ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ರಾಜೀನಾಮೆ ನೀಡಬೇಕು : ಶರತ್ ಬಚ್ಚೇಗೌಡ

Update: 2024-09-29 14:52 GMT

ಬೆಂಗಳೂರು : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಎಫ್‍ಐಆರ್ ದಾಖಲಿಸಲು ಜನಪ್ರತಿನಿಧಿ ನ್ಯಾಯಾಲಯ ಆದೇಶ ನೀಡಿರುವುದರಿಂದ, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ಆಗ್ರಹಿಸಿದರು.

ರವಿವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 2018ರಿಂದ ಬಿಜೆಪಿ ಸರಕಾರ ಅನೈತಿಕವಾದ ಚುನಾವಣಾ ಬಾಂಡ್ ಗಳನ್ನು ಕಾನೂನಾತ್ಮಕವಾಗಿ ಜಾರಿ ಮಾಡಿತ್ತು. ಕಾನೂನಿನ ಅಡಿಯಲ್ಲಿ ಭ್ರಷ್ಟಾಚಾರವನ್ನು ನಡೆಸುವ ಈ ವ್ಯವಸ್ಥೆಯನ್ನು ಸುಪ್ರೀಂ ಕೋರ್ಟ್ ಕೂಡ ಛೀಮಾರಿ ಹಾಕಿದೆ ಎಂದು ಹೇಳಿದರು.

2019ರಿಂದ ಆರಂಭವಾದ ಚುನಾವಣಾ ಬಾಂಡ್ ಮೂಲಕ 12 ಸಾವಿರ ಕೋಟಿ ರೂ. ದೇಣಿಗೆ ಪಡೆಯಲಾಗಿದೆ. ಈ ಪೈಕಿ ಸುಮಾರು 6500 ಕೋಟಿ ರೂ.ಗಳಷ್ಟು ದೇಣಿಗೆ ಬಿಜೆಪಿಗೆ ಸಿಕ್ಕಿದೆ. ಇದರ ಹೊರತಾಗಿ ಇನ್ನೆಷ್ಟು ಹಣ ಅನೈತಿಕವಾಗಿ ಸೇರಿರಬಹುದು ಎಂದು ಅಂದಾಜಿಸಿದರೆ, ಸುಮಾರು 15 ಸಾವಿರ ಕೋಟಿ ರೂ.ಗಳಷ್ಟು ಹಣ ಪಡೆದಿರಬಹುದು ಎಂದು ಅವರು ಹೇಳಿದರು.

ರಾಜ್ಯದಲ್ಲಿ ಬಿಜೆಪಿ ಸರಕಾರ 40 ಪರ್ಸೆಂಟ್ ಕಮಿಷನ್ ಸರಕಾರವಾಗಿತ್ತು. ಕೇಂದ್ರ ಸರಕಾರ 10 ಪರ್ಸೆಂಟ್ ಕಮಿಷನ್ ಎಂದು ಅಂದಾಜಿಸಿದರೂ ಕನಿಷ್ಠ 1.50 ಲಕ್ಷ ಕೋಟಿ ರೂ.ಗಳಷ್ಟು ಕಾಮಗಾರಿಗಳನ್ನು ಅಕ್ರಮವಾಗಿ ನೀಡಿರಬಹುದು. ಐಟಿ, ಸಿಬಿಐ, ಈಡಿ ದಾಳಿಯಾದ ಬಳಿಕ ಆಯಾ ಕಂಪನಿಗಳು ಬಿಜೆಪಿಗೆ ದೇಣಿಗೆ ನೀಡಿರುತ್ತವೆ. ದೇಣಿಗೆ ನೀಡಿದ ಬಳಿಕ ಈ ಕಂಪನಿಗಳು ಆರೋಪ ಮುಕ್ತವಾಗಿರುವುದು ಕಂಡುಬರುತ್ತದೆ ಎಂದು ಶರತ್ ಬಚ್ಚೇಗೌಡ ತಿಳಿಸಿದರು.

ಕಲ್ಪತರು ಗ್ರೂಪ್ ಮೇಲೆ ಐಟಿ ದಾಳಿಯಾದ ಬಳಿಕ ಹದಿನೈದು ದಿನಗಳಲ್ಲಿ ಅವರು 5 ಕೋಟಿ ರೂ.ಮೊತ್ತದ ಬಾಂಡ್ ಖರೀದಿ ಮಾಡಿದರು. ನಂತರ ಈ ಕಂಪನಿ ಮೇಲಿನ ತನಿಖೆ ಸಡಿಲವಾಗುತ್ತದೆ. ಅರಬಿಂದೋ ಫಾರ್ಮಾ ಮೇಲೆ ಈಡಿ ದಾಳಿ ಬಳಿಕ ಅವರು 5 ಕೋಟಿ ರೂ.ಗಳಷ್ಟು ಚುನಾವಣಾ ಬಾಂಡ್ ಖರೀದಿ ಮಾಡುತ್ತಾರೆ. ನಂತರ ಈಡಿ ತನಿಖೆ ಕೈ ಬಿಡಲಾಗುತ್ತದೆ. ಈ ಮೂಲಕ ಕೇಂದ್ರ ಸರಕಾರ ತಮಗೆ ಯಾರಿಂದ ಹಣ ವಸೂಲಿ ಮಾಡಿಕೊಳ್ಳಬೇಕೋ ಆಗೆಲ್ಲಾ ಕಂಪನಿಗಳ ಮೇಲೆ ಒತ್ತಡ ತರುತ್ತಾರೆ ಎಂದು ಅವರು ದೂರಿದರು.

ಬಿಜೆಪಿ ತಮಗೆ ಬಂದಿರುವ 6500 ಕೋಟಿ ರೂ.ಗಳನ್ನು ಯಾವಾಗ ಯಾರಿಂದ ಎಷ್ಟು ಹಣ ಬಂದಿದೆ ಎಂದು ಹೇಳಬೇಕು. ಮೇಘ ಇಂಜಿನಿಯರಿಂಗ್ ಸಂಸ್ಥೆಯಿಂದ 1 ಸಾವಿರ ಕೋಟಿ ರೂ.ಗಳಷ್ಟು ಚುನಾವಣಾ ಬಾಂಡ್ ಪಡೆದಿದ್ದು, ಇವರಿಗೆ ನಾಗಪುರದ ಹೈವೇ, ಬುಲೆಟ್ ರೈಲು ನಿಲ್ದಾಣ, ಟನಲ್ ನಿರ್ಮಾಣಕ್ಕೆ ಟೆಂಡರ್ ನೀಡಲಾಗಿದೆ ಎಂದು ಶರತ್ ಬಚ್ಚೇಗೌಡ ಆರೋಪಿಸಿದರು.

ಅಂಬಾನಿ ಹಾಗೂ ರಿಲಾಯನ್ಸ್ ಕಂಪನಿಗೆ ಸೇರಿದ ಕ್ವಿಕ್ ಸಪ್ಲೈ ಚೈನ್ ಸಂಸ್ಥೆ 375 ಕೋಟಿ ರೂ., ಭಾರ್ತಿ ಏರ್‌ ಟೆಲ್ ಕಂಪನಿ, ವೇದಾಂತ ಕಂಪನಿಯಿಂದಲೂ ಈ ರೀತಿ ದೇಣಿಗೆ ಸಂಗ್ರಹಿಸಲಾಗಿದೆ. ಲಾಟರಿ ಏಜೆನ್ಸಿ ಮಾಲಕ ಸ್ಯಾಂಟಿಯಾಗೊ ಮಾರ್ಟಿನ್ ಮಗ ಚಾಲ್ರ್ಸ್ ಮಾರ್ಟಿನ್ ಅವರನ್ನು ಪಕ್ಷದ ಸದಸ್ಯರನ್ನಾಗಿ ಮಾಡಿಕೊಂಡು ಈ ಕಂಪನಿಯಿಂದ 400 ಕೋಟಿ ರೂ.ದೇಣಿಗೆ ಪಡೆದಿದ್ದಾರೆ. ಇದೆಲ್ಲದರ ಹಿಂದೆ ಇರುವ ಕಿಂಗ್ ಪಿನ್ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಎಂದು ಅವರು ಆರೋಪಿಸಿದರು.

ನಿರ್ಮಲಾ ಸೀತಾರಾಮನ್ 2016ರಿಂದ ಎರಡು ಬಾರಿ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಇಷ್ಟು ವರ್ಷಗಳಲ್ಲಿ ರಾಜ್ಯಕ್ಕೆ ಅವರ ಕೊಡುಗೆ ಏನು ಎಂದು ನೋಡಿದರೆ, ಪ್ರತಿ ವರ್ಷ ಬರುವ ತೆರಿಗೆ ಹಾಗೂ ಅನುದಾನದ ಪಾಲುಗಳನ್ನು ಕಡಿಮೆ ಮಾಡಿರುವುದು. ಇದರ ಹೊರತಾಗಿ ರಾಜ್ಯಕ್ಕೆ ಯಾವುದೇ ಪ್ರಯೋಜನ ಆಗಿಲ್ಲ ಎಂದು ಶರತ್ ಬಚ್ಚೇಗೌಡ ದೂರಿದರು.

ಜಿಎಸ್‍ಟಿ ಅನುದಾನ, ಬರ ಪರಿಹಾರ ಕೇಳಿದಾಗ ನಮಗೆ ನಿರೀಕ್ಷಿತ ಮಟ್ಟದಲ್ಲಿ ಬಂದಿಲ್ಲ. ಬದಲಿಗೆ ಇವರ ಅಧಿಕಾರ ಅವಧಿಯಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನ ಮೊತ್ತದಲ್ಲಿ 1.87 ಲಕ್ಷ ಕೋಟಿ ರೂ.ಕಡಿತವಾಗಿದೆ ಎಂದು ಅವರು ಕಿಡಿಗಾರಿದರು.

ನಿರ್ಮಲಾ ಸೀತಾರಾಮನ್ ಮಾತೆತ್ತಿದರೆ ಭೀಕ್ಷಾಪಾತ್ರೆ ಇಟ್ಟುಕೊಂಡು ಬರುತ್ತಿದ್ದಾರೆ ಎಂದು ಹೇಳುತ್ತಾರೆ. ನಾವು ಭಿಕ್ಷೆ ಬಿಡುತ್ತಿಲ್ಲ. ನಮ್ಮ ರಾಜ್ಯದಿಂದ ಪ್ರತಿ ವರ್ಷ 4.30 ಲಕ್ಷ ಕೋಟಿ ರೂ.ಆದಾಯ ನೀಡುತ್ತಿದ್ದೇವೆ. ಅದರಲ್ಲಿ ನಮಗೆ ಕೇವಲ 50 ಸಾವಿರ ಕೋಟಿ ರೂ.ಮಾತ್ರ ಬರುತ್ತಿದೆ. ಈಗ ಭಿಕ್ಷಾಪಾತ್ರೆ ಹಿಡಿದಿರುವವರು ಯಾರು ಎಂದು ಆತ್ಮಾವಲೋಕನ ಮಾಡಿಕೊಳ್ಳಲಿ. ನಾವು ನಮ್ಮ ತೆರಿಗೆಯಲ್ಲಿ ನಮ್ಮ ಪಾಲು ಕೇಳುತ್ತಿದ್ದೇವೆ ಎಂದು ಶರತ್ ಬಚ್ಚೇಗೌಡ ಹೇಳಿದರು.

ಚುನಾವಣಾ ಬಾಂಡ್ ಕಿಂಗ್ ಪಿನ್ ಆಗಿರುವ ನಿರ್ಮಲಾ ಸೀತಾರಾಮನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಬೀಗ ಹಾಕಿ ಪ್ರತಿಭಟನೆ ಮಾಡುವ ಬಿಜೆಪಿ ನಾಯಕರಿಗೆ ನಾವೇ ಬೀಗ ಕೊಟ್ಟು ವಿಮಾನ ಪ್ರಯಾಣದ ಟಿಕೆಟ್ ಕೊಡುತ್ತೇವೆ ಅವರು ದಿಲ್ಲಿಯ ಹಣಕಾಸು ಇಲಾಖೆ ಕಚೇರಿಗೆ ಬೀಗ ಹಾಕಲಿ ಎಂದು ಅವರು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ರಾಮಚಂದ್ರಪ್ಪ ಹಾಗೂ ಮಾಧ್ಯಮ ವಿಭಾಗದ ಸಹ ಅಧ್ಯಕ್ಷೆ ಐಶ್ವರ್ಯಾ ಮಹದೇವ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News