ಸಚಿವರ ಮೇಲೆ ಹಲ್ಲೆ ಊಹಾಪೋಹ ಅಷ್ಟೇ : ಸಚಿವ ಚಲುವರಾಯಸ್ವಾಮಿ
ಬೆಂಗಳೂರು : ಮೈಸೂರಿನಲ್ಲಿ ಸಚಿವರ ಮೇಲೆ ಹಲ್ಲೆ ನಡೆದಿದೆ ಎಂಬುದು ಕೇವಲ ಊಹಾಪೋಹ ಅಷ್ಟೇ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಇಲ್ಲ-ಸಲ್ಲದ ವಿಷಯವನ್ನು ಚರ್ಚೆಗೆ ಬಿಟ್ಟಿದ್ದಾರೆ. ಕೀಲಾರ ಜಯರಾಮ್, ನಾನು ಎಂಗೇಜ್ಮೆಂಟ್‍ನಲ್ಲಿ ಭೇಟಿಯಾಗಿದ್ದೆವು ಅಷ್ಟೇ. ಎಚ್‍ಡಿಕೆ ಇವೆಲ್ಲವನ್ನು ಬಿಟ್ಟು ಅವರ ಪುತ್ರನ ಉಪಚುನಾವಣೆ ಬಗ್ಗೆ ಗಮನಹರಿಸಲಿ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಇಂದಿಲ್ಲಿ ಸಲಹೆ ನೀಡಿದ್ದಾರೆ.
ರವಿವಾರ ಚನ್ನಪಟ್ಟಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮದುವೆ ಎಂಗೇಜ್ಮೆಂಟ್‍ನಲ್ಲಿ ಭೇಟಿಯಾಗಿ ಊಟ ಮಾಡಿ ಬಂದಿದ್ದೇವೆ. ಕೀಲಾರ ಜಯರಾಮ್ ನನಗೆ 40 ವರ್ಷಗಳ ಸ್ನೇಹಿತ, ಅವರಿಗೆ ಜೆಡಿಎಸ್‍ನಿಂದ ಟಿಕೆಟ್ ನೀಡಿಲ್ಲ ಎಂಬ ಆರೋಪವನ್ನು ಮಾಧ್ಯಮದಲ್ಲಿ ಹೇಳಿದ್ದಾರೆ. ಜೆಡಿಎಸ್‍ನಿಂದ ಅನ್ಯಾಯವಾಗಿದೆ ಎಂದು ಹೇಳಿದ್ದಾರೆ ಎಂದು ತಿಳಿಸಿದರು.
ಕುಮಾರಸ್ವಾಮಿ ಯಾವುದೋ ಚಪಲಕ್ಕೆ ಹೇಳಿಕೆ ನೀಡಿದ್ದಾರೆಂದು ನನಗೆ ಗೊತ್ತಿಲ್ಲ, ಇಲ್ಲದ ಹೇಳಿಕೆ ನೀಡುತಿದ್ದಾರೆ. ಅವರಿಗೆ ಮಗನ ಉಪಚುನಾವಣೆ ಬಗ್ಗೆ ಗಮನ ಹರಿಸುವುದನ್ನು ಬಿಟ್ಟು ನನ್ನ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಗ್ಗೆ ಮಾತನಾಡದಿದ್ದರೆ ಅವರಿಗೆ ನಿದ್ದೆ ಬರುವುದಿಲ್ಲ ಎಂದು ಕಾಣುತ್ತದೆ ಎಂದು ವಾಗ್ದಾಳಿ ನಡೆಸಿದರು.
ಕುಮಾರಸ್ವಾಮಿ, ರಾಜ್ಯದ ಅಭಿವೃದ್ಧಿಗೆ ಸಲಹೆ ಕೊಡುವುದಾಗಲಿ, ಅಭಿವೃದ್ಧಿ ಮಾಡುವಂತೆ ಹೋರಾಟ ಮಾಡುವುದಾಗಲಿ ಮಾಡುವುದಿಲ್ಲ. ಅದನ್ನು ಬಿಟ್ಟು ‘ಎಲ್ಲ ಮಂತ್ರಿಗಳ ಮಾಹಿತಿ ತನ್ನ ಬಳಿ ಇದೆ, ಭ್ರಷ್ಟಾಚಾರದ ಪೆನ್ ಡ್ರೈವ್ ಇದೆ ಎಂದು ಹೇಳುತ್ತಾರೆ. ಆದರೆ, ಅವುಗಳನ್ನು ಬಿಡುಗಡೆ ಮಾಡುವುದಿಲ್ಲ ಎಂದು ಚಲುವರಾಯಸ್ವಾಮಿ ನುಡಿದರು.