ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ನಿಧಿ ಅನ್ಯ ಉದ್ದೇಶಕ್ಕೆ ಬಳಕೆ : ವಿಜಯೇಂದ್ರ ಕಿಡಿ
ಬೆಂಗಳೂರು : ಕಟ್ಟಡ ಕಾರ್ಮಿಕರ ಬಡ ಮಕ್ಕಳ ಶಿಕ್ಷಣ ಹಾಗೂ ಇತರ ಅವಶ್ಯಕತೆಗಳಿಗಾಗಿ ರಾಜ್ಯ ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನಿಧಿಯಲ್ಲಿರುವ ಹಣವನ್ನು ಅನ್ಯ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳುತ್ತಿರುವ ಸರಕಾರದ ಕ್ರಮ ಸರಿಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಅವರು, ಗ್ಯಾರಂಟಿ ಯೋಜನೆಗಳ ಜಾತ್ರೆಯಲ್ಲಿ ಮುಳುಗಿ ಒಂದೇ ಒಂದು ಹೊಸ ಯೋಜನೆಗಳನ್ನು ಜಾರಿಗೊಳಿಸದೆ, ಯಾವೊಂದು ಹೊಸ ಕಾಮಕಾರಿಗಳಿಗೆ ಚಾಲನೆ ನೀಡದ ಆಡಳಿತ ಯಂತ್ರಕ್ಕೆ ತುಕ್ಕು ಹಿಡಿದಿರುವ ಈ ಸರಕಾರದಲ್ಲಿ ಎಸ್.ಟಿ ನಿಗಮದ ಹಣ ಲೂಟಿಯಾಯಿತು. ಬೊಕ್ಕಸ ಬರಿದು ಮಾಡಿಕೊಂಡು ಶೋಷಿತ ಸಮುದಾಯಗಳ ಅಭಿವೃದ್ಧಿಗೆ ಮೀಸಲಿದ್ದ ಹಣವನ್ನೆಲ್ಲಾ ಅನ್ಯ ಕಾರ್ಯಗಳಿಗೆ ಬಳಸಿಕೊಂಡರು ಎಂದು ಟೀಕಿಸಿದ್ದಾರೆ.
ಇದೀಗ ಕಾರ್ಮಿಕರ ಸರದಿ ಎಂಬಂತೆ ಕಟ್ಟಡ ಕಾರ್ಮಿಕರ ಬಡ ಮಕ್ಕಳ ಶಿಕ್ಷಣ ಹಾಗೂ ಶ್ರೇಯೋಭಿವೃದ್ಧಿಗಾಗಿ ಕರ್ನಾಟಕ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನಿಧಿಯಲ್ಲಿ ಮೀಸಲಿಟ್ಟ ಹಣವನ್ನು ಇತರ ಉದ್ದೇಶಗಳಿಗೆ ಬಳಸಿರುವುದು ದುರಂತದ ದೌರ್ಭಾಗ್ಯವಲ್ಲದೆ ಬೇರೇನೂ ಅಲ್ಲ. ಅಭಿವೃದ್ಧಿ ಶೂನ್ಯ ಕಾಂಗ್ರೆಸ್ ಸರಕಾರಕ್ಕೆ ಅಂಟಿರುವ ಭ್ರಷ್ಟಾಚಾರ, ಅಧಿಕಾರದ ವ್ಯಾಮೋಹ, ಭಂಡತನಕ್ಕೆ ಜನರೇ ತಕ್ಕಪಾಠ ಕಲಿಸುವ ಕಾಲ ದೂರವಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.