ತೆರಿಗೆ ಹಣ ವಿಚಾರ: ಪರಿಷತ್ತಿನಲ್ಲಿ ಗದ್ದಲದ ವಾತಾವರಣ

Update: 2024-02-14 17:00 GMT

ಬೆಂಗಳೂರು: ರಾಜ್ಯಕ್ಕೆ ಬರಬೇಕಾದ ತೆರಿಗೆ ಹಣವನ್ನು ನೀಡಲು ಮೀನಾಮೇಷ ಎಣಿಸುತ್ತಿರುವ ಕೇಂದ್ರ ಸರಕಾರಕ್ಕೆ ಮಾನ ಮಾರ್ಯಾದೆ ಇಲ್ಲ ಎಂದು ಆಡಳಿತ ಪಕ್ಷದ ಸದಸ್ಯ ಯು.ಬಿ.ವೆಂಕಟೇಶ್ ಹೇಳುತ್ತಿದ್ದಂತೆ ಪರಿಷತ್ತಿನಲ್ಲಿ ಗದ್ದಲದ ವಾತಾವರಣ ಉಂಟಾಯಿತು.

ಬುಧವಾರ ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣಾ ಪ್ರಸ್ತಾವ ಮೇಲಿನ ಚರ್ಚೆ ನಡೆಸಿದ ಆಡಳಿತ ಪಕ್ಷದ ಸದಸ್ಯ ಯು.ಬಿ.ವೆಂಕಟೇಶ್, ನಡೆದಂತೆ ನುಡಿದಂತೆ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಿದ್ದೇವೆ. ಆದರೆ ಕೇಂದ್ರ ರಾಜ್ಯದ ತೆರಿಗೆ ಪಾಲನ್ನು ಪಾವತಿಸಿಲ್ಲ ಎಂದರು.

ಈ ವೇಳೆ ಮಾತನಾಡಿದ ಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ, ರಾಜ್ಯಪಾಲರ ಭಾಷಣ ವೇಳೆ ರಾಜ್ಯ ಸರ್ಕಾರದ ಸಾಧನೆಗಳ ಬಗ್ಗೆ ಹೇಳಬೇಕು. ಕೇಂದ್ರದ ವಿರುದ್ಧ ಅವಹೇಳನಕಾರಿ ಮಾತನಾಡುವುದು ಸರಿಯಲ್ಲ. ರಾಜ್ಯಕ್ಕೆ ಬರಬೇಕಾದ ತೆರಿಗೆ ಹಣ ಕೇಂದ್ರ ನೀಡಿದೆ. ಒಂದು ಸುಳ್ಳನ್ನು ಸಾವಿರ ಬಾರಿ ಹೇಳಿ ನಿಜ ಮಾಡಲು ಹೊರಟ್ಟಿದ್ದೀರಾ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಬಿ.ಕೆ.ಹರಿಪ್ರಸಾದ್, ತೆರಿಗೆ ಹಣ ನೀಡುವ ವಿಚಾರದಲ್ಲಿ ರಾಜ್ಯಕ್ಕೆ ಕೇಂದ್ರ ಸರಕಾರವು ಮಲತಾಯಿ ಧೋರಣೆ ಅನುಸರಿಸುವ ಮೂಲಕ ಜನತೆಗೆ ಮೋಸ ಮಾಡಿದೆ ಎಂದು ಆಪಾದಿಸಿದರು.

ಇದಕ್ಕೆ ಕೋಟಾ ಪ್ರತಿಕ್ರಿಯಿಸಿ, ಮಂತ್ರಿಯಾಗುವ ಕನಸು ಈಡೇರಿಲ್ಲ ಎಂಬುವುದು ನಮಗೆ ಗೊತ್ತಿದ್ದು ಈ ಬಗ್ಗೆ ವಿಷಾದವಿದೆ ಎಂದಿದಕ್ಕೆ ತೀಕ್ಷವಾಗಿ ಪ್ರತಿಕ್ರಿಯಿಸಿದ ಹರಿಪ್ರಸಾದ್, ಮಂತ್ರಿಯಾಗುವ ಆಗುವುದಕ್ಕೆ ನಾನು ಬಂದಿಲ್ಲ. ನನಗೆ ಮಂತ್ರಿಯಾಗುವ ಅಜೆಂಡಾ ಇಟ್ಟುಕೊಂಡಿಲ್ಲ. ನಾನು ಹಲವರನ್ನು ಮಂತ್ರಿ ಮಾಡಿದ್ದೇನೆ. ಪಕ್ಷ ಸಂಘಟನೆ ಮಾಡುತ್ತೇನೆ ಎಂದರು.

ಮಾತು ಮುಂದುವರೆಸಿದ ವೆಂಕಟೇಶ್, ಸರಕಾರದ ಸಾಧನೆಗಳ ಭಾಷಣ ಮುಂದುವರೆಯುತ್ತಿದ್ದಂತೆ ಅಯೋಧ್ಯೆ ರಾಮಮಂದಿರವನ್ನು ಕೇಂದ್ರವು ಗುತ್ತಿಗೆ ಪಡೆದುಕೊಂಡಿದೆಯಾ ಎಂದು ಪ್ರಶ್ನಿಸಿದರು. ಇದಕ್ಕೆ ಬಿಜೆಪಿ ಸದಸ್ಯರು ಮತ್ತೆ ವಿರೋಧ ವ್ಯಕ್ತಪಡಿಸಿದರು.

ವಿಪಕ್ಷ ಸಚೇತಕ ರವಿಕುಮಾರ್ ಮಾತನಾಡಿ, ನಾವು ಎಲ್ಲಿಯೂ ರಾಮಮಂದಿರ ಗುತ್ತಿಗೆ ಪಡೆದುಕೊಂಡಿದ್ದೇವೆ ಹೇಳಿಲ್ಲ. ಶ್ರೀರಾಮ ಜನ್ಮಭೂಮಿ ಎಂದಷ್ಟೇ ಹೇಳಿದ್ದೇವೆ ಎಂದರು. ಮಧ್ಯಪ್ರವೇಶಿಸಿದ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಸುಪ್ರೀಕೋರ್ಟ್ ಆದೇಶದಲ್ಲಿ ಅಯೋಧ್ಯೆಯು ಶ್ರೀರಾಮನ ಜನ್ಮಭೂಮಿಯಲ್ಲ ಎಂದು ಹೇಳಿದೆ. ಆದರೆ ರಾಮನನ್ನು ಗುತ್ತಿಗೆ ಪಡೆದುಕೊಂಡಿರುವ ರೀತಿ ಬಿಜೆಪಿ ವರ್ತಿಸುತ್ತಿದೆ. ಈ ಬಗ್ಗೆ ಹೋರಾಟ ನಡೆಸಿದ್ದ ಎಲ್.ಕೆ.ಅಡ್ವಾಣಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿವೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ರವಿಕುಮಾರ್, ಸುಪ್ರೀಕೋರ್ಟ್ ತೀರ್ಪು ಮತ್ತೊಮ್ಮೆ ಓದಿ, ಅಯೋಧ್ಯೆಯಲ್ಲಿ ಶ್ರೀರಾಮನ ಜನ್ಮಸ್ಥಳ ಎಂದು ಐವರು ನ್ಯಾಯಾಧೀಶರು ತೀರ್ಪು ನೀಡಿದ್ದಾರೆ ಎಂದರು. ಇದೇ ವಿಷಯವಾಗಿ ಉಭಯ ಪಕ್ಷದ ಸದಸ್ಯರ ನಡುವೆ ವಾಕ್ಸಮರ ಉಂಟಾಯಿತು. ಸಭಾಪತಿ ಬಸವರಾಜ ಹೊರಟ್ಟಿ ಮಧ್ಯೆ ಪ್ರವೇಶಿಸಿದರೂ ಗದ್ದಲ ನಿಲ್ಲಿಸದ ಕಾರಣ ಸದನವನ್ನು ನಾಳೆಗೆ ಮುಂದೂಡಿದರು.

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News