ಬೆಂಗಳೂರು | ಸರಕಾರಿ ನೌಕರಿಯ ಭರವಸೆ ನೀಡಿ ವಂಚನೆ ಆರೋಪ : ಆರು ಮಂದಿ ವಿರುದ್ಧ ಪ್ರಕರಣ ದಾಖಲು

Update: 2024-09-30 12:31 GMT

ಬೆಂಗಳೂರು : ಸರಕಾರಿ ನೌಕರಿಯ ಭರವಸೆ ನೀಡಿ ಖಾಸಗಿ ಕಂಪೆನಿ ಉದ್ಯೋಗಿಗೆ 28 ಲಕ್ಷ ರೂ. ವಂಚಿಸಿರುವ ಆರೋಪದಡಿ ಆರು ಮಂದಿಯ ವಿರುದ್ಧ ಇಲ್ಲಿನ ಬಂಡೇಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದಾಗಿ ವರದಿಯಾಗಿದೆ.

ಹೊಸಪಾಳ್ಯ ನಿವಾಸಿ ಎಚ್.ಕೆ.ರಾಘವೇಂದ್ರ ಎಂಬವರು ನೀಡಿದ ದೂರಿನನ್ವಯ ದಾವಣಗೆರೆ ಮೂಲದ ರಾಘವೇಂದ್ರ, ಮಂಜುನಾಥ್, ಸುನೀತಾ ಬಾಯಿ, ಗಾಯತ್ರಿ, ಸಚಿನ್ ಹಾಗೂ ತಿಲಕ್ ಎಂಬವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಿಲಾಗುತ್ತಿದೆ ಎಂದು ಬಂಡೇಪಾಳ್ಯ ಠಾಣಾ ಪೊಲೀಸರು ತಿಳಿಸಿದ್ದಾರೆ.

ದೂರುದಾರ ಎಚ್.ಕೆ.ರಾಘವೇಂದ್ರ ಅವರು ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು, ಸ್ನೇಹಿತ ಕಿರಣ್ ಎಂಬಾತನ ಮೂಲಕ ದಾವಣಗೆರೆ ಮೂಲದ ರಾಘವೇಂದ್ರ ಎಂಬಾತನ ಪರಿಚಯವಾಗಿತ್ತು. ಆರೋಪಿ ರಾಘವೇಂದ್ರ ತನಗೆ ಸರಕಾರದ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳ ಪರಿಚಯವಿದ್ದು, ನಿಮಗೆ ಸರಕಾರಿ ಕೆಲಸ ಕೊಡಿಸುತ್ತೇನೆ. ಅಲ್ಲದೆ, ತನ್ನ ಸಹೋದರ ಮಂಜುನಾಥ್ ದಾವಣಗೆರೆಯಲ್ಲಿ ಎಇಇ ಆಗಿ ಕೆಲಸ ಮಾಡುತ್ತಿದ್ದಾನೆ ಎಂದು ನಂಬಿಸಿದ್ದ ಎಂದು ತಿಳಿದು ಬಂದಿದೆ.

ಆತನ ಮಾತು ನಂಬಿದ್ದ ದೂರುದಾರ ಎಚ್.ಕೆ.ರಾಘವೇಂದ್ರ ಮುಂಗಡವಾಗಿ 2021ರ ಫೆ.22ರಂದು 2 ಲಕ್ಷ ರೂ. ಹಣವನ್ನು ಆರೋಪಿಯ ಖಾತೆಗೆ ವರ್ಗಾವಣೆ ಮಾಡಿದ್ದರು. ನಂತರ ಆರೋಪಿ ಹೇಳಿದಂತೆ ಹಂತಹಂತವಾಗಿ ಆತನ ಪತ್ನಿ ಸುನೀತಾ ಬಾಯಿ, ಸಹೋದರ ಮಂಜುನಾಥ್, ಆತನ ಪತ್ನಿ ಗಾಯತ್ರಿ, ಆರೋಪಿತನ ಪರಿಚಯಸ್ಥ ಸಚಿನ್ ಮತ್ತು ತಿಲಕ್‍ಗೆ ನಗದು ರೂಪದಲ್ಲಿ ಆರೋಪಿಗೆ ಒಟ್ಟು 28.40 ಲಕ್ಷ ರೂ. ನೀಡಿದ್ದರು. ಆದರೆ, ನಂತರದಲ್ಲಿ ಆರೋಪಿ ಸರಕಾರಿ ಕೆಲಸ ಕೊಡಿಸಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ ಆರೋಪಿಗಳೆಲ್ಲರೂ ಸೇರಿ ಎಚ್.ಕೆ.ರಾಘವೇಂದ್ರ ಅವರಿಗೆ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಸದ್ಯ ಸರಕಾರಿ ಕೆಲಸದ ಭರವಸೆ ನೀಡಿ ವಂಚಿಸಿದ ದಾವಣಗೆರೆ ಮೂಲದ ರಾಘವೇಂದ್ರ ಮತ್ತು ಆತನ ಸಂಬಂಧಿಕರು, ಸ್ನೇಹಿತರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ದೂರುದಾರ ಎಚ್.ಕೆ.ರಾಘವೇಂದ್ರ ಅವರಿಗೆ ಪ್ರಕರಣ ಸಂಬಂಧ ಹಣ ವರ್ಗಾವಣೆಯಾಗಿರುವುದರ ಕುರಿತ ಸೂಕ್ತ ದಾಖಲೆಗಳನ್ನು ಒದಗಿಸುವಂತೆ ಸೂಚಿಸಲಾಗಿದೆ, ತನಿಖೆ ಮುಂದುವರೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News