ಲೋಕಾಯುಕ್ತ ತನಿಖಾ ತಂಡದ ಕೆಲಸಕ್ಕೆ ಅಡ್ಡಿಪಡಿಸಿದರೆ ಪೊಲೀಸರೇ ಕ್ರಮ ಕೈಗೊಳ್ಳುತ್ತಾರೆ : ಜಿ.ಪರಮೇಶ್ವರ್

Update: 2024-09-30 16:50 GMT

ಬೆಂಗಳೂರು : ಲೋಕಾಯುಕ್ತ ವಿಶೇಷ ತನಿಖಾ ತಂಡ(ಸಿಟ್)ದ ಅಧಿಕಾರಿಗಳ ಕೆಲಸಕ್ಕೆ ಅಡ್ಡಿಪಡಿಸಿದರೆ ಅವರದ್ದೇ ಆದ ಕೆಲವು ಕ್ರಮಗಳನ್ನು ಪೊಲೀಸ್‍ನವರೇ ತೆಗೆದುಕೊಳುತ್ತಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಸೋಮವಾರ ಇಲ್ಲಿನ ಸದಾಶಿವನಗರ ನಿವಾಸದ ಬಳಿ ಎಚ್‍ಡಿಕೆ ಮತ್ತು ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ಅವರ ಜಟಾಪಟಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಾನೂನಾತ್ಮಕವಾಗಿ ಚಂದ್ರಶೇಖರ್ ನೇತೃತ್ವದ ಸಿಟ್ ರಚನೆ ಮಾಡಲಾಗಿದೆ. ಅವರ ಕೆಲಸಕ್ಕೆ ಅಡ್ಡಿಪಡಿಸಿದರೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂದು ಎಚ್ಚರಿಸಿದರು.

ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ಪತ್ರದಲ್ಲಿ ಬರ್ನಾರ್ಡ್ ಷಾ ಹೇಳಿಕೆ ಉಲ್ಲೇಖಿಸಿದ್ದಾರೆ. ಅದನ್ನು ಕುಮಾರಸ್ವಾಮಿಗೆ ರೆಫರ್ ಮಾಡಿ ಹೇಳಿಲ್ಲ. ನಮಗೇ ಹೇಳಿರುವುದೆಂದು ಯಾಕೆ ಅಂದುಕೊಳ್ಳಬೇಕು? ಗಾದೆ, ನಾಣ್ಣುಡಿ ಹೇಳಿದಾಗ ಅದು ನನಗೇ ಅನ್ವಯವಾಗುತ್ತದೆಂದು ಅಂದುಕೊಳ್ಳಲು ಬರುವುದಿಲ್ಲ. ಹೇಗೆ ಬೇಕೋ ಹಾಗೆ ಅರ್ಥ ಮಾಡಿಕೊಳ್ಳಲು ಆಗುವುದಿಲ್ಲ ಎಂದು ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದರು.

ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ವಿರುದ್ಧ ಎಫ್‍ಐಆರ್ ದಾಖಲು ವಿಚಾರವಾಗಿ ಮಾತನಾಡಿದ ಡಾ.ಜಿ.ಪರಮೇಶ್ವರ್, ಯಾರ ಮೇಲೆ ಯಾರು ಆರೋಪ ಮಾಡುತ್ತಾರೆಂಬುದು ಗೊತ್ತಿಲ್ಲ. ದಿನ ಬೆಳಗಾದರೆ ಇದೇ ಆಗಿದೆ. ಸಾರ್ವಜನಿಕ, ರಾಜಕೀಯ ಜೀವನ ಇಷ್ಟು ಕಲುಷಿತವಾದರೆ ಕಷ್ಟ ಎಂದು ವಿಷಾದಿಸಿದರು.

ಮುಡಾ ಪ್ರಕರಣದಲ್ಲಿ ನ್ಯಾಯಾಲಯ ತೀರ್ಮಾನ ಏನು ಬರುತ್ತದೆಂದು ಕಾದು ನೋಡೋಣ. ಸಿಬಿಐಗೆ ನೀಡಲಾಗಿದ್ದ ಮುಕ್ತ ಸಮ್ಮತಿ ವಾಪಸ್ ಪಡೆದಿರುವ ಸರಕಾರದ ನಿರ್ಧಾರವನ್ನು ಗಮನಿಸಿಯೇ ನ್ಯಾಯಾಲಯ ಆದೇಶ ಮಾಡುತ್ತದೆ. ಬೇರೆ ರಾಜ್ಯಗಳು ಈ ತೀರ್ಮಾನ ತೆಗೆದುಕೊಂಡಿವೆ. ನ್ಯಾಯಾಲಯ ಇದನ್ನು ಪರಿಗಣಿಸಿಯೇ ಆದೇಶ ಕೊಡುತ್ತದೆ ಎಂದು ಜಿ.ಪರಮೇಶ್ವರ್ ತಿಳಿಸಿದರು.

‘ಸರಕಾರ ಉರುಳಿಸಲು 1,200 ಕೋಟಿ ರೂ. ರೆಡಿಯಾಗಿದೆ ಎಂಬ ಬಿಜೆಪಿ ಹಿರಿಯ ನಾಯಕ ಯತ್ನಾಳ್ ಹೇಳಿಕೆ ಸಂಬಂಧ ತನಿಖೆ ನಡೆಸಬೇಕಿದೆ. ಸರಕಾರ ಅಸ್ಥಿರಕ್ಕೆ 1ಸಾವಿರ ಕೋಟಿ ರೂ. ಸಂಗ್ರಹಿಸಿರುವ ಬಗ್ಗೆ ಯತ್ನಾಳ್ ಅವರಿಗೇ ಕೇಳಬೇಕು. ಅಷ್ಟೊಂದು ಹಣ ಎಲ್ಲಿಟ್ಟಿದ್ದಾರೆ, ಇದೆಲ್ಲದರ ಹಿಂದೆ ಯಾರಿದ್ದಾರೆ ಎಂಬುದರ ಮಾಹಿತಿ ತಿಳಿಯಲು ಸೂಕ್ತ ತನಿಖೆ ಆಗಬೇಕು’

-ಡಾ.ಜಿ.ಪರಮೇಶ್ವರ್, ಗೃಹ ಸಚಿವ.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News