭಿಮನ್ಯುಕೊಹರ್, ಕೇರಳ ರಾಜ್ಯದ ಕೆ.ವಿ.ಬಿಜು, ತಮಿಳುನಾಡಿನ ರೈತ ಮುಖಂಡ ಪಿ.ಆರ್.ಪಾಂಡ್ಯನ್, ಹರಿಯಾಣದ ಲಕ್ವಿಂದರ್ ಸಿಂಗ್, ಜಾಫರ್ ಖಾನ್, ಸುಖಜಿತ್ ಸಿಂಗ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News