ಸರಕಾರಗಳೇ ಉದ್ದೇಶಪೂರ್ವಕವಾಗಿ ಶಾಂತಿ ಕೆಡಿಸುತ್ತಿವೆ : ಡಾ.ಮೂಡ್ನಾಕೂಡು ಚಿನ್ನಸ್ವಾಮಿ

Update: 2024-09-28 17:40 GMT

ಡಾ.ಮೂಡ್ನಾಕೂಡು ಚಿನ್ನಸ್ವಾಮಿ

ಬೆಂಗಳೂರು : ದೇಶದಲ್ಲಿ ಶಾಂತಿ ನೆಲೆಸಿದ್ದರೂ, ಉದ್ದೇಶಪೂರ್ವಕವಾಗಿ ಸರಕಾರಗಳು ಶಾಂತಿಯನ್ನು ಕೆಡಿಸುತ್ತಿವೆ. ಸರಕಾರಗಳೇ ಕೋಮುವಾದಿಗಳಾದರೆ ಏನು ಮಾಡುವುದು ಎಂದು ಸಾಹಿತಿ ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

ಶನಿವಾರ ಇಲ್ಲಿನ ಕಾಪೋರೇಷನ್ ವೃತ್ತದ ಬಳಿಯಿರುವ ಸೌಹಾರ್ದ ಕಟ್ಟಡದಲ್ಲಿ ಆಯೋಜಿಸಿದ್ದ ‘ಸೌಹಾರ್ದತೆ-ವೈವಿಧ್ಯತೆ ರಾಜ್ಯಮಟ್ಟದ ಚಿಂತನ ಶಿಬಿರ’ದಲ್ಲಿ ಮಾತನಾಡಿದ ಅವರು, ಒಂದು ರಾಜಕೀಯ ಪಕ್ಷವು ಮುಸಾಲ್ಮಾನರೆಲ್ಲ ಅನ್ಯರು ಎಂದು ಹೇಳುತ್ತಿದೆ. ಒಂದು ಪಂಗಡವನ್ನು ಸಂಪೂರ್ಣವಾಗಿ ನಿಷೇಧಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದರು.

ಯಾವ ಧರ್ಮವೂ ಇನ್ನುಬ್ಬರ ತಟ್ಟಗೆ ಕೈ ಹಾಕಿ ಎಂದು ಹೇಳುವುದಿಲ್ಲ. ಆದರೆ ಕರ್ನಾಟಕದಲ್ಲಿ ಅದು ಎರಡು ವರ್ಷಗಳ ಹಿಂದೆ ಮುನ್ನೆಗೆ ಬಂದಿತ್ತು. ದೇವಸ್ಥಾನಗಳ ಮುಂದೆ ಹೂ, ಹಣ್ಣು, ತಂಗಿನಕಾಯಿ ಮಾರುವ ಮುಸ್ಲಿಮರಿಗೆ ನಿಷೇಧವೇರುವ ಘಟನೆಗಳು ನಡೆದವು. ಕೆಳಮಟ್ಟಕ್ಕೆ ಇಳಿದು ನಾಡಿನ ಸೌಹಾರ್ದತೆಯನ್ನು ಹಾಳು ಮಡಿದರು ಎಂದು ಅವರು ತಿಳಿಸಿದರು.

ದೇಶದಲ್ಲಿ ಹಿಂದಿನ ಹತ್ತು ವರ್ಷಗಳಿಂದ ಬುಲ್ಡೋಜರ್ ಪ್ರಯೋಗಳನ್ನು ಮಾಡುತ್ತಿದ್ದಾರೆ. ಗಲಭೆಗಳಾದರೆ ಮುಸಲ್ಮಾನರ ಅಂಗಡಿ, ಮನೆಗಳನ್ನು ಕೆಡವಲಾಗುತ್ತಿದೆ. ಇಷ್ಟಾದರೂ ನ್ಯಾಯಾಲಯವು ಸುಮ್ಮನೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.

ಅಲ್ಪಸಂಖ್ಯಾತರ ಮೇಲಿನ ದ್ವೇಷವನ್ನು ಉಂಟು ಮಾಡಿ ಬಡವರೆಲ್ಲ ಶ್ರೀಮಂತರಿಗೆ ಮತ ಹಾಕುವಂತೆ ಮಾಡಲಾಗುತ್ತಿದೆ. ಭಕ್ತಿ ಆತ್ಮ ವಿಮೋಚನೆಗೆ ಒಳ್ಳಯದೇ, ಆದರೆ ರಾಜಕಾರಣದಲ್ಲಿ ಅದು ನಿರಂಕುಶತೆಯನ್ನು ಹುಟ್ಟು ಹಾಕುತ್ತದೆ ಎಂದು ಅವರು ತಿಳಿಸಿದರು.

ಇತ್ತೀಚೆಗೆ ಭಾರತೀಯ ಎನ್ನುವುದನ್ನು ಹಿಂದೂ ಎಂಬ ಪದಕ್ಕೆ ಸಮೀಕರಣ ಮಾಡಲಾಗುತ್ತಿದೆ. ಭಾರತೀಯ ಎಂದರೆ ಹಿಂದು ಎಂದು ಹೇಳಬೇಕು ಎನ್ನುವುದು ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಡಾ.ಮೂಡ್ನಾಕೂಡು ಚಿನ್ನಸ್ವಾಮಿ ತಿಳಿಸಿದರು.

ನಿವೃತ್ತ ಪೋಲಿಸ್ ಮಹಾನಿರ್ದೇಶಕ ಡಾ.ಅಜಯ್‍ಕುಮಾರ್ ಸಿಂಗ್ ಮಾತನಾಡಿ, ಸಮಾಜ, ದೇಶ ವೈವಿಧ್ಯತೆಯಿಂದ ಕೂಡಿದ್ದು, ಈ ವೈವಿಧ್ಯತೆಯ ನಡುವೆ ಹೊಂದಾಣಿಕೆ ಇದೆ. ಒಂದು ವೇಳೆ ಹೊಂದಾಣಿಕೆ ಇಲ್ಲದೆ ಹೋದಲ್ಲಿ, ಅಪಾಯವಾಗುತ್ತದೆ ಎಂದರು.

ಸಮಾಜದಲ್ಲಿ ಸೌಹಾರ್ದತೆ ಇಲ್ಲದಿದ್ದರೆ, ಶಾಂತಿ ಕಾಪಾಡಲು ಸಾಧ್ಯವಾಗುವುದಿಲ್ಲ. ಶಾಂತಿ ಇಲ್ಲದಿದ್ದರೆ ಅಭಿವೃದ್ಧಿ, ವಿಕಾಸ ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಇತ್ತೀಚೆಗೆ ದೇಶಭಕ್ತಿ, ಧರ್ಮದ ಹೆಸರಿನಲ್ಲಿ ಅಶಾಂತಿ ಸೃಷ್ಟಿಸಲಾಗುತ್ತಿದೆ. ಧರ್ಮವನ್ನು ಸುಳ್ಳು ವ್ಯಾಖ್ಯಾನ ಮಾಡುವ ಮೂಲಕ ದ್ವೇಷವನ್ನು ಉಂಟು ಮಾಡಲಾಗುತ್ತಿದೆ. ಇದನ್ನು ವಿಫಲಗೊಳಿಸಿ ಸೌಹಾರ್ಧತೆಯನ್ನು ಉಂಟು ಮಾಡುವುದು ನಮ್ಮ ಜವಾಬ್ದಾರಿಯಾಗಿದೆ. ಇದೇ ನಮ್ಮ ದೇಶಪ್ರೇಮವೂ ಆಗಿದೆ ಎಂದು ಅವರು ತಿಳಿಸಿದರು.

ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಯು. ನಿಸಾರ್ ಅಹಮದ್ ಮಾತನಾಡಿ, ಸೌಹಾರ್ದ ಮತ್ತು ವೈವಿಧ್ಯತೆಯ ಚಿಂತನೆಗಳನ್ನು ಇಟ್ಟುಕೊಂಡು ಜನರೊಂದಿಗೆ ಚರ್ಚೆ ಮಾಡಬೇಕು. ಚಿಂತನೆಗಳು ಕೆಳ ಹಂತದವರೆಗೂ ತಲುಪಬೇಕು. ನಾವೆಲ್ಲ ಸೇರಿ ಒಂದು ಯೋಜನೆಯನ್ನು ರೂಪಿಸಿಕೊಳ್ಳಬೇಕು. ಆಯೋಗವು ಇದಕ್ಕೆ ಕೈಜೋಡಿಸಲಿದೆ ಎಂದರು.

ಕಾರ್ಯಕ್ರಮದಲ್ಲಿ ಸೌಹಾರ್ದ ಕರ್ನಾಟಕದ ಸಮನ್ವಯಕಾರ ಡಾ. ಎಸ್. ವೈ. ಗುರುಶಾಂತ್ ಸೇರಿ ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News