ಲೈಂಗಿಕ ಕಿರುಕುಳ ಆರೋಪ: ವಕೀಲ ಮಂಜುನಾಥ್ ಸನ್ನದು ಅಮಾನತುಗೊಳಿಸಿದ್ದ ಕೆಎಸ್‍ಬಿಸಿ ಆದೇಶ ಬದಿಗೆ ಸರಿಸಿದ ಹೈಕೋರ್ಟ್

Update: 2024-01-09 16:58 GMT

ಬೆಂಗಳೂರು: ಸಹೋದ್ಯೋಗಿ ಕಿರಿಯ ವಕೀಲೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಬೆಂಗಳೂರಿನ ವಕೀಲ ಎಚ್.ಮಂಜುನಾಥ್(46) ಅವರನ್ನು ದೇಶದ ಯಾವುದೇ ನ್ಯಾಯಾಲಯದಲ್ಲಿ ಪ್ರಾಕ್ಟೀಸ್ ಮಾಡಲು ನಿರ್ಬಂಧಿಸಿದ್ದ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಆದೇಶವನ್ನು ಹೈಕೋರ್ಟ್ ಬದಿಗೆ ಸರಿಸಿದೆ.

ವಕೀಲ ಮಂಜುನಾಥ್ ಅವರು ಆಕ್ಷೇಪಣೆ ಸಲ್ಲಿಸಬೇಕು. ಇದನ್ನು ಕೆಎಸ್‍ಬಿಸಿ ಪರಿಗಣಿಸಬೇಕು ಎಂದು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ ಆದೇಶಿಸಿದೆ.

ಕೆಎಸ್‍ಬಿಸಿ ಮಾಡಿರುವ ಆದೇಶವು ಅರ್ಜಿದಾರರಿಗೆ ಸಿವಿಲ್ ಮತ್ತು ವೃತ್ತಿಪರವಾಗಿ ಗಂಭೀರ ಪರಿಣಾಮ ಉಂಟು ಮಾಡುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಮಂಜುನಾಥ್ ವಿರುದ್ಧದ ಆರೋಪಗಳು ಗಂಭೀರವಾಗಿದ್ದು, ಅವುಗಳ ಪರಿಣಾಮ ಭಯಾನಕವಾಗಿರಲಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಬೇಕಿತ್ತು. ಈ ನೆಲೆಯಲ್ಲಿ ಮಂಜುನಾಥ್ ಅವರಿಗೆ ಆಕ್ಷೇಪಣೆ ಸಲ್ಲಿಸಲು ಮತ್ತೊಂದು ಅವಕಾಶ ಕಲ್ಪಿಸಲಾಗಿದೆ ಎಂದು ನ್ಯಾಯಾಲಯವು ಆದೇಶಿಸಿದೆ.

ಪಾರ್ಟಿ ಇನ್ ಪರ್ಸನ್ ರೂಪದಲ್ಲಿ ವಾದಿಸಿದ ಮಂಜುನಾಥ್ ಅವರು, ಆಕ್ಷೇಪಣೆ ಸಲ್ಲಿಸಲು ತಮ್ಮಿಂದ ವಿಳಂಬವಾಗಿದೆ. ಅಷ್ಟಕ್ಕೇ ತಮ್ಮನ್ನು ಅಮಾನತು ಮಾಡದೇ ಆಕ್ಷೇಪಣೆ ಸಲ್ಲಿಸಲು ಅವಕಾಶ ಮಾಡಿಕೊಡಬೇಕಿತ್ತು. ತಮ್ಮ ವಿರುದ್ಧದ ದೂರನ್ನು ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ(ನಿಷೇಧ ಮತ್ತು ಪರಿಹಾರ) ಕಾಯಿದೆ ಅಡಿ ಸ್ಥಾಪಿಸಲಾಗಿರುವ ಸಮಿತಿಯ ಮುಂದೆ ಇರಿಸಬೇಕಿತ್ತು. ಹೀಗಾಗಿ, ದೂರು ಊರ್ಜಿತವಾಗುದಿಲ್ಲ ಎಂದು ವಾದಿಸಿದ್ದರು.

ಕೆಎಸ್‍ಬಿಸಿ ಪ್ರತಿನಿಧಿಸಿದ್ದ ವಕೀಲ ನಟರಾಜ್ ಅವರು, ಮಂಜುನಾಥ್ ಅವರಿಗೆ ಸೂಕ್ತ ಕಾಲಾವಕಾಶ ನೀಡಿದ್ದರೂ ಅವರು ಕಾಲಮಿತಿಯಲ್ಲಿ ಆಕ್ಷೇಪಣೆ ಸಲ್ಲಿಸಿಲ್ಲ ಎಂದು ವಾದಿಸಿದ್ದರು.

ವಕೀಲೆಯೊಬ್ಬರ ದೂರಿಗೆ ವಿವರಣೆ ಕೇಳಿ ವಕೀಲ ಎಚ್.ಮಂಜುನಾಥ್‍ಗೆ ಕೆಎಸ್‍ಬಿಸಿ ನೋಟಿಸ್ ಜಾರಿಗೊಳಿಸಿತ್ತು. 2023ರ ಅ.5ರಂದು ಕೆಎಸ್‍ಬಿಸಿಗೆ ಪತ್ರ ಸಲ್ಲಿಸಿದ ಅವರು, ತಮ್ಮ ವಿವರಣೆ ಸಲ್ಲಿಸಲು 10ರಿಂದ 14 ದಿನಗಳ ಅವಕಾಶ ನೀಡಲು ಕೋರಿದ್ದರು. ಅದಾದ 30 ದಿನ ಕಳೆದರೂ ವಿವರಣೆ ಅಥವಾ ಆಕ್ಷೇಪಣೆ ಸಲ್ಲಿಸಲು ಮಂಜುನಾಥ್ ವಿಫಲವಾಗಿದ್ದರು.

ಹೀಗಾಗಿ, ಕೆಎಸ್‍ಬಿಸಿ ಶಿಸ್ತು ಪ್ರಾಧಿಕಾರದ ಸಭೆಯಲ್ಲಿ ಈ ವಿಚಾರ ಚರ್ಚಿಸಲಾಯಿತು. ದೂರು, ಅದರೊಂದಿಗೆ ಲಗತ್ತಿಸಿರುವ ದೂರುದಾರೆ ಮತ್ತು ವಕೀಲ ಎಚ್.ಮಂಜುನಾಥ್ ನಡುವಿನ ವಾಟ್ಸಾಪ್ ಸಂದೇಶಗಳನ್ನು ಪರಿಶೀಲಿಸಿದಾಗ, ಮಂಜನಾಥ್ ಅವರು ಕಿರಿಯ ವಕೀಲೆಯಾಗಿದ್ದ ದೂರುದಾರೆಗೆ ಲೈಂಗಿಕ ಕಿರುಕುಳ ನೀಡಿರುವುದು, ಜೀವ ಬೆದರಿಕೆ ಹಾಕಿರುವುದು ಮತ್ತು ವೃತ್ತಿಪರತೆಗೆ ಹೊರತಾಗಿ ತಪ್ಪಾಗಿ ನಡೆದುಕೊಂಡಿರುವುದು ಸ್ಪಷ್ಟವಾಗುತ್ತದೆ. ಹೀಗಾಗಿ, ಅವರ ಸನ್ನದನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಪಡಿಸಲಾಗಿದೆ ಎಂದು ಕೆಎಸ್‍ಬಿಸಿ ಆದೇಶದಲ್ಲಿ ಹೇಳಿತ್ತು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News