ಹೊಸ ನ್ಯಾಯ ಸಂಹಿತೆಯ ಅಡಿಯಲ್ಲಿ ಮೊದಲ ಎಫ್‍ಐಆರ್ ದಾಖಲು : ಬೀದಿ ವ್ಯಾಪಾರಿಗಳಿಂದ ವಿರೋಧ

Update: 2024-07-01 17:51 GMT

ಬೆಂಗಳೂರು : ವಿವಾದಗಳ ನಡುವೆಯೂ ದೇಶಾದ್ಯಂತ ಸೋಮವಾರದಿಂದಲೇ ಜಾರಿಯಾದ ಹೊಸ ‘ಭಾರತೀಯ ನ್ಯಾಯ ಸಂಹಿತೆ’ಯ ಅಡಿಯಲ್ಲಿ ಮೊದಲ ಎಫ್‍ಐಆರ್ ಅನ್ನು ನವದಿಲ್ಲಿಯ ಬೀದಿ ವ್ಯಾಪಾರಿ ಪಂಕಜ್ ಕುಮಾರ್ ಪಾಂಡೆ ವಿರುದ್ಧ ದಾಖಲಿಸಿದ್ದು, ಬೀದಿ ವ್ಯಾಪಾರಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಪ್ರಗತಿಪರ ಬೀದಿ ವ್ಯಾಪಾರಿಗಳ ಸಂಘವು ಪ್ರಕಟನೆ ಹೊರಡಿಸಿದ್ದು, ಬೀದಿ ವ್ಯಾಪಾರಿ ಪಂಕಜ್ ಕುಮಾರ್ ಪಾಂಡೆ ವಿರುದ್ಧ ದಿಲ್ಲಿ ಪೊಲೀಸರು ಹೊಸ ಕಾಯ್ದೆಯ ಕಲಂ 285ರ ಅಡಿ ಪ್ರಕರಣವೊಂದನ್ನು ದಾಖಲಿಸಿದ್ದಾರೆ. ಅಲ್ಲದೆ ಗೋವಾದ ಪಣಜಿಯಲ್ಲಿ ರಸ್ತೇಲಿ ತಳ್ಳುವ ಗಾಡಿ ಮೂಲಕ ಎಳನೀರು ಮಾರುತಿದ್ದ ನಿಸಾರ್ ಬಳ್ಳಾರಿ ಎಂಬ ಬೀದಿ ವ್ಯಾಪಾರಿ ವಿರುದ್ಧ ಮತ್ತೊಂದು ಎಫ್‍ಐಆರ್ ದಾಖಲಾಗಿದೆ ಎಂದು ತಿಳಿಸಿದೆ.

ದೇಶದಲ್ಲಿರುವ ಹಲವು ಪ್ರಗತಿಪರ ಸಂಘಟನೆಗಳು ಹೊಸ ಕ್ರಿಮಿನಲ್ ಕಾಯ್ದೆಗಳು ಜನಪರವಲ್ಲ, ಅವು ಪೊಲೀಸ್ ರಾಜ್ಯವನ್ನು ಸೃಷ್ಟಿಮಾಡುತ್ತವೆ, ಹೀಗಾಗಿ ಅವುಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ. ಆದರೆ ಕಾಯ್ದೆಗಳು ಜಾರಿಗೆ ಬಂದ ಮೊದಲನೆಯ ದಿನವೇ ಬೀದಿ ಬದಿ ವ್ಯಾಪಾರಿಗಳ ವಿರುದ್ಧ ಎಫ್‍ಐಆರ್ ದಾಖಲಾಗಿದ್ದು, ಈ ಕಾಯ್ದೆಗಳು ಕಾರ್ಮಿಕರ, ಬಡವರ ವಿರುದ್ಧ ಹಾಗು ಪೊಲೀಸ್ ರಾಜ್ಯವನ್ನು ಸೃಷ್ಟಿ ಮಾಡುತ್ತವೆ ಎಂದು ಸಾಬೀತಾಗಿದೆ ಎಂದು ಖಂಡಿಸಿದೆ.

ಬೀದಿ ವ್ಯಾಪಾರಿಗಳು ಒತ್ತುವರಿದಾರರಲ್ಲ, ಅವರಿಗೆ ಬೀದಿಲಿ ವ್ಯಾಪಾರ ಮಾಡುವ ಹಕ್ಕಿದೆ, ಅವರನ್ನು ಅತಿಕ್ರಮಣಕಾರರು, ಒತ್ತುವರಿದಾರರು ಎಂದು ಕರೆಯುವುದು ಸರಿಯಲ್ಲ ಎಂದು ನ್ಯಾಯಾಲಯಗಳು ಪದೇ ಪದೇ ಹೇಳಿದ್ದಾವೆ. ನಗರಗಳಿಗೆ, ದೇಶದ ಆರ್ಥಿಕತೆಗೆ ಬೀದಿ ವ್ಯಾಪಾರಿಗಳು ಸಲ್ಲಿಸಿರುವ ಸೇವೆಯನ್ನು ಪರಿಗಣಿಸಲಾಗಿದೆ. ಅಲ್ಲದೆ ಬೀದಿ ವ್ಯಾಪಾರಿಗಳ(ಜೀವನೋಪಾಯ ರಕ್ಷಣೆ ಹಾಗು ನಿಯಂತ್ರಣ) ಕಾಯ್ದೆ 2014 ಉಲ್ಲಂಘನೆಯಾಗಿದೆ ಎಂದು ಸಂಘವು ಎಂದು ಸ್ಪಷ್ಟಪಡಿಸಿದೆ.

ಹೀಗಿದ್ದರೂ ಪೋಲಿಸರು, ಹೊಸ ಕ್ರಿಮಿನಲ್ ಕಾಯ್ದೆಯನ್ನು ಉಪಯೋಗಿಸಿ ಬೀದಿ ವ್ಯಾಪಾರಿಗಳ ಮೇಲೆ ಎಫ್‍ಐಆರ್ ದಾಖಲಿಸರುವುದು ಖಂಡನೀಯ. ಇಂದು ದಾಖಲಿಸಿರುವ ಎಫ್‍ಐಆರ್ ಭಾರತೀಯ ನ್ಯಾಯ ಸಂಹಿತೆಯ 285ರ ಅಡಿಯಲ್ಲಿದೆ. ಹಳೆಯ ಐಪಿಸಿ ನಲ್ಲಿ ಇದು ಕಲಂ 283 ಅಡಿಯಲಿತ್ತು. ಹಳೆಯ ಕಾನೂನಿನಲ್ಲಿ ಇದಕ್ಕೆ ಇನ್ನೂರು ರೂಪಾಯಿ ದಂಡ ಇದ್ದರೆ, ಹೊಸ ಕಾನೂನಿನಲ್ಲಿ ಇದಕ್ಕೆ ಐದು ಸಾವಿರ ರೂಪಾಯಿ ದಂಡ ಇದೆ ಎಂದು ತಿಳಿಸಿದೆ.

ಪಂಕಜ್ ಕುಮಾರ್ ಪಾಂಡೆ ಮತ್ತು ನಿಸಾರ್ ಬಳ್ಳಾರಿ ಅವರ ಮೇಲಿನ ಎಫ್‍ಐಆರ್ ಅನ್ನು ಹಿಂಪಡೆಯಬೇಕು. ಒಕ್ಕೂಟ ಸರಕಾರ ಹೊಸ ಕ್ರಿಮಿನಲ್ ಕಾನೂನು ಹಿಂಪಡೆಯಬೇಕು. ಕರ್ನಾಟಕ ಸರಕಾರ ಹೊಸ ಕ್ರಿಮಿನಲ್ ಕಾನೂನುಗಳನ್ನು ಜಾರಿಮಾಡಬಾರದು. ಬೀದಿ ವ್ಯಾಪಾರಿಗಳ ಕಾಯ್ದೆ 2014ವನ್ನು ಯಾವ ಅಧಿಕಾರಿಗಳು ಉಲ್ಲಂಘಿಸಬಾರದು ಎಂದು ಸಂಘವು ಮನವಿ ಮಾಡಿದೆ.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News