ಯುವಕನ ಅಪಹರಿಸಿ ಹಲ್ಲೆ ಪ್ರಕರಣ : ಇಬ್ಬರು ಆರೋಪಿಗಳ ಸೆರೆ

Update: 2024-06-30 16:26 GMT

ಬೆಂಗಳೂರು: ಸಿನಿಮೀಯ ಶೈಲಿಯಲ್ಲಿ ಯುವಕನನ್ನು ಅಪಹರಿಸಿ ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಇಲ್ಲಿನ ಹಲಸೂರು ಠಾಣಾ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ಜೂ.16ರಂದು ಅಜ್ಮೀರಾ ರಾಜು ಎಂಬಾತನನ್ನು ಕಾರಿನಲ್ಲಿ ತೆಲಂಗಾಣಕ್ಕೆ ಕರೆದೊಯ್ದು ಹಲ್ಲೆಗೈದ ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಕೆಲಸ ಮಾಡಿಕೊಂಡಿದ್ದ ಅಜ್ಮೀರಾ ರಾಜು ಎಂಬಾತ, ಐಷಾರಾಮಿ ಕಾರು, ವಿದೇಶ ಪ್ರವಾಸ, ಕ್ರಿಕೆಟರ್ಸ್ ಜೊತೆ ಫೋಟೋಸ್ ಎಂದೆಲ್ಲಾ ವಿಲಾಸಿ ಜೀವನ ಶೈಲಿ ಹೊಂದಿದ್ದ ಎಂದು ತಿಳಿದುಬಂದಿದೆ.

ಆರೇಳು ತಿಂಗಳುಗಳಿಂದ ಬೆಂಗಳೂರಿನ ಎಂ.ಜಿ.ರಸ್ತೆಯ ಖಾಸಗಿ ಹೋಟೆಲ್‍ನಲ್ಲಿ ತಂಗಿದ್ದ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯನಾಗಿದ್ದ ಅಜ್ಮೀರಾ ರಾಜು ಜೀವನ ಶೈಲಿ ಗಮನಿಸಿದ್ದ ಆರೋಪಿಗಳು ಅಪಹರಿಸಲು ಸಂಚು ರೂಪಿಸಿದ್ದರು.

ಜೂ.16ರಂದು ರಾತ್ರಿ ಸ್ನೇಹಿತನೊಂದಿಗೆ ಊಟಕ್ಕೆಂದು ತೆರಳಿದ್ದ ಅಜ್ಮೀರಾ ರಾಜುನನ್ನು ಆರೋಪಿಗಳು ಕಾರಿನಲ್ಲಿ ಹಿಂಬಾಲಿಸಿದ್ದರು. ಇದನ್ನು ಗಮನಿಸಿದ್ದ ಅಜ್ಮೀರಾ ರಾಜು, ದ್ವಿಚಕ್ರ ವಾಹನ ನಿಲ್ಲಿಸಿ ಆರೋಪಿಗಳ ಕಾರಿನ ಬಳಿ ಹೋದಾಗ ಆತನನ್ನು ಬಲವಂತವಾಗಿ ಕಾರಿನಲ್ಲಿ ಅಪಹರಿಸಿಕೊಂಡು ತೆರಳಿದ್ದರು. ತೆಲಂಗಾಣಕ್ಕೆ ಕರೆದೊಯ್ದು ಫಾರ್ಮ್ ಹೌಸ್‍ವೊಂದರಲ್ಲಿ ಕೂಡಿ ಹಾಕಿ ಹಲ್ಲೆ ಮಾಡಿ, 5 ಕೋಟಿ ರೂ ಹಣ, ಬಿಟ್ ಕಾಯಿನ್ ನೀಡುವಂತೆ ಬೆದರಿಸಿದ್ದರು.

ಇತ್ತ ಅಜ್ಮೀರಾ ರಾಜು ಅಪಹರಣದ ಕುರಿತು ಆತನ ಸ್ನೇಹಿತ ಹಲಸೂರು ಠಾಣೆಗೆ ದೂರು ನೀಡಿದ್ದ. ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ಕೈಗೊಂಡ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಕ್ರಮ ಜರುಗಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News