ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸುಧೀಂದ್ರ-ನೇಪಾಳ ಪ್ರಧಾನಿ ಚರ್ಚೆ

Update: 2024-09-29 15:23 GMT

ಬೆಂಗಳೂರು : ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಸ್.ಪಿ. ಸುಧೀಂದ್ರ ಶನಿವಾರ ನೇಪಾಳಕ್ಕೆ ಭೇಟಿ ನೀಡಿ ಅಲ್ಲಿನ ಹಂಗಾಮಿ ಪ್ರಧಾನಿ ಪ್ರಕಾಶ್ ಮಾನ್ ಸಿಂಗ್ ಅವರೊಂದಿಗೆ ಜೈವಿಕ ಇಂಧನಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಮಾಲೋಚನೆ ನಡೆಸಿದರು.

ನೇಪಾಳ ದೇಶದಲ್ಲಿ ಜೈವಿಕ ಇಂಧನಗಳ ಅಭಿವೃದ್ಧಿ ಕ್ಷೇತ್ರದಲ್ಲಿ ಆಗಿರುವ ಸಾಧನೆಗಳ ಬಗ್ಗೆ ಅವರನ್ನು ಕೇಳಿ ತಿಳಿದುಕೊಂಡರು, ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಳತ್ವದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಸಹಕಾರ ಮತ್ತು ಮಾರ್ಗದರ್ಶನದಲ್ಲಿ ಜೈವಿಕ ಇಂಧನಗಳ ಅಭಿವೃದ್ಧಿಗಾಗಿ ಹೆಚ್ಚಿನ ಒತ್ತನ್ನು ನೀಡಲಾಗುತ್ತಿದೆ ಎಂಬ ಅಂಶವನ್ನು ಸುಧೀಂದ್ರ, ಪ್ರಧಾನಮಂತ್ರಿಗೆ ತಿಳಿಸಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಹಿಂದಿನ ಅವಧಿಯಲ್ಲಿ ಬಯೋಡೀಸೆಲ್ ಮಿಶ್ರಣ ಬಳಕೆಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮೋಟಾರನ್ನು ಬೆಂಗಳೂರಿನಿಂದ ಚೆನ್ನೈವರೆಗೆ ಪ್ರಾತ್ಯಕ್ಷಿಕೆಯಾಗಿ ಕಳುಹಿಸುವ ಮೂಲಕ ಹೊಸ ಪ್ರಯೋಗ ಮಾಡಿದ್ದರು, ಹೊಂಗೆ, ಬೇವು, ಸಿಮರೂಬ ಬೀಜಗಳಿಂದ ತೆಗೆದ ಎಣ್ಣೆ ಮತ್ತು ಕರೆದ ಎಣ್ಣೆ ಬಳಸಿ ಬಯೋ ಡೀಸೆಲ್ ಉತ್ಪಾದನೆ ಮಾಡಲಾಗುತ್ತಿದೆ ಎಂಬ ಮಾಹಿತಿಯನ್ನು ಸುಧೀಂದ್ರ ಹಂಚಿಕೊಂಡರು.

ಬಯೋ ಡೀಸೆಲ್ ಗುಣಮಟ್ಟವನ್ನು ಪರಿಶೀಲಿಸುವ ದೇಶದ ಏಕೈಕ ಪ್ರಯೋಗಾಲಯ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಸ್ಥಾಪಿಸಲಾಗಿದೆ. ಧಾನ್ಯಗಳಿಂದ ಎಥನಾಲ್, ಘನ ತ್ಯಾಜ್ಯದಿಂದ ಗ್ಯಾಸ್ ಮತ್ತು ಕಂಪ್ರೆಸ್ಟ್ ಬಯೋ ಗ್ಯಾಸ್ ಸಿಬಿಜಿ ಹೀಗೆ ಎಲ್ಲ ಆಯಾಮಗಳಿಂದ ಕರ್ನಾಟಕ ರಾಜ್ಯವನ್ನು ಕಾರ್ಬನ್ ನ್ಯೂಟ್ರಲ್ ರಾಜ್ಯವನ್ನಾಗಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಿವೆ. ಇವುಗಳನ್ನು ವೀಕ್ಷಿಸಲು ಕರ್ನಾಟಕಕ್ಕೆ ಭೇಟಿ ನೀಡುವಂತೆ ನೇಪಾಳ ಪ್ರಧಾನಿಯನ್ನು ಸುಧೀಂದ್ರ ಆಹ್ವಾನಿಸಿದರು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News