ಪಂಚಾಯತ್ ರಾಜ್ ವ್ಯವಸ್ಥೆ ಬಲವರ್ಧನೆ: ‘ಜವಾಬ್ದಾರಿ ನಕ್ಷೆ’ ಕುರಿತು ಪ್ರಿಯಾಂಕ್ ಖರ್ಗೆ ಚರ್ಚೆ
ಬೆಂಗಳೂರು: ಪಂಚಾಯತ್ ರಾಜ್ ಸಂಸ್ಥೆಗಳನ್ನು ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ಆಯಾ ಪಂಚಾಯತ್ ರಾಜ್ ಸಂಸ್ಥೆಗಳ ಹಂತದಲ್ಲಿ ಪರಿಣಾಮಕಾರಿಯಾಗಿ ನಿರ್ವಹಿಸಬಹುದಾದ ಚಟುವಟಿಕೆಗಳನ್ನು ಒಳಗೊಂಡ ‘ಜವಾಬ್ದಾರಿ ನಕ್ಷೆ’ಗಳನ್ನು ಗುರುತಿಸಲು ಸರಕಾರದ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಚರ್ಚಿಸಿದರು.
ಮಂಗಳವಾರ ವಿಧಾನಸೌಧದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಗ್ರಾಮೀಣಾಭಿವೃದ್ಧಿ ಇಲಾಖೆಯ ಸಾರ್ವಜನಿಕ ವಿತರಣಾ ಕೇಂದ್ರಗಳು ಗ್ರಾಮ ಪಂಚಾಯತಿಗಳ ಜೊತೆ ಸೇರಿ ಸುಗಮವಾಗಿ ಸೇವೆಗಳ ವಿತರಣೆ ಮಾಡುವುದು. ಕ್ಷೇತ್ರ ಮಟ್ಟದ ಮೂಲಭೂತ ಸೌಕರ್ಯ ಅಭಿವೃದ್ಧಿಪಡಿಸಲು ಸಂಪನ್ಮೂಲದ ಕೊರತೆ ಕಂಡು ಬಂದರೆ ಗ್ರಾಮ, ತಾಲೂಕು, ಜಿಲ್ಲಾ ಪಂಚಾಯತಿಗಳ ಅಭಿವೃದ್ಧಿ ಅನುದಾನಗಳ ಜೊತೆ ಒಗ್ಗೂಡಿಸುವಿಕೆಯೊಂದಿಗೆ ಅಭಿವೃದ್ಧಿಪಡಿಸುವುದು, ಇಲಾಖೆಗಳ ಕ್ಷೇತ್ರ ಮಟ್ಟದ ಸೇವಾ ವಿತರಣಾ ಕೇಂದ್ರಗಳು ನೀಡುತ್ತಿರುವ ಸೇವೆಗಳನ್ನು ಮೇಲ್ವಿಚಾರಣೆ ಮಾಡುವುದು ಮುಂತಾದ ನಿರೀಕ್ಷೆಗಳನ್ನು ಸಭೆಯ ಮುಂದಿರಿಸಿದರು.
ಕ್ಷೇತ್ರ ಮಟ್ಟದಲ್ಲಿ ಸೇವೆಗಳ ವಿತರಣೆಯ ಬಗ್ಗೆ ಬರುವ ಕುಂದುಕೊರತೆಗಳನ್ನು ಪರಿಶೀಲಿಸಿ ಸರಿಪಡಿಸುವುದು, ಎಲ್ಲ ಯೋಜನೆಗಳ ಫಲಾನುಭವಿಗಳ ಆಯ್ಕೆಯನ್ನು ಗ್ರಾಮ ಪಂಚಾಯತಿಗಳ ಮುಖಾಂತರ ಸಭೆಯಲ್ಲಿ ಆಯ್ಕೆ ಮಾಡುವುದು ಸಹ ಗ್ರಾಮೀಣಾಭಿವೃದ್ಧಿ ಇಲಾಖೆಯ ಆಶಯಗಳಲ್ಲಿ ಸೇರಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಗ್ರಾಮ ಪಂಚಾಯಿತಿಗಳು ಅಭಿವೃದ್ಧಿ ವಿಷಯದಲ್ಲಿ ಆಡಳಿತಾತ್ಮಕ ಘಟಕ ವಾಗುವುದು ಸೂಕ್ತವಾಗಿದ್ದು, ಎಲ್ಲ ಇಲಾಖೆಗಳ ಕ್ಷೇತ್ರ ಮಟ್ಟದ ಕಚೇರಿಗಳನ್ನು ಗ್ರಾಮ ಪಂಚಾಯತಿಗಳ ಭೌಗೋಳಿಕ ವಿಸ್ತೀರ್ಣಗಳ ಜೊತೆ ಸಂಯೋಜನೆಗೊಳಿಸುವ ಚೀಂತನೆಯನ್ನೂ ಗ್ರಾಮೀಣಾಭಿವೃದ್ಧಿ ಇಲಾಖೆ ಹೊಂದಿದೆ ಎಂದು ಅವರು ಹೇಳಿದರು.
ಗ್ರಾಮ ಪಂಚಾಯಿತಿ ಹಂತದಲ್ಲಿ ಕರ್ನಾಟಕ ಅಭಿವೃದ್ಧಿ ಯೋಜನೆ (ಕೆ.ಡಿ.ಪಿ) ಪ್ರಗತಿ ಪರಿಶೀಲನಾ ಸಭೆ ನಡೆಸಲು ಸರಕಾರದ ಸೂಚನೆಯಿದ್ದು, ಇಂತಹ ಸಭೆಗಳಿಗೆ ಕ್ಷೇತ್ರ ಮಟ್ಟದ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಎಲ್ಲ ಮಾಹಿತಿಯೊಂದಿಗೆ ತಪ್ಪದೆ ಹಾಜರಾಗಬೇಕೆಂದು ಪ್ರಿಯಾಂಕ್ ಖರ್ಗೆ ಸೂಚನೆ ನೀಡಿದರು.
ಸಭೆಯಲ್ಲಿ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಪ್ರಮೋದ್ ಹೆಗಡೆ, ತಜ್ಞ ಸದಸ್ಯರಾದ ವಿ.ವೈ.ಘೋರ್ಪಡೆ ಮತ್ತು ಡಿ.ಆರ್.ಪಾಟೀಲ್, ಅಭಿವೃದ್ಧಿ ಆಯುಕ್ತೆ ಡಾ.ಶಾಲಿನಿ ರಜನೀಶ್, ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್, ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಿ.ಮಣಿವಣ್ಣನ್, ಆಯುಕ್ತ ಡಾ.ಕೆ.ರಾಕೇಶ್ ಕುಮಾರ್, ಪಂಚಾಯತ್ ರಾಜ್ ಇಲಾಖೆಯ ಆಯುಕ್ತೆ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಹಾಗೂ ಆರೋಗ್ಯ, ಶಿಕ್ಷಣ ಇನ್ನಿತರ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.