ಗುಂಡಿ ಮುಚ್ಚುವ ಹೆಸರಿನಲ್ಲಿ ಸಾವಿರಾರು ಕೋಟಿ ರೂ. ಭ್ರಷ್ಟಾಚಾರ : ಎಎಪಿ

Update: 2024-10-07 16:32 GMT

ಬೆಂಗಳೂರು: ಮೂರು ವರ್ಷದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು 7,300 ಕೋಟಿ ರೂ.ಖರ್ಚು ಮಾಡಲಾಗಿದೆ. ರಸ್ತೆ ಗುಂಡಿ ಮುಚ್ಚುವ ಹೆಸರಿನಲ್ಲಿ ಸಾವಿರಾರು ಕೋಟಿ ರೂ. ಲೂಟಿ ಮಾಡಲಾಗಿದೆ ಎಂದು ಆಮ್ ಆದ್ಮಿ ಪಕ್ಷದ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ ಆರೋಪ ಮಾಡಿದ್ದಾರೆ.

ಸೋಮವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಯಾವುದೇ ಸರಕಾರ ಅಧಿಕಾರಕ್ಕೆ ಬಂದರೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಯಶಸ್ವಿಯಾಗಿ ರಸ್ತೆ ಗುಂಡಿಗಳನ್ನು ಮುಚ್ಚಲು ಸಾಧ್ಯವಾಗಿಲ್ಲ. ಆದರೆ, ರಸ್ತೆ ಗುಂಡಿ ಮುಚ್ಚುವ ಹೆಸರಿನಲ್ಲಿ ಮಾತ್ರ ಸಾವಿರಾರು ಕೋಟಿ ರೂ.ಗಳು ಲೂಟಿ ಮಾಡುತ್ತಿದ್ದಾರೆ ಎಂದು ದೂರಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರು ಬಿಬಿಎಂಪಿ ವ್ಯಾಪ್ತಿಯಲ್ಲಿನ ಎಲ್ಲ ರಸ್ತೆ ಗುಂಡಿಗಳನ್ನು ಮುಚ್ಚಿದ್ದೇವೆ ಎಂದು ಹೇಳಿದ್ದರು. ಆದರೆ ಈವರೆಗೂ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸವೇ ಆಗಿಲ್ಲ. ಬ್ರಾಂಡ್ ಬೆಂಗಳೂರು ಹೆಸರಿನಲ್ಲಿ ಸಾವಿರಾರು ಕೋಟಿ ರೂ. ಹಣ ಬಿಡುಗಡೆ ಮಾಡುತ್ತಿರುವುದು ಕಮಿಷನ್ ದಂಧೆಯಾಗಿದೆ ಎಂದು ಅವರು ತಿಳಿಸಿದರು.

ವಿಧಾನಸಭಾ ಕ್ಷೇತ್ರಗಳಲ್ಲಿ ರಸ್ತೆ ಗುಂಡಿಗಳು ಇರುವ ಕಡೆ ಆಮ್ ಆದ್ಮಿ ಪಕ್ಷದ ವತಿಯಿಂದ ಜನಾಂದೋಲನ ಮಾಡಲು ನಿರ್ಧರಿಸಿದ್ದೇವೆ. ಬಿಬಿಎಂಪಿ ಚುನಾವಣೆ ನಡೆಸುವಂತೆ ನ್ಯಾಯಾಲಯ ಸರಕಾರಕ್ಕೆ ಛೀಮಾರಿ ಹಾಕಿದ್ದರೂ ಭಂಡ ಸರಕಾರ, ಚುನಾವಣೆ ನಡೆಸಲು ಮುಂದಾಗಿಲ್ಲ. ಕಾರ್ಪರೇಟರ್‌ಗಳು ಇಲ್ಲದೆ ಜನರ ಸಮಸ್ಯೆ ಕೇಳುವವರೆ ಇಲ್ಲದಂತಾಗಿದೆ ಎಂದು ಮೋಹನ್‍ದಾಸರಿ ಬೇಸರ ವ್ಯಕ್ತಪಡಿಸಿದರು.

ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ ಮಾತನಾಡಿ, ನಗರದ ಶಾಸಕರುಗಳೇ ಬಿಬಿಎಂಪಿ ಚುನಾವಣೆ ನಡೆಸಲು ಅಡ್ಡಿಯಾಗಿದ್ದಾರೆ. ಬಿಜೆಪಿ ಬೇಕೆಂದೆ ಬಿಬಿಎಂಪಿ ಚುನಾವಣೆ ಮುಂದೂಡಿತ್ತು, ಇದೀಗ ಕಾಂಗ್ರೆಸ್ ಕೂಡ ಅದನ್ನೆ ಮಾಡುತ್ತಿದೆ. ಕೂಡಲೆ ಸರಕಾರ ಬಿಬಿಎಂಪಿ ಚುನಾವಣೆ ನಡೆಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಪಕ್ಷದ ಬೆಂಗಳೂರು ಉಪಾಧ್ಯಕ್ಷ ಅಶೋಕ್ ಮೃತ್ಯುಂಜಯ, ಯುವ ಘಟಕದ ಅಧ್ಯಕ್ಷ ಉಮೇಶ್ ಪಿಳ್ಳೆಗೌಡ, ಆಟೋ ಘಟಕದ ಅಧ್ಯಕ್ಷ ಅನಿಲ್ ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News