ಕೇಜ್ರಿವಾಲ್‌ಗೆ ಜಾಮೀನು | ನ್ಯಾಯಾಂಗದ ಮೇಲಿನ ನಂಬಿಕೆ ಇನ್ನಷ್ಟು ದೃಢೀಕರಿಸಿದೆ : ಸಿದ್ದರಾಮಯ್ಯ
Update: 2024-09-13 14:32 GMT
ಬೆಂಗಳೂರು : ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಜಾಮೀನು ನೀಡಿ ಜೈಲಿನಿಂದ ಬಿಡುಗಡೆಗೊಳಿಸಿದ ಸುಪ್ರೀಂಕೋರ್ಟ್ ಆದೇಶ ದೇಶದ ನ್ಯಾಯಾಂಗದ ಮೇಲಿನ ನಮ್ಮೆಲ್ಲರ ನಂಬಿಕೆಯನ್ನು ಇನ್ನಷ್ಟು ದೃಢೀಕರಿಸಿದೆ. ಸತ್ಯ ಮತ್ತು ನ್ಯಾಯದ ಪರವಾಗಿ ಹೋರಾಡುತ್ತಿರುವವರೆಲ್ಲರಿಗೂ ಈ ಆದೇಶ ಭರವಸೆ ಹುಟ್ಟಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಸಂಬಂಧ ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಅವರು, ಸುಪ್ರೀಂಕೋರ್ಟ್ ನ ಈ ಆದೇಶ ಸಾಂವಿಧಾನಿಕ ಸಂಸ್ಥೆಗಳನ್ನು ತಮ್ಮ ರಾಜಕೀಯ ದ್ವೇಷ ಸಾಧನೆಗಾಗಿ ದುರ್ಬಳಕೆ ಮಾಡಿಕೊಳ್ಳುತ್ತಿರುವ ಕೇಂದ್ರದ ಬಿಜೆಪಿ ಸರಕಾರಕ್ಕೆ ಕೊಟ್ಟ ತಪರಾಕಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ದ್ವೇಷದ ರಾಜಕಾರಣಕ್ಕೆ ಇಳಿದಿರುವ ಮೋದಿ ನೇತೃತ್ವದ ಸರಕಾರ ನ್ಯಾಯಾಲಯದ ಈ ಆದೇಶದಿಂದಾದರೂ ಪಾಠ ಕಲಿತು ಎಚ್ಚೆತ್ತುಕೊಳ್ಳಲಿ. ಅಂತಿಮವಾಗಿ ಸತ್ಯವೇ ಗೆಲ್ಲುವುದು, ನ್ಯಾಯವೇ ಬಾಳುವುದು. ಸತ್ಯಮೇವ ಜಯತೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.