ಬೆಂಗಳೂರು | ನಗದು, ಚಿನ್ನಾಭರಣ ದೋಚುತ್ತಿದ್ದ ಆರೋಪಿಯ ಬಂಧನ : 30ಲಕ್ಷ ರೂ.ಮೌಲ್ಯದ ಮಾಲು ವಶ
ಬೆಂಗಳೂರು: ಮನೆಗಳ ಬೀಗ ಮುರಿದು ನಗದು, ಚಿನ್ನಾಭರಣ ಕಳ್ಳತನ ಮಾಡಿದ್ದ ಪ್ರಕರಣದಡಿ ಸಿಟಿ ಮಾರ್ಕೆಟ್ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿ 30 ಲಕ್ಷ ರೂ. ಬೆಲೆಬಾಳುವ 475 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.
ಮಂಜುನಾಥ ಯಾನೆ ಪಾರಿವಾಳ ಮಂಜ(38) ಬಂಧಿತ ಆರೋಪಿಯಾಗಿದ್ದು, ಈತ ಈ ಹಿಂದೆ ನಗರದ ನಗರ್ತಪೇಟೆ, ತಿಗಳರಪೇಟೆಯಲ್ಲಿ ವಾಸವಾಗಿದ್ದನು. ಈಗ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಮುಕುಂಡಪಲ್ಲಿ ಗ್ರಾಮದಲ್ಲಿ ನೆಲೆಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಚಿಕ್ಕಪೇಟೆಯ ಆರ್.ಟಿ. ಸ್ಟ್ರೀಟ್ಸ್, ಮಾಣಿಕ್ ಮೇವಾ ಅಂಗಡಿ ಸಮೀಪದ ನಿವಾಸಿ ಉಪೇಶ್ ಭಂಡಾರಿ ಎಂಬುವರ ಮನೆಯ ಬೀಗ ಮುರಿದು ಒಳನುಗ್ಗಿ 105 ಗ್ರಾಂ ಚಿನ್ನಾಭರಣ ಕಳ್ಳತನವಾಗಿದ್ದ ಬಗ್ಗೆ ಸಿಟಿ ಮಾರ್ಕೆಟ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯ ಬಂಧನದಿಂದ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯ ಮೂರು ಪ್ರಕರಣ, ಹಲಸೂರುಗೇಟ್ ಠಾಣೆಯ ಒಂದು ಪ್ರಕರಣ ಪತ್ತೆಯಾಗಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.