ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ: ನಿರೀಕ್ಷಣಾ ಜಾಮೀನು ಅರ್ಜಿ ಹಿಂಪಡೆದ ಎಚ್.ಡಿ.ರೇವಣ್ಣ

Update: 2024-05-03 10:20 GMT

ಬೆಂಗಳೂರು, ಮೇ 3: ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿದ್ದು, ಬಂಧನದ ಭೀತಿಯಲ್ಲಿದ್ದ ಮಾಜಿ ಸಚಿವ ಎಚ್.ಡಿ.ರೇವಣ್ಣ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆದಿದ್ದಾರೆ.

ಪ್ರಕರಣದಲ್ಲಿ ತನ್ನನ್ನು ತನಿಖಾ ತಂಡ ಬಂಧಿಸಿಬಹುದು ಎಂಬ ಭೀತಿಯಲ್ಲಿದ್ದ ರೇವಣ್ಣ ಗುರುವಾರ ನಿರೀಕ್ಷಣಾ ಜಾಮೀನು ಕೋರಿ ನಗರದ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ವೇಳೆ ವಿಶೇಷ ತನಿಖಾ ದಳದ ಪರ ವಾದ ಮಂಡಿಸಿದ್ದ ಎಸ್.ಪಿ.ಸಿ. ಬಿ.ಎನ್.ಜಗದೀಶ್, ವಿಚಾರಣೆಗೆ ಹಾಜರಾಗುವಂತೆ ರೇವಣ್ಣ ರಿಗೆ ನೋಟಿಸ್ ನೀಡಲಾಗಿದೆ. ಆ ನೋಟಿಸ್ ನಲ್ಲಿ ರೇವಣ್ಣ ವಿರುದ್ಧ ದಾಖಲಾಗಿರುವ ಎಲ್ಲ ಆರೋಪಗಳು ಜಾಮೀನು ರಹಿತವಲ್ಲದ್ದಾಗಿದೆ. ಅಲ್ಲದೆ, ರೇವಣ್ಣ ವಿರುದ್ಧ ಅತ್ಯಾಚಾರ ಆರೋಪ ಸೇರ್ಪಡೆಯಾಗಿಲ್ಲ. ಹೀಗಾಗಿ ಅರ್ಜಿದಾರರನ್ನು ಬಂಧಿಸುವ ಅಗತ್ಯ ಎದುರಾಗುವುದಿಲ್ಲ. ಆದ್ದರಿಂದ ನಿರೀಕ್ಷಣಾ ಜಾಮೀನು ಪಡೆದುಕೊಳ್ಳುವ ಅಗತ್ಯವಿಲ್ಲ ಎಂದು ನ್ಯಾಯಾಲಯಕ್ಕೆ ವಿವರಿಸಿದರು.

ವಾದವನ್ನು ನ್ಯಾಯಾಲಯ ಆಲಿಸಿತ್ತು. ಈ ನಡುವೆ ರೇವಣ್ಣರ ಪರ ವಕೀಲರು, ಅರ್ಜಿ ಹಿಂಪಡೆಯುವುದಾಗಿ ನ್ಯಾಯಾಲಯಕ್ಕೆ ತಿಳಿಸಿದರು. ಅಲ್ಲದೆ, ಅರ್ಜಿಯನ್ನು ಹಿಂಪಡೆದರು.

ಬಂಧನ ಭೀತಿಯಲ್ಲಿದ್ದ ಮಾಜಿ ಸಚಿವ ರೇವಣ್ಣ ಇದೀಗ ನಿರಾಳರಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News