ಎಸ್‍ಎಂಎ ಖಾಯಿಲೆಗೆ ಒಳಪಟ್ಟ ಮಗುವಿಗೆ ಆಸರೆಯಾದ ಸಚಿವ ದಿನೇಶ್ ಗುಂಡೂರಾವ್

Update: 2024-07-11 14:32 GMT

ಬೆಂಗಳೂರು : ಸ್ಪೈನಲ್ ಮಸ್ಕ್ಯುಲಾರ್ ಅಟ್ರೋಫಿ (ಎಸ್‍ಎಂಎ) ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಮಗುವಿನ ಚಿಕಿತ್ಸೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಉಚಿತವಾಗಿ 48 ಲಕ್ಷ ಒದಗಿಸುವ ಮೂಲಕ ಆಸರೆಯಾಗಿದ್ದಾರೆ.

ಎರಡು ವರ್ಷದ ಮಗು ಆರ್ಯನ್ ಮೂರ್ತಿ, ಎಸ್‍ಎಂಎ ಟೈಪ್ 2ನಿಂದ ಬಳಲುತ್ತಿದ್ದು, ಇದು ಕ್ಷೀಣಗೊಳ್ಳುವ ಜೆನೆಟಿಕ್ ಡಿಸಾರ್ಡರ್ ಮತ್ತು ಪ್ರಗತಿಶೀಲ ಸ್ನಾಯು ಕ್ಷೀಣತೆ ಮತ್ತು ದೌರ್ಬಲ್ಯವನ್ನು ಉಂಟುಮಾಡುತ್ತದೆ. ಇದರಿಂದಾಗಿ ನಡೆಯಲು ಮತ್ತು ಅಂತಿಮವಾಗಿ ಉಸಿರಾಟದ ತೊಂದರೆ ಉಂಟಾಗುತ್ತದೆ. ಆರ್ಯನ್‍ಗೆ ಜೀನ್ ಥೆರಪಿ ಇಂಜೆಕ್ಷನ್ ಝೋಲ್ಜೆನ್ಸ್ಮಾ ಚಿಕಿತ್ಸೆ ಅಗತ್ಯವಾಗಿದ್ದು ಇದಕ್ಕೆ ಬರೋಬ್ಬರಿ 16 ಕೋಟಿ ವೆಚ್ಚವಾಗಲಿದೆ.

ಈ ನಿಟ್ಟಿನಲ್ಲಿ ದುಬಾರಿ ಚಿಕಿತ್ಸೆ ಹಿನ್ನೆಲೆಯಲ್ಲಿ ಮಗುವಿನ ಪಾಲಕರು ಸಹಾಯಕ್ಕಾಗಿ ಆರೋಗ್ಯ ಸಚಿವ ಸಚಿವ ದಿನೇಶ್ ಗುಂಡೂರಾವ್‍ರನ್ನು ಸಂಪರ್ಕಿಸಿದಾಗ ಅವರು ಇಂದಿರಾ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಚೈಲ್ಡ್ ಹೆಲ್ತ್ ಮತ್ತು ಕೇರ್ ಅಂಡ್ ಪ್ರೊಟೆಕ್ಷನ್ ಆಫ್ ಚಿಲ್ಡ್ರನ್ ಟ್ರಸ್ಟ್ ಎಂಬ ಎನ್‍ಜಿಒ ಮೂಲಕ ಮಗು ಆರ್ಯನ್‍ಗೆ ಜೀವಮಾನದ ಔಷಧಿಯನ್ನು ಒದಗಿಸಲು ಒಪ್ಪಂದವನ್ನು ಮಾಡಿಸಿಕೊಟ್ಟಿದ್ದಾರೆ.

ಈ ರೀತಿಯ ರೋಗಗಳಿಗೆ ದುಬಾರಿ ಮೊತ್ತದ ಚಿಕಿತ್ಸೆ ಒದಗಿಸಲು ಆರೋಗ್ಯ ಇಲಾಖೆಯಲ್ಲಿ ಅವಕಾಶ ಕಲ್ಪಿಸುವತ್ತ ಮಾರ್ಗೋಪಾಯಗಳನ್ನು ಕಂಡುಕೊಳ್ಳುವಂತೆ ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೋಗಿಗಳಿಗೆ ಅಪರೂಪದ, ಅಧಿಕ ವೆಚ್ಚದ ಕಾಯಿಲೆಗಳಿಗೆ ನೀಡಲಾಗುವ ವಿತ್ತೀಯ ನೆರವಿನಡಿಯಲ್ಲಿ ಎಸ್‍ಎಂಎ ರೋಗವನ್ನು ಸೇರಿಸುವ ಕುರಿತು ಅಧಿಕಾರಿಗಳೊಂದಿಗೆ ಸಚಿವ ದಿನೇಶ್ ಗುಂಡೂರಾವ್ ಚರ್ಚಿಸಿದ್ದಾರೆ.

ಪ್ರಸ್ರುತ ಮಗುವಿಗೆ ರಿಸ್ಡಿಪ್ಲಾಮ್ ಔಷಧದ ಚಿಕಿತ್ಸೆಯನ್ನ ನೀಡಲಾಗುತ್ತಿದ್ದು, ಮಗುವಿನ 11 ಕೆ.ಜಿ. ತೂಕದ ಆಧಾರದ ಮೇಲೆ ವರ್ಷಕ್ಕೆ 48 ಲಕ್ಷ ವೆಚ್ಚವಾಗಲಿದೆ. ಮಗು 20 ಕೆ.ಜಿ. ತಲುಪಿದಾಗ ಈ ವೆಚ್ಚವು 73 ಲಕ್ಷಕ್ಕೆ ಏರುವ ಸಾಧ್ಯತೆ ಇದೆ. ಸಚಿವರಿಂದ ಸಿಕ್ಕ ಸ್ಪಂದನೆಗೆ ಅಭಿನಂದನೆ ಸಲ್ಲಿಸಿರುವ ಮಗುವಿನ ಪಾಲಕರು, ಸಾರ್ವಜನಿಕರಲ್ಲಿ ಹೆಚ್ಚಿನ ನೆರವಿನ ಹಸ್ತ ಚಾಚಿದ್ದಾರೆ.

ಯಾರಾದರೂ ಸಹಾಯ ಮಾಡಲು ಇಚ್ಛಿಸುವವರು ಮಗುವಿನ ಬ್ಯಾಂಕ್ ಖಾತೆ ವಿಳಾಸವಾದ ‘ಆರ್ಯನ್ ಮೂರ್ತಿ, ಖಾತೆ ಸಂಖ್ಯೆ-0694 1040 0026 5935, ಐಎಫ್‍ಎಸ್‍ಸಿ ಕೋಡ್ : ಐಬಿಕೆಎಲ್0000694, ಬ್ಯಾಂಕ್: ಐಡಿಬಿಐ(ಯಲಹಂಕ ನ್ಯೂಟೌನ್ ಶಾಖೆ), ಬೆಂಗಳೂರು-64, ಪಾನ್ ಸಂಖ್ಯೆ: Pan Number: AMGPN2988L’ಗೆ ಸಂಪರ್ಕಿಸಬಹುದು ಎಂದು ಪೋಷಕರು ತಿಳಿಸಿದ್ದಾರೆ.

 

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News