ಸಮಿತಿಗಳ ವರದಿಯ ಶಿಫಾರಸುಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಸ್ಪೀಕರ್ ಯು.ಟಿ ಖಾದರ್ ಸೂಚನೆ
ಬೆಂಗಳೂರು, ಅ.21: ‘ವಿಧಾನ ಮಂಡಲ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ, ಅರ್ಜಿಗಳ ಸಮಿತಿ ಸೇರಿದಂತೆ ವಿವಿಧ ಸಮಿತಿಗಳು ನೀಡುವ ವರದಿಯ ಶಿಫಾರಸುಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಚರ್ಚಿಸಬೇಕು. ಅಲ್ಲದೆ, ಅವುಗಳ ಅನುಷ್ಠಾನಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಸೂಚಿಸಿದ್ದಾರೆ.
ಸೋಮವಾರ ವಿಧಾನಸಭೆಯ ಮೊದಲ ಮಹಡಿಯಲ್ಲಿನ ಸಮಿತಿ ಕೊಠಡಿಯಲ್ಲಿ ಸ್ಪೀಕರ್ ಯು.ಟಿ.ಖಾದರ್ ಅವರು ತಮ್ಮ ಅಧ್ಯಕ್ಷತೆಯಲ್ಲಿ, ವಿಧಾನ ಮಂಡಲದ ವಿವಿಧ ಸಮಿತಿಗಳ ನೂತನ ಅಧ್ಯಕ್ಷರು, ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಉಪಸ್ಥಿತಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಸಮಿತಿಗಳು ನೀಡುವ ವರದಿಗಳನ್ನು ಇನ್ನು ಮುಂದೆ ಅಧಿವೇಶನದಲ್ಲಿ ಚರ್ಚಿಸಿ, ಶಿಫಾರಸುಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಸಮಿತಿ ಸಭೆಗಳಿಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗಬೇಕು. ಸಮಿತಿ ಸಭೆಗಳ ಸಮನ್ವಯಕ್ಕೆ ಸಚಿವಾಲಯದಲ್ಲಿ ನೋಡಲ್ ಅಧಿಕಾರಿಯೊಬ್ಬರನ್ನು ನಿಯೋಜನೆ ಮಾಡಲು ಕ್ರಮ ವಹಿಸಬೇಕು ಎಂದು ಯು.ಟಿ.ಖಾದರ್ ನಿರ್ದೇಶನ ನೀಡಿದರು.
ಸಭೆಯಲ್ಲಿ ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪಲಮಾಣಿ, ವಿಧಾನ ಮಂಡಲ ಸಮಿತಿಗಳ ಅಧ್ಯಕ್ಷರಾದ ಪಿ.ಎಂ. ನರೇಂದ್ರಸ್ವಾಮಿ, ನಂಜೇಗೌಡ, ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಸೇರಿದಂತೆ ಅಧಿಕಾರಿಗಳು, ಸಚಿವಾಲಯ ಸಿಬ್ಬಂದಿ ಪಾಲ್ಗೊಂಡಿದ್ದರು.