ಅಕ್ರಮ ಗಣಿಗಾರಿಕೆ ಪ್ರಕರಣ | ಎಚ್.ಡಿ.ಕುಮಾರಸ್ವಾಮಿ ಜಾಮೀನು ರದ್ಧತಿ ಕೋರಿ ಎಸ್‌ಐಟಿ ಅರ್ಜಿ
ಬೆಂಗಳೂರು: ಅಕ್ರಮ ಗಣಿಗಾರಿಕೆ ಹಗರಣಕ್ಕೆ ಸಂಬಂಧಿಸಿ ಮಾಜಿ ಸಿಎಂ, ಕೇಂದ್ರ ಉಕ್ಕು ಮತ್ತು ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಜಾಮೀನು ರದ್ದುಪಡಿಸುವಂತೆ ಕೋರಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಲೋಕಾಯುಕ್ತ ಎಸ್‌ಐಟಿ ಅರ್ಜಿ ಸಲ್ಲಿಸಿದೆ.
ಲೋಕಾಯುಕ್ತ ವರದಿ ಆಧರಿಸಿ ಎಸ್‌ಐಟಿ ದಾಖಲಿಸಿದ್ದ ಎಫ್ಐಆರ್‌ಗೆ ಸಂಬಂಧಿಸಿ ಈ ಅರ್ಜಿ ಸಲ್ಲಿಸಲಾಗಿದೆ. ಎಸ್ಐಟಿ ಅಧಿಕಾರಿಗಳು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಕುಮಾರಸ್ವಾಮಿಗೆ ನೀಡಿರುವ ಜಾಮೀನು ರದ್ದುಪಡಿಸುವಂತೆ ಕೋರಿದ್ದರಿಂದ ಈಗ ಕುಮಾರಸ್ವಾಮಿಗೆ ಸಂಕಷ್ಟ ಎದುರಾಗಿದೆ.
ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣದ ಆರೋಪ, ರಾಜ್ಯದ ಮೂರು ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆ ಮಧ್ಯೆ 9 ವರ್ಷಗಳ ಹಿಂದೆ ನೀಡಿದ್ದ ಜಾಮೀನು ತೆರವಿಗೆ ಅರ್ಜಿ ಸಲ್ಲಿಸಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಏನಿದು ಕುಮಾರಸ್ವಾಮಿ ವಿರುದ್ಧದ ಪ್ರಕರಣ?
2007ರ ಅ.5ರಂದು ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್ ಕಂಪನಿಗೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಎನ್ಇಬಿ ರೇಂಜ್ ನಲ್ಲಿ 550 ಎಕರೆ ಪ್ರದೇಶದಲ್ಲಿ ಗಣಿಗಾರಿಕೆ ಲೀಸ್ ನೀಡಲು ಲೈಸನ್ಸ್ ಗೆ ಅನುಮೋದಿಸುವ ಕಡತಕ್ಕೆ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಸಹಿ ಹಾಕಿದ್ದರು.
ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್ ಕಂಪನಿ ಆಂಧ್ರಪ್ರದೇಶ ಮೂಲದ ಜಂತಕಲ್ ಮೈನಿಂಗ್ ಕಂಪನಿಯ ಸಹವರ್ತಿ ಸಂಸ್ಥೆಯಾಗಿತ್ತು. ಲೈಸನ್ಸ್ ನೀಡುವಂತೆ 29 ಅರ್ಜಿಗಳು ಸಲ್ಲಿಕೆಯಾಗಿದ್ದರೂ, ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್ ಕಂಪನಿಯ ಅರ್ಜಿಯನ್ನು ಸರ್ಕಾರದ ನಿಯಮಾವಳಿ ಉಲ್ಲಂಘಿಸಿ ಅನುಮೋದನೆ ನೀಡಿದ್ದಾರೆ ಎಂಬ ಆರೋಪ ಕುಮಾರಸ್ವಾಮಿ ಮೇಲಿದೆ.
ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್ ಕೊನೆಯದಾಗಿ ಲೈಸನ್ಸ್‌ಗೆ ಅರ್ಜಿ ಸಲ್ಲಿಸಿದರೂ ಕುಮಾರಸ್ವಾಮಿ ಅದೇ ಅರ್ಜಿಯನ್ನು ಪರಿಗಣಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಪ್ರಕರಣದ ತನಿಖೆಯನ್ನು ಲೋಕಾಯುಕ್ತ ಎಸ್‌ಐಟಿಗೆ ವಹಿಸಿಕೊಡಲಾಗಿತ್ತು. 2011ರಲ್ಲಿ ಲೋಕಾಯುಕ್ತರಾಗಿದ್ದ ಎನ್. ಸಂತೋಷ್ ಹೆಗ್ಡೆ ಅವರು ಅಕ್ರಮ ಗಣಿಗಾರಿಕೆ ಕುರಿತು ಸಲ್ಲಿಸಿದ್ದ ವರದಿಯಲ್ಲಿನ ಉಲ್ಲೇಖ ಆಧರಿಸಿ ಲೋಕಾಯುಕ್ತದ ಎಸ್ಐಟಿ ಪ್ರಕರಣದ ತನಿಖೆ ನಡೆಸುತ್ತಿದೆ.
ಅಕ್ರಮ ಗಣಿಗಾರಿಕೆ ಕುರಿತು ತನಿಖೆಗೆ ರಚನೆಯಾಗಿದ್ದ ಎಸ್ಐಟಿ 2015ರ ಜುಲೈ 27ರಂದು ಕುಮಾರಸ್ವಾಮಿ ಅವರಿಗೆ ನೋಟಿಸ್ ನೀಡಿತ್ತು. ಇದರ ಬೆನ್ನಲ್ಲೇ 2015ರ ಆಗಸ್ಟ್ 3ರಂದು ವಿಶೇಷ ನ್ಯಾಯಲಯದಿಂದ ಕುಮಾರಸ್ವಾಮಿ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರು.
2015ರ ಆಗಸ್ಟ್ 5ರಂದು ಎಸ್ಐಟಿ ಎದುರು ವಿಚಾರಣೆಗೆ ಹಾಜರಾಗಿದ್ದ ಕುಮಾರಸ್ವಾಮಿ ಅವರನ್ನು ತನಿಖಾಧಿಕಾರಿಗಳು ಬಂಧಿಸಿ ನಂತರ ಜಾಮೀನಿನ ಮೇಲೆ ಅದೇ ದಿನ ಬಿಡುಗಡೆ ಮಾಡಿದ್ದರು. ಇದೀಗ, ಸರಿ ಸುಮಾರು 9 ವರ್ಷಗಳ ನಂತರ ಕುಮಾರಸ್ವಾಮಿ ಅವರಿಗೆ ನ್ಯಾಯಲಯ ನೀಡಿದ್ದ ಜಾಮೀನು ರದ್ದುಪಡಿಸುವಂತೆ ಕೋರಿ ಎಸ್ಐಟಿ ನ್ಯಾಯಲಯದ ಮೊರೆ ಹೋಗಿದೆ.
ಪ್ರಕರಣದ ತನಿಖೆಯಲ್ಲಿ ಹಸ್ತಕ್ಷೇಪ, ತನಿಖಾಧಿಕಾರಿಗಳ ಮೇಲೆ ಒತ್ತಡ ಹೇರಲು ಪ್ರಯತ್ನ ಹಾಗೂ ಬೆದರಿಕೆ ಆರೋಪದಲ್ಲಿ ಕುಮಾರಸ್ವಾಮಿ ಅವರ ಜಾಮೀನು ರದ್ದುಗೊಳಿಸುವಂತೆ ಅರ್ಜಿಯಲ್ಲಿ ಎಸ್‌ಐಟಿ ಆಗ್ರಹಿಸಿದೆ.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಸೋಮವಾರ ಅರ್ಜಿ ಸಲ್ಲಿಸಲಾಗಿದೆ ಎಂದು ಲೋಕಾಯುಕ್ತದ ಎಸ್ಐಟಿ ಮೂಲಗಳು ತಿಳಿಸಿದೆ. ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಎಸ್ಐಟಿ ಅಧಿಕಾರಿಗಳು, ಕುಮಾರಸ್ವಾಮಿ ವಿರುದ್ಧ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲು ರಾಜ್ಯಪಾಲರ ಅನುಮತಿಯನ್ನು ಕೂಡ ಕೋರಿದ್ದಾರೆ.
ಎಸ್‌ಐಟಿ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶೀಘ್ರವೇ ವಿಚಾರಣೆಗೆ ಕೈಗೊತ್ತಿಕೊಳ್ಳುವ ಸಾಧ್ಯತೆ ಇದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನನ್ನು ರದ್ದುಪಡಿಸಿದರೆ ಕುಮಾರಸ್ವಾಮಿಗೆ ಬಂಧನದ ಭೀತಿ ಎದುರಾಗಲಿದೆ.
2023ರ ನವೆಂಬರ್ 21ರಂದು ಕುಮಾರಸ್ವಾಮಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲು ಅನುಮತಿ ಕೋರಿ ಎಸ್ಐಟಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿತ್ತು. ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡುವವರೆಗೆ ರಾಜಭವನದಿಂದ ಎಸ್ಐಟಿಗೆ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಆದರೆ, ಆಗಸ್ಟ್ 22ರಂದು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಕುಮಾರಸ್ವಾಮಿಗೆ ಸಂಬಂಧಿಸಿದ ಕಡತ ವಾಪಸ್ ಕಳಿಸಿ, ದಾಖಲೆಗಳ ಬಗ್ಗೆ ಸ್ಪಷ್ಟನೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು.
ಹಗರಣಕ್ಕೆ ಸಂಬಂಧಿಸಿ ಪ್ರಾಸಿಕ್ಯೂಷನ್ ಅನುಮತಿ ಕೋರಿರುವುದು ಕುಮಾರಸ್ವಾಮಿಯ ಆಕ್ರೋಶಕ್ಕೆ ಕಾರಣವಾಗಿತ್ತು.. ಕುಮಾರಸ್ವಾಮಿ ಎಸ್ಐಟಿ ಮುಖ್ಯಸ್ಥರಾಗಿದ್ದ, ಹಿರಿಯ ಐಪಿಎಸ್ ಅಧಿಕಾರಿ ಎಡಿಜಿಪಿ ಎಂ.ಚಂದ್ರಶೇಖರ್ ವಿರುದ್ಧ ಗುರುತರವಾದ ಆರೋಪವನ್ನು ಕೂಡ ಮಾಡಿದ್ದರು. ಚಂದ್ರಶೇಖರ್ ತಿರುಗಿ ಬಿದ್ದು, ಕುಮಾರಸ್ವಾಮಿ ವಿರುದ್ಧ ಎಫ್ಐಆರ್ ದಾಖಲಿಸಿದ್ದರು.
ತನ್ನ ಹಾಗೂ ತನ್ನ ಕುಟುಂಬದ ವಿರುದ್ಧ ದುರುದ್ದೇಶದಿಂದ ಸುಳ್ಳು ಆರೋಪಗಳನ್ನು ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಚಂದ್ರಶೇಖರ್ ದೂರು ಸಲ್ಲಿಸಿದ್ದರು.