ಬೆಂಗಳೂರು | ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನ ಪ್ರಜೆ ಸೇರಿ ನಾಲ್ವರು ವಿದೇಶಿಗರ ಬಂಧನ

Update: 2024-09-30 13:13 GMT

ಸಾಂದರ್ಭಿಕ ಚಿತ್ರ

ಬೆಂಗಳೂರು: ಹೆಸರನ್ನು ಬದಲಿಸಿಕೊಂಡು ಆನೇಕಲ್ ತಾಲೂಕಿನ ಜಿಗಣಿಯಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನ ಮೂಲದ ಪ್ರಜೆ ಸೇರಿ ನಾಲ್ವರು ವಿದೇಶಿಗರನ್ನು ಜಿಗಣಿ ಠಾಣಾ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ಪಾಕಿಸ್ತಾನ ಮೂಲದ ಪ್ರಜೆ ರಶೀದ್ ಸಿದ್ದೀಕಿ ಯಾನೆ ಶಂಕರ್ ಶರ್ಮಾ(48) ಹಾಗೂ ಆಯುಷ್ ಅನಿಫ್ ಯಾನೆ ಆಶಾ ಶರ್ಮಾ (38), ಮುಹಮ್ಮದ್ ಹನೀಫ್ ಯಾನೆ ರಾಮ್ ಬಾಬಾ ಶರ್ಮಾ (73), ರುಬೀನಾ ಯಾನೆ ರಾಣಿ ಶರ್ಮಾ(61) ಎಂಬುವರನ್ನು ಪೊಲೀಸರು ಬಂಧಿಸಿರುವುದಾಗಿ ಗೊತ್ತಾಗಿದೆ.

ಧರ್ಮದ ವಿಚಾರಕ್ಕೆ ಪಾಕಿಸ್ತಾನದಲ್ಲಿ ಭಿನ್ನಾಭಿಪ್ರಾಯ ಉಂಟಾದ ಸಂದರ್ಭದಲ್ಲಿ ರಶೀದ್ ಸಿದ್ದೀಕಿ ಪಾಕಿಸ್ತಾನ ತೊರೆದು ಬಾಂಗ್ಲಾದೇಶದ ಢಾಕಾದಲ್ಲಿ ನೆಲಸಿದ್ದನು. ಬಳಿಕ ಢಾಕಾದಲ್ಲಿ ಓರ್ವ ಯುವತಿಯನ್ನು ವಿವಾಹವಾಗಿ ಆ ಬಳಿಕ, ರಷೀದ್ ಸಿದ್ದಿಕಿ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ 2014ರಲ್ಲಿ ಅಕ್ರಮವಾಗಿ ಹೊಸದಿಲ್ಲಿಗೆ ಬಂದಿದ್ದಾರೆ. ಅಲ್ಲಿನ ಸ್ಥಳೀಯ ವ್ಯಕ್ತಿಯ ನೆರವಿನಿಂದ ಆಧಾರ್ ಕಾರ್ಡ್, ಚಾಲನಾ ಪರವಾನಗಿ, ಪಾಸ್‍ ಪೋರ್ಟ್ ಮಾಡಿಸಿಕೊಂಡಿದ್ದಾನೆ. ನಂತರ, 2018ರಲ್ಲಿ ಕುಟುಂಬ ಸಮೇತ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಜಿಗಣಿಗೆ ಬಂದು ವಾಸವಾಗಿದ್ದನು ಎಂದು ತಿಳಿದು ಬಂದಿದೆ.

ರಶೀದ್ ಸಿದ್ದಿಕಿ, ಜಿಗಣಿಯಲ್ಲಿ ಮನೆಮಾಡಿ ಆನ್‍ಲೈನ್ ಪುಡ್ ಡೆಲಿವರಿ ಮಾಡುತ್ತಿದ್ದನು ಎನ್ನಲಾಗಿದೆ. ಈ ನಡುವೆ ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು, ರಶೀದ್ ಸಿದ್ದೀಕಿ ಜಿಗಣಿಯಲ್ಲಿ ವಾಸವಿದ್ದ ಬಗ್ಗೆ ಜಿಗಣಿ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಗುಪ್ತಚರ ಇಲಾಖೆ ಅಧಿಕಾರಿಗಳ ಮಾಹಿತಿ ಆಧರಿಸಿ, ಜಿಗಣಿ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಕುಟುಂಬ ಸಮೇತ ರಶೀದ್ ಸಿದ್ದೀಕಿಯನ್ನು ಬಂಧಿಸಿದ್ದು, ಈ ಸಂಬಂಧ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಪಾಕಿಸ್ತಾನದ ಪ್ರಜೆ ಸೇರಿ ಬಂಧಿತ ನಾಲ್ಕು ಮಂದಿಯೂ ಹತ್ತು ವರ್ಷದಿಂದ ಭಾರತದಲ್ಲಿದ್ದು, ಬೆಂಗಳೂರಿಗೆ ಬಂದು ಒಂದು ವರ್ಷವಾಗಿದೆ. ಹತ್ತು ವರ್ಷದಿಂದ ಈ ವಿಚಾರ ಯಾಕೆ ಗುಪ್ತಚರ ಅಧಿಕಾರಿಗಳಿಗೆ ಗೊತ್ತಾಗಿಲ್ಲ?, ಇಲ್ಲಿನ ಪಾಸ್‍ ಪೋರ್ಟ್, ಆಧಾರ್ ಕಾರ್ಡ್ ಕೂಡ ಮಾಡಿಸಿಕೊಂಡಿದ್ದಾರೆ. ಹೆಸರು ಬದಲಾಯಿಸಿಕೊಂಡು ರೆಸ್ಟೋರೆಂಟ್ ನಡೆಸುತ್ತಿರುವುದಾಗಿ ಮಾಹಿತಿ ಬಂದಿದೆ. ಸದ್ಯ ಜಿಗಣಿ ಪೊಲೀಸರು ಅವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದು, ತನಿಖೆಯ ಬಳಿ ಎಲ್ಲ ಮಾಹಿತಿ ಗೊತ್ತಾಗಲಿದೆ’

-ಡಾ.ಜಿ.ಪರಮೇಶ್ವರ್, ಗೃಹ ಸಚಿವ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News