ಅಂಬೇಡ್ಕರ್ ಸೋಲು ವಿಚಾರ | ಸದನದಲ್ಲಿ ಸವಾಲು-ಪ್ರತಿಸವಾಲು ವಿಧಾನಸಭೆಯಲ್ಲಿ ಗದ್ದಲ

Update: 2025-03-17 17:56 IST
ಅಂಬೇಡ್ಕರ್ ಸೋಲು ವಿಚಾರ | ಸದನದಲ್ಲಿ ಸವಾಲು-ಪ್ರತಿಸವಾಲು ವಿಧಾನಸಭೆಯಲ್ಲಿ ಗದ್ದಲ
  • whatsapp icon

ಬೆಂಗಳೂರು : ಬಾಬಾ ಸಾಹೇಬ್ ಡಾ.ಬಿಆರ್ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಲಾಯಿತು ಎನ್ನುವ ವಿಚಾರವೂ ವಿಧಾನಸಭೆಯಲ್ಲಿ ಆಡಳಿತಾರೂಢ ಹಾಗೂ ಪ್ರತಿಪಕ್ಷಗಳ ನಡುವೆ ಸವಾಲು-ಪ್ರತಿಸವಾಲು ಹಾಕಿಕೊಳ್ಳುವ ಮಟ್ಟಕ್ಕೆ ತಲುಪಿ ಗದ್ದಲ ಕೋಲಾಹಲಕ್ಕೆ ಕಾರಣವಾಯಿತು.

ಸೋಮವಾರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಚರ್ಚೆಯಲ್ಲಿ ದಲಿತ ಸಮುದಾಯದಕ್ಕೆ ಮೀಸಲಿಟ್ಟ ವಿಶೇಷ ಅನುದಾನ ಕುರಿತು ಗಮನ ಸೆಳೆದರು. ಆಗ ಎಸ್‍ಇಪಿ, ಟಿಎಸ್ಪಿ ಕಾನೂನು ಜಾರಿಗೊಳಿಸಿದ ವಿಚಾರವನ್ನು ಪ್ರಸ್ತಾಪಿಸಿದಾಗ ಬಿಜೆಪಿ ಸದಸ್ಯರು ಬಿ.ಆರ್.ಅಂಬೇಡ್ಕರ್ ಅವರನ್ನು ಸೋಲಿಸಿದ್ದೇ ಕಾಂಗ್ರೆಸ್. ಅವರು ನಿಧನರಾದ ಸಂದರ್ಭದಲ್ಲಿ ಅಂತ್ಯಕ್ರಿಯೆ ಗೌರವಯುತವಾಗಿ ನಡೆಸಿಲ್ಲ, ಜಾಗವೂ ನೀಡದರೆ ತೊಂದರೆ ನೀಡಿದರು ಎಂದು ಪ್ರಸ್ತಾಪಿಸಿ ಆಡಳಿತಾರೂಢ ಸದಸ್ಯರನ್ನು ಟೀಕಿಸಿದರು.

ಈ ಸಂದರ್ಭದಲ್ಲಿ ಮಧ್ಯಪ್ರವೇಶ ಮಾಡಿದ ಸಚಿವ ಪ್ರಿಯಾಂಕ್ ಖರ್ಗೆ, 1952ರಲ್ಲಿ ಅಂಬೇಡ್ಕರ್ ಬರೆದ ಪತ್ರದಲ್ಲಿ ನನ್ನನ್ನು ಚುನಾವಣೆಯಲ್ಲಿ ಸೋಲಿಸಿದ್ದು ದಾಮೋದರ್ ಸಾವರ್ಕರ್ ಎಂದು ಬರೆದಿದ್ದಾರೆ ಎಂದರು. ಅಲ್ಲದೆ ಪತ್ರ ಪ್ರದರ್ಶನ ಮಾಡಿದರೆ ರಾಜೀನಾಮೆ ಕೊಡುತ್ತೀರಾ? ಎಂದು ಸವಾಲು ಹಾಕಿದರು.

ಅಷ್ಟೇ ಅಲ್ಲದೆ, ಸವಾಲು ಸ್ವೀಕಾರ ಮಾಡಿ ಎಂದು ಪ್ರಿಯಾಂಕ್ ಖರ್ಗೆ ಏರು ಧ್ವನಿಯಲ್ಲಿ ಸವಾಲು ಹಾಕಿದರು. ಪತ್ರದಲ್ಲಿ ಅಂಬೇಡ್ಕರ್ ಕಾಂಗ್ರೆಸ್ ಹೆಸರು ಉಲ್ಲೇಖ ಮಾಡಿಲ್ಲ, ಬದಲಾಗಿ ಸಾವರ್ಕರ್ ಹೆಸರು ಬರೆದಿದ್ದಾರೆ. ಇದನ್ನು ಸಾಬೀತು ಮಾಡುತ್ತೇವೆ ಎಂದರು. ಈ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ತೀವ್ರ ಮಾತಿನ ಜಟಾಪಟಿಗೆ ಕಾರಣವಾಯಿತು.

ಆನಂತರ, ಬಿಜೆಪಿ ಸದಸ್ಯರಾದ ಅಶ್ವತ್ಥ ನಾರಾಯಣ, ಅರವಿಂದ ಬೆಲ್ಲದ, ಬಸನಗೌಡ ಪಾಟೀಲ್ ಯತ್ನಾಳ್ ಏರು ಧ್ವನಿಯಲ್ಲಿ ಕಾಂಗ್ರೆಸ್ ಸದಸ್ಯರ ವಿರುದ್ಧ ವಾಗ್ದಾಳಿ ನಡೆಸಿದರು. ಇತ್ತ ಆಡಳಿತ ಪಕ್ಷದಿಂದ ಪ್ರಿಯಾಂಕ್ ಖರ್ಗೆ, ನರೇಂದ್ರ ಸ್ವಾಮಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸವಾಲು, ಆರೋಪ, ಪ್ರತ್ಯಾರೋಪ ಹಾಗೂ ಏರು ಧ್ವನಿಯ ಮಾತಿನ ನಡುವೆ ಕಾಂಗ್ರೆಸ್ ಬಿಜೆಪಿ ಸದಸ್ಯರು ಪರಸ್ಪರ ಘೋಷಣೆ ಕೂಗಿದರು. ಈ ನಡುವೆ ಪ್ರಿಯಾಂಕ್ ಖರ್ಗೆ ಅಂಬೇಡ್ಕರ್ ಬರೆದಿರುವ ಪತ್ರವನ್ನು ಸದನದಲ್ಲಿ ಓದಿದರು.

ಇದಕ್ಕೆ ಸಚಿವರಾದ ಕೆ.ಜೆ.ಜಾರ್ಜ್, ಎಂಬಿ ಪಾಟೀಲ್, ಎಚ್.ಕೆ.ಪಾಟೀಲ್ ದನಿಗೂಡಿಸಿ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರೇ ಅಂಬೇಡ್ಕರ್ ಅವರನ್ನು ಹಲವು ಸಮಿತಿಗಳಿಗೆ ಅಧ್ಯಕ್ಷರನ್ನಾಗಿ ಮಾಡಿದರು. ಸಚಿವರು ಆದರು. ಆದರೆ, ಬಿಜೆಪಿ ಅಪಪ್ರಚಾರ ಮಾಡುತ್ತಿದೆ ಎಂದರು.

ಆಗ ಯತ್ನಾಳ್, ಅಂಬೇಡ್ಕರ್ ಅವರಿಗೆ ಅನ್ಯಾಯ ಮಾಡಲಾಗಿದೆ. ಜವಾಹರಲಾಲ್ ನೆಹರು ಅವರಿಂದಲೇ ಅನ್ಯಾಯವಾಗಿದೆ ಎಂದರು. ಈ ಹಂತದಲ್ಲಿ ಆಡಳಿತಾರೂಢ ಹಾಗೂ ಬಿಜೆಪಿ ನಡುವೆ ಭಾರೀ ಗದ್ದಲ, ಆರೋಪ ಪ್ರತ್ಯರೋಪ ಜರುಗಿತು.

ಇದೇ ವೇಳೆ ಬಿಜೆಪಿ ಸದಸ್ಯರು ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿದರು. ಜತೆಗೆ ಸದನದ ಸಮಯ ವ್ಯರ್ಥವಾಗುತ್ತಿದೆ ಎಂದು ಸ್ಪೀಕರ್ ಯುಟಿ ಖಾದರ್ ಉಲ್ಲೇಖಿಸಿ, ಸಚಿವ ಪ್ರಿಯಾಂಕ್ ಅವರ ಸವಾಲಿಗೆ ಪ್ರತಿಪಕ್ಷವೂ ಒಪ್ಪಿದ್ದು, ಶುಕ್ರವಾರ ಮಧ್ಯಾಹ್ನ ಬಳಿಕ ಚರ್ಚೆ ಮಾಡೋಣ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News