‘ಬಿಪಿಎಲ್ ಕಾರ್ಡ್ ರದ್ದು’ ಜನವಿರೋಧಿ ಕ್ರಮ : ಜನವಾದಿ ಮಹಿಳಾ ಸಂಘಟನೆ ಖಂಡನೆ

Update: 2024-09-30 16:47 GMT

ಸಾಂದರ್ಭಿಕ ಚಿತ್ರ

ಬೆಂಗಳೂರು : ಪಾನ್ ಕಾರ್ಡಿಗೆ ಆಧಾರ್ ಲಿಂಕ್ ಮಾಡಲು ವಿಳಂಬವಾಗಿದ್ದಕ್ಕೆ 1ಸಾವಿರ ರೂ. ದಂಡ ಪಾವತಿಸಿ ಆಧಾರ್-ಪ್ಯಾನ್ ಜೋಡಣೆ ಮಾಡಿಸಿದ ಬಡಜನರನ್ನೂ ಆದಾಯ ತೆರಿಗೆದಾರರೆಂದು ತಪ್ಪಾಗಿ ಭಾವಿಸಿ, ಅವರ ಬಿಪಿಎಲ್ ಕಾರ್ಡ್ ರದ್ದು ಪಡಿಸಿರುವುದು ಜನವಿರೋಧಿ ಕ್ರಮವಾಗಿದೆ ಎಂದು ಜನವಾದಿ ಮಹಿಳಾ ಸಂಘಟನೆ ಖಂಡಿಸಿದೆ.

ಸಂಘಟನೆಯ ಅಧ್ಯಕ್ಷೆ ಮೀನಾಕ್ಷಿ ಬಾಳಿ ಪ್ರಕಟನೆ ಹೊರಡಿಸಿದ್ದು, ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್‍ಗಳ ಜೋಡಣೆಯನ್ನು ಬಿಪಿಎಲ್ ಕಾರ್ಡ್‍ದಾರರಿಗೂ ಕಡ್ಡಾಯಗೊಳಿಸಿದ್ದಲ್ಲದೇ ಅದಕ್ಕೆ ಅಂತಿಮ ದಿನದ ಗಡುವು ವಿಧಿಸಿ, ಅವಧಿ ಮೀರಿದೆ ಎಂದು ದಂಡ ಪಾವತಿ ಮಾಡುವಂತೆ ಕೇಂದ್ರದ ಒಕ್ಕೂಟ ಸರಕಾರ ಮಾಡಿದ ಅಮಾನವೀಯ ಕ್ರಮವನ್ನೂ ಮಹಿಳಾ ಸಂಘಟನೆ ವಿರೋಧಿಸಿತ್ತು ಎಂದಿದ್ದಾರೆ.

ಆ ಸಂದರ್ಭದಲ್ಲಿ ದಂಡ ಮಾತ್ರವಲ್ಲದೇ ಸೈಬರ್ ಸೆಂಟರ್‌ ಗಳಲ್ಲಿ ಜೋಡಣೆಗಾಗಿ ಶುಲ್ಕ ತೆರುವ ಅನಿವಾರ್ಯತೆಗೆ ಇದೇ ಬಡಜನರು ಒಳಗಾಗಿದ್ದರು. ಪಾನ್ ಕಾರ್ಡ್ ಜೋಡಣೆಯ ಕಾರಣಕ್ಕಾಗಿ ಕಟ್ಟಿದ ದಂಡ ಆದಾಯ ತೆರಿಗೆ ಇಲಾಖೆಗೆ ಸಂದಾಯವಾಗಿದ್ದು, ಕಟ್ಟಿದವರನ್ನೆಲ್ಲ ಆದಾಯ ತೆರಿಗೆದಾರರೆಂದು ಪರಿಗಣಿಸಿದ ಮೂರ್ಖತನದ ಕೆಲಸ ಈಗ ಬಯಲಿಗೆ ಬಂದಿದೆ ಎಂದು ಅವರು ತಿಳಿಸಿದ್ದಾರೆ.

ಗಾಯದ ಮೇಲೆ ಬರೆ ಎಳೆದಂತೆ ಬಿಪಿಎಲ್ ಕಾರ್ಡ್‍ಗಳನ್ನು ರದ್ದುಪಡಿಸಲಾಗಿದೆ ಎಂದು ವರದಿಯಾಗಿದ್ದು, ಇದು ಖಂಡನೀಯ. ಮೂಲದಲ್ಲಿ ಕೇಂದ್ರದ ಬಿಜೆಪಿ ಸರಕಾರ ತೆಗೆದುಕೊಂಡ ಜನವಿರೋಧಿ ಕ್ರಮವೇ ಅತ್ಯಂತ ಅಮಾನವೀಯವಾಗಿದ್ದು, ಈಗ ಬಿಪಿಎಲ್ ಕಾರ್ಡ್ ರದ್ದು ಮಾಡುವ ಮೂಲಕ ಕರ್ನಾಟಕ ರಾಜ್ಯ ಸರಕಾರ ಗಾಯಕ್ಕೆ ಇನ್ನಷ್ಟು ಉಪ್ಪು ಸುರಿದಿದೆ ಎಂದು ಖಂಡಿಸಿದ್ದಾರೆ.

ಚುನಾವಣೆಯಲ್ಲಿ ಕೊಟ್ಟ ಗ್ಯಾರಂಟಿಗಳ ಭರವಸೆಗಳನ್ನು ಈಡೇರಿಸಿದ್ದೇವೆ ಎಂದು ಹೇಳಿಕೊಳ್ಳುತ್ತಿರುವ ರಾಜ್ಯ ಸರಕಾರ ಈಗ ಹಿತ್ತಿಲ ಬಾಗಿಲಿಂದ ಕಿತ್ತು ಕೊಳ್ಳುವ ಆದೇಶವನ್ನು ನೀಡುತ್ತಿದೆ. ಬಿಪಿಎಲ್ ಕಾರ್ಡ್ ಇಲ್ಲದಿದ್ದರೆ ಸರಕಾರದ ಯಾವ ಯೋಜನೆಗಳ ಪ್ರಯೋಜನವನ್ನೂ ಪಡೆಯಲಾಗುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ತಕ್ಷಣದಲ್ಲೇ ಈ ಆದೇಶವನ್ನು ವಾಪಸ್ ಪಡೆದು ಈ ತಿಂಗಳಿಂದಲೇ ಬಿಪಿಲ್ ಕಾರ್ಡ್‍ದಾರರಿಗೆ ರೇಷನ್ ವಿತರಣೆ ಮಾಡಬೇಕು. ರಾಜ್ಯದಲ್ಲಿ ಬರಗಾಲದ ಬೇಗೆಯಿಂದ ಬಡ ಜನರು ತತ್ತರಿಸುತ್ತಿರುವ ಸಂದರ್ಭದಲ್ಲಿ ಸರಕಾರ ಬಿಪಿಎಲ್ ಕಾರ್ಡ್‍ನಲ್ಲಿ ನೀಡುತ್ತಿದ್ದ ಪಡಿತರದಿಂದ ಲಕ್ಷಾಂತರ ಕುಟುಂಬಗಳು ಹೊಟ್ಟೆಯ ಹಸಿವನ್ನು ನೀಗಿಸಿಕೊಳ್ಳುತ್ತಿದ್ದರು. ಬಿಪಿಎಲ್ ಕಾರ್ಡ್ ರದ್ದಾಗಿರುವ ಕಾರಣ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಯಾವುದೇ ಪೂರ್ವ ಷರತ್ತುಗಳಿಲ್ಲದೇ ಬಿಪಿಎಲ್ ಕಾರ್ಡ್ ದಾರರಿಗೆ ರೇಷನ್, ಆಸ್ಪತ್ರೆ ಚಿಕಿತ್ಸೆ ಮತ್ತಿತರ ಸೌಲಭ್ಯಗಳನ್ನು ಒದಗಿಸಬೇಕು. 1000 ರೂಪಾಯಿ ಸಂದಾಯ ಮಾಡಿದವರ್ಯಾರೂ ಆದಾಯ ತೆರಿಗೆದಾರರಲ್ಲ ಎಂದು ಪ್ರಕಟಣೆ ಹೊರಡಿಸಬೇಕು ಎಂದು ಮೀನಾಕ್ಷಿ ಬಾಳಿ ಸರಕಾರವನ್ನು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News