ಸಾಮಾಜಿಕ, ಆರ್ಥಿಕ ಸಮೀಕ್ಷೆ ವರದಿ ಸಮಾಜದಲ್ಲಿ ಅಶಾಂತಿಗೆ ಕಾರಣವಾಗಿದೆ: ಬೊಮ್ಮಾಯಿ

Update: 2024-03-01 16:06 GMT

ಬೆಂಗಳೂರು: ರಾಜ್ಯ ಸರಕಾರ ಸಾಮಾಜಿಕ, ಆರ್ಥಿಕ ಸಮೀಕ್ಷೆ ವರದಿ ಪಡೆದಿರುವುದು ಸಮಾಜದಲ್ಲಿ ಅಶಾಂತಿಗೆ ಕಾರಣವಾಗಿದೆ. ಸರಕಾರ ಬೆಂಕಿಯ ಜೊತೆ ಆಟವಾಡಲು ಹೊರಟಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2017ರಲ್ಲಿ ಸಿದ್ದರಾಮಯ್ಯ ಎಲ್ಲ ಜಾತಿಗಳ ಶಿಕ್ಷಣ ಮತ್ತು ಸಾಮಾಜಿಕ ಅಧ್ಯಯನ ಮಾಡಲು ಸೂಚಿಸಿದ್ದರು. ಅವರ ಉದ್ದೇಶ ಬೇರೆ ಇತ್ತು. ಕಾಂತರಾಜ ವರದಿ ಸಿದ್ದವಾದಾಗ ಸಿದ್ದರಾಮಯ್ಯ ಸಿಎಂ ಆಗಿದ್ದರು. ಆಗ ಚುನಾವಣೆ ಇದ್ದ ಕಾರಣ ವರದಿ ಸ್ವೀಕಾರ ಮಾಡಲಿಲ್ಲ. ಆಗ ವರದಿಯ ಬಗ್ಗೆ ಸಾಕಷ್ಟು ಗೊಂದಲ ಇತ್ತು. ಈಗ ಕೊಟ್ಟಿರುವ ವರದಿಯಲ್ಲಿಯೂ ಗೊಂದಲ ಇದೆ ಎಂದರು.

ಇವರು ರಾಜ್ಯದ 5.82 ಕೋಟಿ ಜನರನ್ನು ಸಂಪರ್ಕ ಮಾಡಿದ್ದೇವೆ ಅಂತ ಹೇಳುತ್ತಾರೆ. ಆದರೆ, ಬಹುತೇಕ ಜನರು ತಮ್ಮನ್ನು ಸಂಪರ್ಕ ಮಾಡಿಲ್ಲ ಎನ್ನುತ್ತಾರೆ. ಈಗ ಕೊಟ್ಟಿರುವ ವರದಿ ಚೌ ಚೌ ವರದಿ. ಡಾಟಾ ಕಾಂತರಾಜ ಅವರದು, ಜಯಪ್ರಕಾಶ್ ಹೆಗ್ಡೆ ಅವರು ವರದಿ ನನ್ನದು ಅಂತ ಹೇಳಿದ್ದಾರೆ. ಮುಖ್ಯಮಂತ್ರಿಯವರು ಜಯಪ್ರಕಾಶ್ ಹೆಗ್ಡೆ ಅವರ ಅವಧಿ ವಿಸ್ತರಿಸಿ ರಾಜಕೀಯ ಕಾರಣಕ್ಕೆ ವರದಿ ಪಡೆದಿದ್ದಾರೆ ಎಂದು ಬೊಮ್ಮಾಯಿ ಆರೋಪಿಸಿದರು.

ಜಾತಿ ಸಮೀಕ್ಷೆಗೆ ವಿರೋಧವಿಲ್ಲ: ಜಾತಿ ಸಮೀಕ್ಷೆಗೆ ನಮ್ಮ ವಿರೋಧವಿಲ್ಲ. ಜಾತಿ ಸಂಖ್ಯೆಯ ಜೊತೆಗೆ ಅವರ ಆರ್ಥಿಕ, ಸಾಮಾಜಿಕ ಸ್ಥಿತಿಗತಿ ಮೇಲೆತ್ತಬೇಕು ಎನ್ನುವ ಬದ್ದತೆ ನಮಗಿದೆ. ಅದಕ್ಕಾಗಿಯೇ ನಾವು ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿದ್ದೇವೆ. ಈಗ ಇವರು ತೆಗೆದುಕೊಂಡ ವರದಿಯ ಬಗ್ಗೆ ಯಾಕೆ ಮುಚ್ಚು ಮರೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಹಿಂದುಳಿದ ವರ್ಗದಲ್ಲಿ 150 ಜಾತಿಗಳನ್ನು ಸೇರಿಸಿದ್ದಾರೆ. ಅವರಿಗೆ ಮೀಸಲಾತಿಯ ಬಗ್ಗೆ ಚರ್ಚೆಯಾಗಬೇಕು. ಹಿಂದುಳಿದವರಲ್ಲಿ ಅತಿ ಹಿಂದುಳಿದ ಕಟ್ಟ ಕಡೆಯ ಸಮುದಾಯಗಳಿಗೆ ಮೀಸಲಾತಿ ಪ್ರಯೋಜನ ಸಿಗುತ್ತಿಲ್ಲ. ಅವರಿಗೆ ಸೌಲಭ್ಯ ಸಿಗಬೇಕು. ಮುಖ್ಯಮಂತ್ರಿ ಇದನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು ಎಂದು ಬೊಮ್ಮಾಯಿ ಹೇಳಿದರು.

ಮುಸ್ಲಿಮರು ಅಲ್ಪಸಂಖ್ಯಾತರಲ್ಲ: ರಾಜ್ಯ ಸರಕಾರ ಸ್ವೀಕಾರ ಮಾಡಿರುವ ವರದಿಯಲ್ಲಿ 70 ಲಕ್ಷ ಜನ ಮುಸ್ಲಿಮರಿದ್ದಾರೆ ಎಂದು ಸೋರಿಕೆಯಾದ ವರದಿಯಲ್ಲಿ ಮಾಹಿತಿ ಇದೆ. ಹಾಗಿದ್ದರೆ ಅವರು ಅಲ್ಪಸಂಖ್ಯಾತರು ಹೇಗೆ ಆಗುತ್ತಾರೆ? ರಾಜ್ಯದ ಬಹುಸಂಖ್ಯಾತ ಜಾತಿಗಳಿಗಿಂತ ಅವರ ಜನಸಂಖ್ಯೆ ಹೆಚ್ಚಿದೆ ಎಂದರೆ ಅವರು ಹೇಗೆ ಅಲ್ಪಸಂಖ್ಯಾತರಾಗುತ್ತಾರೆ ಎಂದು ಅವರು ಪ್ರಶ್ನಿಸಿದರು.

ಎಫ್‌ಎಸ್‌ಎಲ್ ವರದಿ ಬಹಿರಂಗ ಪಡಿಸಲಿ: ಪಾಕ್ ಪರ ಘೋಷಣೆ ಕೂಗಿರುವುದು ಎಫ್. ಎಸ್.ಎಲ್ ವರದಿಯಲ್ಲಿ ಸ್ಪಷ್ಟವಾಗಿದೆ ಎಂಬ ಮಾಹಿತಿ ಇದೆ. ಘೊಷಣೆ ಕೂಗಿದವರು ಭಯೋತ್ಪಾದಕರಿಗೆ ಸಹಕಾರ ನೀಡುವ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಗಳಿವೆ. ಸರಕಾರ ಯಾವ ಕಾರಣಕ್ಕೆ ವರದಿ ಮುಚ್ಚಿಡಲು ಪ್ರಯತ್ನ ಮಾಡುತ್ತಿದೆ ಎಂದು ಬೊಮ್ಮಾಯಿ ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News