ಲೈಂಗಿಕ ಹಗರಣ | ಸಾಮಾಜಿಕ ಜಾಲತಾಣದಿಂದ ಮಹಿಳೆಯರ ವಿಡಿಯೋಗಳನ್ನು ತೆಗೆದು ಹಾಕುವಂತೆ ಒತ್ತಾಯ

Update: 2024-05-13 14:46 GMT

ಬೆಂಗಳೂರು : ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣಕ್ಕೆ ಸಂಬಂಧಿಸಿದಂತೆ ಮಹಿಳೆಯರ ವಿಡಿಯೋಗಳು ಬಹಳಷ್ಟು ಕಡೆ ಈಗಲೂ ಸಾಮಾಜಿಕ ಮಾಧ್ಯಮಗಳ ಮೂಲಕ ಹಂಚಿಕೆ ಆಗುತ್ತಿದ್ದು, ಎಲ್ಲ ಸಾಮಾಜಿಕ ಮಾಧ್ಯಮಗಳಿಗೆ ಹಾಗು ಸರ್ಚ್ ಇಂಜಿನ್‍ಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಿ ವಿಡಿಯೋಗಳನ್ನು ಲಭ್ಯವಿರದ ಹಾಗೆ ಕ್ರಮ ತೆಗೆದುಕೊಳ್ಳಬೇಕು ಎಂದು ‘ನಾವೆದ್ದು ನಿಲ್ಲದಿದ್ದರೆ' ಒಕ್ಕೂಟ ಒತ್ಯಾಯಿಸಿದೆ.

ಸೋಮವಾರದಂದು ‘ನಾವೆದ್ದು ನಿಲ್ಲದಿದ್ದರೆ' ಒಕ್ಕೂಟದ ಪದಾಧಿಕಾರಿಗಳಾದ ವಕೀಲ ವಿನಯ್ ಶ್ರೀನಿವಾಸ್, ಜನವಾದಿ ಮಹಿಳಾ ಸಂಘಟನೆಯ ಕೆ.ಎಸ್.ವಿಮಲಾ, ಮಧು ಭೂಷಣ್ ಸೇರಿದಂತೆ ಮತ್ತಿತರರು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರನ್ನು ಭೇಟಿ ಮಾಡಿ, ಈ ಸಂಬಂಧ ಮನವಿ ಸಲ್ಲಿಸಿದರು.

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣಕ್ಕೆ ಸಂಬಂಧಿಸಿದ ವಿಡಿಯೋಗಳ ಹಂಚಿಕೆ ಕಾನೂನು ಬಾಹಿರವಾಗಿದೆ. ಹಾಗಾಗಿ ಈ ವಿಡಿಯೋಗಳನ್ನು ಹಂಚುವವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಎಸ್‍ಐಟಿಗೆ ನಿರ್ದೇಶಿಸಬೇಕು. ಮುಖ್ಯವಾಗಿ ಈ ವಿಡಿಯೋಗಳನ್ನು ಮೊದಲು ಯಾರು ಹಂಚಿದರೆಂದು ಪತ್ತೆ ಮಾಡಿ ಅವರ ವಿರುದ್ಧ ಕೂಡಲೇ ಎಫ್‍ಐಆರ್ ದಾಖಲಿಸುವಂತೆ ಎಸ್‍ಐಟಿಗೆ ನಿರ್ದೇಶಿಸಬೇಕು ಒಕ್ಕೂಟವು ಎಂದು ಒತ್ತಾಯಿಸಿದೆ.

ಇಡೀ ಪ್ರಕರಣದಲ್ಲಿ ಸಂತ್ರಸ್ಥರಿಗೆ ನ್ಯಾಯ ಸಿಗಬಹುದೇ ಎಂದು ಆತಂಕವಿದ್ದು, ಸಂತ್ರಸ್ಥರಿಗೆ ನ್ಯಾಯ ಒದಗಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಮಹಿಳಾ ಪರ ಸಂಘಟನೆಗಳೊಂದಿಗೆ ಸಭೆ ಕರೆಯಬೇಕು. ಸಾಕ್ಷಿಗಳ ರಕ್ಷಣಾ ಯೋಜನೆ, 2018ರ ಪ್ರಕಾರ, ಸಂತ್ರಸ್ತರ ರಕ್ಷಣೆ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರು, ದೂರು ನೀಡಿದ ಮತ್ತು ದೂರು ನೀಡುವ ಸಾಧ್ಯವುಳ್ಳ ಮತ್ತು ಪ್ರಕರಣದಲ್ಲಿ ಸಂಭಾವ್ಯ ಸಾಕ್ಷಿಗಳಾಗಿರುವ ಮಹಿಳೆಯರಿಗೆ ಸಾಕಷ್ಟು ಸುರಕ್ಷತೆ ಮತ್ತು ಭದ್ರತೆಯನ್ನು ಒದಗಿಸಬೇಕು ಎಂದು ಆಗ್ರಹಿಸಿದೆ.

ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರಿಗೆ ಅಗತ್ಯವಿರುವ ಮಾನಸಿಕ, ವೈದ್ಯಕೀಯ, ಹಣಕಾಸು ಮತ್ತು ಕಾನೂನು ಬೆಂಬಲವನ್ನು ಒದಗಿಸಬೇಕು. ಹಾಗೆಯೇ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗಾಗಿ ಪರಿಹಾರ ಯೋಜನೆ ಅನುಗುಣವಾಗಿ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸಬೇಕು ಎಂದು ಒಕ್ಕೂಟವು ಒತ್ತಾಯಿಸಿದೆ.

ಪ್ರಜ್ವಲ್ ರೇವಣ್ಣರ ಡಿಪ್ಲೋಮಾಟಿಕ್ ಪಾಸ್‍ಪೋರ್ಟ್‍ನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಕೇಂದ್ರ ಸರಕಾರಕ್ಕೆ ಪತ್ರ ಬರೆಯಬೇಕು. ತಕ್ಷಣವೇ ಭಾರತಕ್ಕೆ ಮರಳುವುದು ಖಚಿತಪಡಿಸಿ ಅವರ ವಿರುದ್ಧ ದಾಖಲಾಗಿರುವ ಎಫ್‍ಐಆರ್ ಗಳ ಆಧಾರದ ಮೇಲೆ ಅವರ ಬಂಧನಕ್ಕೆ ಒಳಪಡಿಸಬೇಕು. ಈ ಅಪರಾಧಗಳನ್ನು ಮರೆಮಾಚುವ ಅಥವಾ ಖುಲಾಸ ಮಾಡುವುದರಲ್ಲಿ ಭಾಗಿಯಾಗಿರುವ ಎಲ್ಲರನ್ನು ಬಂಧಿಸಬೇಕು ಎಂದು ತಿಳಿಸಿದೆ.

ಎಚ್.ಡಿ.ರೇವಣ್ಣ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಶಿಫಾರಸ್ಸು ನೀಡಬೇಕು. ಪ್ರಜ್ವಲ್ ರೇವಣ್ಣ ಒಂದು ವೇಳೆ ಲೋಕಸಭೆ ಚುನಾವಣೆ ಗೆದ್ದರೆ, ಅವರ ವಿರುದ್ಧ ಇರುವ ಪ್ರಕರಣಗಳ ಕ್ರಿಮಿನಲ್ ವಿಚಾರಣೆ ನಡೆಯುವ ಮುಂಚೆ ಅವರು ಪ್ರಮಾಣ ವಚನ ಸ್ವೀಕರಿಸಿದಂತೆ ಆದೇಶಿಸಬೇಕು ಎಂದು ‘ನಾವೆದ್ದು ನಿಲ್ಲದಿದ್ದರೆ' ಒಕ್ಕೂಟ ಮನವಿ ಮಾಡಿದೆ.


Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News