ವೈದ್ಯರು ವೃತ್ತಿ ಧರ್ಮ ಪಾಲಿಸುವುದು ಅವಶ್ಯಕ : ಸಿಎಂ ಸಿದ್ದರಾಮಯ್ಯ

Update: 2024-07-01 14:47 GMT

Photo : x/@siddaramaiah

ಬೆಂಗಳೂರು: ವೈದ್ಯರು ತಮ್ಮ ವೃತ್ತಿ ಧರ್ಮವನ್ನು ಪಾಲಿಸುವುದು ಅತ್ಯಂತ ಅವಶ್ಯಕ. ರೋಗಿಯ ಪ್ರಾಣ ಉಳಿಸಿದರೆ ವೈದ್ಯರೇ ದೇವರಾಗುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಸೋಮವಾರ ನಗರದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಆಯೋಜಿಸಿದ್ದ ‘ರಾಷ್ಟ್ರೀಯ ವೈದ್ಯರ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವೈದ್ಯರು ತಮ್ಮ ವೃತ್ತಿಯಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ತೋರಬಾರದು. ಸ್ವಲ್ಪ ನಿರ್ಲಕ್ಷ್ಯ ತೋರಿದರೂ ಅನಾಹುತವಾಗುತ್ತದೆ ಎಂಬ ಎಚ್ಚರಿಕೆ ಇರಬೇಕು. ಇದು ದೇವರ ಕೆಲಸ ಎಂದು ಮಾಡಿದರೆ ಸಮಾಜದಲ್ಲಿ ರೋಗಗಳನ್ನು ತಡೆಗಟ್ಟುವ, ರೋಗಿಗಳ ಸಂಖ್ಯೆಯನ್ನು ಕಡಿಮೆಮಾಡಬಹುದು. ರೋಗಗಳನ್ನು ತಡೆಗಟ್ಟುವುದನ್ನು ಆರೋಗ್ಯ ಇಲಾಖೆ ಗಮನದಲ್ಲಿರಿಸಿಕೊಂಡು ಕಾರ್ಯನಿರ್ವಹಿಸಬೇಕು ಎಂದು ಸಿದ್ದರಾಮಯ್ಯ ತಿಳಿಸಿದರು.

ವೈದ್ಯ ವೃತ್ತಿ ಅತ್ಯಂತ ಪವಿತ್ರವಾದ ವೃತ್ತಿ. ವೈದ್ಯೋ ನಾರಾಯಣೋ ಹರಿಃ ಎಂದು ಭಾವಿಸಲಾಗುತ್ತದೆ. ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವವರು ಹಾಗೂ ಆರೋಗ್ಯ ರಕ್ಷಣೆ ಮಾಡುವವರು ವೈದ್ಯರು ಎಂದು ಸಿದ್ದರಾಮಯ್ಯ ಹೇಳಿದರು.

ಕರೋನ ಸಂದರ್ಭದಲ್ಲಿ ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡಿದ ಸೇವೆಯನ್ನು ಮರೆಯಲು ಸಾಧ್ಯವಿಲ್ಲ. ತಮ್ಮ ಜೀವದ ಹಂಗನ್ನು ತೊರೆದು ವೈದ್ಯರು ದುಡಿದಿದ್ದಾರೆ ಎಂದ ಸಿದ್ದರಾಮಯ್ಯ, ಸಮಾಜದ ಆರೋಗ್ಯ ಕಾಪಾಡಲು ಸರಕಾರವೂ ಪ್ರಯತ್ನ ಪಡುತ್ತಿದೆ. ಅನೇಕ ಕಾರ್ಯಕ್ರಮಗಳನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜಾರಿ ಮಾಡುತ್ತಿವೆ ಎಂದು ಹೇಳಿದರು.

ಸರಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯರು ಹೆಚ್ಚು ಸಮಾಜಮುಖಿಯಾಗಿ ಕೆಲಸ ಮಾಡಬೇಕು. ಸರಕಾರಿ ಆಸ್ಪತ್ರೆಗಳಿಗೆ ಬಡವರೇ ಹೆಚ್ಚು ಬರುತ್ತಾರೆ. ವೈದ್ಯರು ಹಸನ್ಮುಖಿಗಳಾಗಿ ರೋಗಿಗಳಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಪ್ರತಿ ವೈದ್ಯರೂ ಮಾಡಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದರು.

ಬೆಂಗಳೂರಿನಲ್ಲಿ ಡೆಂಗ್ ಜ್ವರ ಹೆಚ್ಚಾಗುತ್ತಿದ್ದು, ಇದರ ಮೂಲೋಚ್ಚಾಟನೆ ಮಾಡಬೇಕು. ಈ ಬಗ್ಗೆ ಪರಿಶೀಲನಾ ಸಭೆಯನ್ನು ಹಮ್ಮಿಕೊಳ್ಳಲಾಗಿದ್ದು, ಈ ಬಗ್ಗೆ ಸಾರ್ವಜನಿಕರೂ ಸರಕಾರದೊಂದಿಗೆ ಕೈಜೋಡಿಸಬೇಕು. ಆಗ ಮಾತ್ರ ಇದರ ನಿವಾರಣೆ ಸಾಧ್ಯ ಎಂದು ಸಿದ್ದರಾಮಯ್ಯ ತಿಳಿಸಿದರು.

ವೈದ್ಯರ ಭವನ ನಿರ್ಮಾಣಕ್ಕೆ ಅಗತ್ಯವಿರುವ ಅನುದಾನವನ್ನು ನೀಡಲಾಗುವುದು ಎಂದ ಸಿದ್ದರಾಮಯ್ಯ, ಸಾಮಾಜಿಕ ಆರ್ಥಿಕ ಬೆಳವಣಿಗೆಗೆ ಶಿಕ್ಷಣ ಮತ್ತು ಆರೋಗ್ಯ ಬಹಳ ಮುಖ್ಯ. ಪ್ರತಿಯೊಬ್ಬರೂ ಆರೋಗ್ಯವಂತರಾಗಿ, ಆರ್ಥಿಕ ಶಕ್ತಿ ಹೊಂದಿದ್ದಾಗ ಮಾತ್ರ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ. ವೈದ್ಯರು ಬಿ.ಸಿ.ರಾಯ್ ಅವರ ದಾರಿಯಲ್ಲಿ ನಡೆಯುವ ಪ್ರಯತ್ನ ಮಾಡಬೇಕು ಎಂದು ಸಿದ್ದರಾಮಯ್ಯ ತಿಳಿಸಿದರು.

ನಾನೇಕೇ ಸಿಗರೇಟ್ ಬಿಟ್ಟೆ ಗೊತ್ತೇ..!

ಒಂದು ಕಾಲದಲ್ಲಿ ನಾನು ಸಿಗರೇಟ್ ಹೆಚ್ಚು ಸೇದುತ್ತಿದ್ದೆ. ಸಿಗರೇಟ್ ಹೆಚ್ಚು ಸೇದುವುದರಿಂದ ಆಯಸ್ಸು ಕಡಿಮೆ ಆಗುತ್ತದೆಂದು ತಿಳಿದು ಸಿಗರೇಟ್ ಬಿಟ್ಟೆ . ಸಿಗರೇಟ್ ಆರೋಗ್ಯಕ್ಕೆ ಮಾರಕ, ಕ್ಯಾನ್ಸರ್ ಬರುತ್ತದೆ ಎಂದರೂ ಕೂಡ ಸಿಗರೇಟ್ ಸೇದುತ್ತಾರೆ. ಜನರು ಕೂಡ ಜಾಗೃತರಾಗಬೇಕು. ದುಶ್ಚಟಗಳಿಂದ ದೂರವಿರಬೇಕು ಸಿಎಂ ಸಿದ್ದರಾಮಯ್ಯ ಹೇಳಿದರು.

ಹಿಂದೆ ತಮಗೂ ಸಿಗರೇಟ್ ಸೇದುವ ಅಭ್ಯಾಸವಿತ್ತು. ಹಾರ್ಟ್ ಸಮಸ್ಯೆ ಬಂತು. ಅದರಿಂದಾಗಿ ಆಂಜಿಯೋಪ್ಲಾಸ್ಟಿ ಕಾಯಿಲೆಗೆ ಒಳಗಾಗಿದ್ದೆ. ನಂತರದಲ್ಲಿ ನಾನು ಸಿಗರೇಟ್ ತ್ಯಜಿಸಿದೆ ಎಂದರು.

ಇದೇ ವೇಳೆ ಜೀವನ ಸಾಧನೆ ಹಾಗೂ ಇತರೆ ಪ್ರಶಸ್ತಿಗಳಿಗೆ ಭಾಜನರಾದ ವೈದ್ಯರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ ರೇವಣ್ಣ, ಶಾಸಕ ಡಾ.ಎಂ.ಟಿ. ಶ್ರೀನಿವಾಸ್, ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ, ವೈದ್ಯರ ಸಂಘದ ಅಧ್ಯಕ್ಷರು ಡಾ.ವಿವೇಕ್ ದೊರೆ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News