ಕಂದಾಯ ಸೇವೆಗಳಿಗೆ ಭೌತಿಕ ದಾಖಲೆ ಕೇಳುವುದು ಬೇಡ: ಸಚಿವ ಪ್ರಿಯಾಂಕ್ ಖರ್ಗೆ

Update: 2024-01-08 13:19 GMT

ಬೆಂಗಳೂರು: ಗ್ರಾಮ ಪಂಚಾಯತಿ ಕಚೇರಿಗಳಲ್ಲಿನ ಬಾಪೂಜಿ ಸೇವಾ ಕೇಂದ್ರಗಳ ಮೂಲಕ, ನಾಡ ಕಚೇರಿಗಳ ಅಟಲ್‍ ಜಿ ಜನಸ್ನೇಹಿ ಕೇಂದ್ರಗಳಲ್ಲಿ ಲಭ್ಯವಿರುವ 44 ಸೇವೆಗಳನ್ನು ಪಡೆಯಲು ಆನ್‍ಲೈನ್‍ನಲ್ಲಿ ಸಲ್ಲಿಸಲಾಗುತ್ತಿರುವ ಅರ್ಜಿಗಳಿಗೆ ಯಾವುದೇ ದಾಖಲೆಗಳನ್ನು ಭೌತಿಕ ರೂಪದಲ್ಲಿ ಸಲ್ಲಿಸುವಂತೆ ಕೋರಬಾರದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಸೂಚಿಸಿದ್ದಾರೆ.

ಸೋಮವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ಗ್ರಾಮ ಲೆಕ್ಕಿಗರು ಕ್ಷೇತ್ರ ಪರಿಶೀಲನೆಗಾಗಿ ಅವಶ್ಯವಿರುವ ಅರ್ಜಿಗಳು ಮತ್ತು ಅವುಗಳ ದಾಖಲೆಗಳನ್ನು ನಾಡಕಚೇರಿಯ ತಂತ್ರಾಂಶದಿಂದಲೆ ಪಡೆದುಕೊಂಡು ನಿಗದಿತ ಅವಧಿಯಲ್ಲಿಯೇ ಈ ಅರ್ಜಿಗಳನ್ನು ವಿಲೇವಾರಿ ಮಾಡಬೇಕು ʼಎಂದು ತಿಳಿಸಿದ್ದಾರೆ.

ರಾಜ್ಯದ ಗ್ರಾ.ಪಂ. ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬಾಪೂಜಿ ಸೇವಾ ಕೇಂದ್ರಗಳಲ್ಲಿ ನಾಡಕಚೇರಿಗಳ ಅಟಲ್‍ಜಿ ಜನಸ್ನೇಹಿ ಕೇಂದ್ರಗಳಲ್ಲಿ ಲಭ್ಯವಿದ್ದ 44 ಸೇವೆಗಳನ್ನು ಪಡೆಯಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪಂಚತಂತ್ರ 2.0 ತಂತ್ರಾಂಶವನ್ನು ನಾಡಕಚೇರಿ ತಂತ್ರಾಂಶದೊಂದಿಗೆ ಸಂಯೋಜನೆ ಮಾಡಲಾಗಿದ್ದು ಅದರಂತೆ ಗ್ರಾಮೀಣ ಜನರು ದಾಖಲೆಗಳನ್ನು ಪಡೆಯಲು ಪಂಚಾಯತಿ ಕಚೇರಿಗಳಲ್ಲಿನ ಬಾಪೂಜಿ ಸೇವಾ ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಆದರೆ, ಗ್ರಾಮ ಲೆಕ್ಕಿಗರು, ಕ್ಷೇತ್ರ ಪರಿಶೀಲನೆಗಾಗಿ ಬಾಪೂಜಿ ಸೇವಾ ಕೇಂದ್ರಗಳಲ್ಲಿ ನಾಡಕಚೇರಿ ತಂತ್ರಾಂಶದ ಲಾಗಿನ್ ಮೂಲಕ ಆನ್‍ಲೈನ್‍ನಲ್ಲಿ ಸಲ್ಲಿಸಲಾಗುತ್ತಿರುವ ಅರ್ಜಿಗಳನ್ನು ಮತ್ತು ಅವುಗಳ ದಾಖಲೆಗಳನ್ನು ಭೌತಿಕ ರೂಪದಲ್ಲಿ ಸಲ್ಲಿಸುವಂತೆ ಗ್ರಾಮ ಪಂಚಾಯತಿಗಳನ್ನು ಕೋರುತ್ತಿರುವುದು ಸರಕಾರದ ಗಮನಕ್ಕೆ ಬಂದಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಪ್ರತಿಯೊಂದು ಸೇವೆಗೆ, ವಿವಿಧ ಪ್ರಮಾಣ ಪತ್ರಗಳಿಗಾಗಿ ನಿಗದಿತ ದಾಖಲೆಗಳನ್ನು ಅರ್ಜಿದಾರರಿಂದ ಅರ್ಜಿಯೊಂದಿಗೆ ಪಡೆಯಲಾಗುತ್ತಿದೆ. ಇವುಗಳನ್ನು ಗ್ರಾಮ ಪಂಚಾಯತಿಗಳಿಗೆ ನೀಡಲಾಗಿರುವ ನಾಡ ಕಚೇರಿ ತಂತ್ರಾಂಶದ ಲಾಗಿನ್ ನಲ್ಲಿ ಅಪ್ ಲೋಡ್ ಮಾಡಿ ಅರ್ಜಿಗಳನ್ನು ಆನ್‍ಲೈನ್‍ನಲ್ಲಿ ಸಲ್ಲಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಪ್ರತಿಯೊಂದು ಹೋಬಳಿಯು 6-7 ಗ್ರಾಮ ಪಂಚಾಯತಿಗಳನ್ನು ಹೊಂದಿದ್ದು, ಈ ವ್ಯಾಪ್ತಿಯ 20-50 ಸಾವಿರ ಜನರು ವಿವಿಧ ಸರಕಾರಿ ಸೇವೆಗಳನ್ನು ಪಡೆಯಲು ಹೋಬಳಿ ಕೇಂದ್ರದ ನಾಡಕಚೇರಿಗೆ ಹೋಗಬೇಕಾಗಿದ್ದು ಸಾರ್ವಜನಿಕರಿಗೆ ತೊಂದರೆಯಾಗಿತ್ತು ಎಂದು ಅವರು ಹೇಳಿದ್ದಾರೆ.

ಈ ಸಮಸ್ಯೆಗೆ ಪರಿಹಾರವಾಗಿ ನಾಡಕಚೇರಿಗಳ ಅಟಲ್‍ಜಿ ಜನಸ್ನೇಹಿ ನಿರ್ದೇಶನಾಲಯದಡಿ ಸಿಗುತ್ತಿದ್ದ ಆದಾಯ ಪ್ರಮಾಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಾಸ ಸ್ಥಳ ಪ್ರಮಾಣ ಪತ್ರ ಗಳಂತಹ ಪ್ರಮುಖ ಸೇವೆಗಳನ್ನು ದಕ್ಷ ಹಾಗೂ ತ್ವರಿತ ರೀತಿಯಲ್ಲಿ ಗ್ರಾಮ ಪಂಚಾಯತಿಗಳ ಮೂಲಕವೇ ನೀಡಲು ಗ್ರಾಮ ಪಂಚಾಯತಿಗಳ ಬಾಪೂಜಿ ಸೇವಾ ಕೇಂದ್ರಗಳಲ್ಲಿ ನೂತನವಾಗಿ ಒದಗಿಸಲು ಸರಕಾರ ನಿರ್ಧರಿಸಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಗ್ರಾಮೀಣ ಜನತೆಯು ಕಂದಾಯ ಇಲಾಖೆಯ ಅಟಲ್‍ಜೀ ಜನಸ್ನೇಹಿ ನಿರ್ದೇಶನಾಲಯದಡಿ ಬರುವ ಆದಾಯ ಪ್ರಮಾಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಾಸ ಸ್ಥಳ ಪ್ರಮಾಣ ಪತ್ರಗಳಂತಹ 44 ಪ್ರಮುಖ ಸೇವೆಗಳನ್ನು ತ್ವರಿತವಾಗಿ ಪಡೆದುಕೊಳ್ಳಲು ಬಾಪೂಜಿ ಸೇವಾ ಸೇವಾ ಕೇಂದ್ರಗಳಲ್ಲಿ ಅನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿ ಸೇವೆಗಳನ್ನು ಪಡೆಯಲು ಅನುಕೂಲ ಕಲ್ಪಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News