ಪೌರಕಾರ್ಮಿಕರ ಸಮಸ್ಯೆ ಪರಿಹರಿಸಲು ಆರತಿ ಕೃಷ್ಣ ಒತ್ತಾಯ

Update: 2024-07-22 16:49 GMT

ಬೆಂಗಳೂರು : ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರ ಸಮಸ್ಯೆಯನ್ನು ಕೂಡಲೇ ಪರಿಹರಿಸಬೇಕು ಎಂದು ಕರ್ನಾಟಕ ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ಒತ್ತಾಯಿಸಿದ್ದಾರೆ.

ಸೋಮವಾರ ನಗರದಲ್ಲಿ ಪೌರಾಡಳಿತ ಸಚಿವ ರಹೀಂ ಖಾನ್‍ರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಅವರು, ಸರಕಾರ ಜಾರಿ ಮಾಡಿದ ಶಕ್ತಿ ಯೋಜನೆಯ ಪ್ರತಿಫಲವಾಗಿ ಶೃಂಗೇರಿ ಹೆಚ್ಚಿನ ಜನರು ಆಗಮಿಸುತ್ತಿದ್ದು, ಪಟ್ಟಣದಲ್ಲಿ ಹೆಚ್ಚಿನ ಪ್ರಮಾಣದ ತ್ಯಾಜ್ಯವು ಸಂಗ್ರಹಣೆಯಾಗುತ್ತಿದೆ. ಈ ಕಸವನ್ನು ವಿಲೇವಾರಿ ಮಾಡಲು ಕಷ್ಟವಾಗುತ್ತಿದೆ ಎಂದಿದ್ದಾರೆ.

ಶೃಂಗೇರಿ ಪಟ್ಟಣ ಪಂಚಾಯಿತಿಯಲ್ಲಿ 15 ಜನ ಪೌರಕಾರ್ಮಿಕರ ಹುದ್ದೆ ಮಂಜೂರಾಗಿದ್ದು, ಪ್ರಸ್ತುತ ಕೇವಲ 2 ಜನ ಖಾಯಂ ಪೌರ ಕಾರ್ಮಿಕರು ಮಾತ್ರ ಸೇವೆ ಸಲ್ಲಿಸುತ್ತಿದ್ದಾರೆ. ನೇರ ಪಾವತಿಯಡಿ 9 ಜನ, ಹೊರಗುತ್ತಿಗೆಯಲ್ಲಿ ಇಬ್ಬರು ಹಾಗೂ ದಿನಗೂಲಿಯಲ್ಲಿ ಒಬ್ಬರು ಪೌರಕಾರ್ಮಿಕರು ಸೇರಿ ಒಟ್ಟು 13 ಜನ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ ಈ ಯಾತ್ರಾಸ್ಥಳದಲ್ಲಿ ಪ್ರತಿನಿತ್ಯ ಉತ್ಪತ್ತಿಯಾಗುವ ಹೆಚ್ಚಿನ ತ್ಯಾಜ್ಯವಸ್ತುವನ್ನು ಈ 13 ಜನ ಪೌರಕಾರ್ಮಿಕರಿಂದ ನಿರ್ವಹಣೆ ಮಾಡುವುದು ಕಷ್ಟಸಾಧ್ಯವಾಗಿರುತ್ತದೆ ಎಂದು ಹೇಳಿದ್ದಾರೆ.

ಈ ಹಿನ್ನಲೆಯಲ್ಲಿ ಪೌರಕಾರ್ಮಿಕರು ತಮ್ಮ ಎಲ್ಲಾ ಬೇಡಿಕೆಗಳ ಈಡೇರಿಕೆಗಾಗಿ ಇತ್ತೀಚೆಗೆ ಮುಷ್ಕರ ನಡೆಸಿದ್ದು, ಡೆಂಗ್ಯು ಪ್ರಕರಣಗಳ ಹೆಚ್ಚಳದ ಹಿನ್ನಲೆಯಲ್ಲಿ ಜನಪ್ರತಿನಿಧಿಗಳು ಹಾಗೂ ಉನ್ನತ ಮಟ್ಟದ ಅಧಿಕಾರಿಗಳ ಆಶ್ವಾಸನೆಯಿಂದ ಮುಷ್ಕರವನ್ನು ಹಿಂಪಡೆದಿರುತ್ತಾರೆ. ಹೀಗಾಗಿ ಪೌರಕಾರ್ಮಿಕರನ್ನು ಖಾಯಂಗೊಳಿಸುವ, ಹೆಚ್ಚುವರಿ ಹುದ್ದೆಯನ್ನು ಮಂಜೂರು ಮಾಡುವ ಬಗ್ಗೆ ಹಾಗೂ ಇತರೆ ಬೇಡಿಕೆಗಳನ್ನು ಈಡೇರಿಸುವ ಕುರಿತು ಕ್ರಮವಹಿಸಬೇಕು ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News