ಒಸಿ ನೀಡಿದ ಬಳಿಕವಷ್ಟೇ ತೆರಿಗೆ ಸಂಗ್ರಹಿಸಬೇಕು: ಹೈಕೋರ್ಟ್

Update: 2023-12-20 17:19 GMT

ಬೆಂಗಳೂರು: ನಿರ್ಮಾಣ ಕಾರ್ಯ ಪೂರ್ಣಗೊಳಿಸಿದ ನಂತರ ಕಟ್ಟಡಕ್ಕೆ ಸ್ವಾಧೀನಾನುಭವ ಪತ್ರ (ಒಸಿ) ನೀಡಿದ ನಂತರವೇ ಆ ಕಟ್ಟಡಕ್ಕೆ ತೆರಿಗೆ ವಿಧಿಸಬಹುದು ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

ಈ ಕುರಿತು ಮೆಸರ್ಸ್ ಬಿ.ಎಂ.ಹ್ಯಾಬಿಟೇಟ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಆದೇಶ ನೀಡಿದೆ.

ಸ್ವಾಧೀನಾನುಭವ ಪತ್ರ ನೀಡುವ ಮುನ್ನವೇ ಹಿಂದಿನ ದಿನಾಂಕದಿಂದ ತೆರಿಗೆ ಪಾವತಿಸುವಂತೆ ಪಾಲಿಕೆ ನೀಡಿದ್ದ ನೋಟಿಸ್ ಅನ್ನು ನ್ಯಾಯಾಲಯ ರದ್ದುಗೊಳಿಸಿದೆ. 2011ರ ಎ.25ರಿಂದ ಅನ್ವಯವಾಗುವಂತೆ ಅರ್ಜಿದಾರರಿಂದ ತೆರಿಗೆ ಸ್ವೀಕರಿಸುವಂತೆ ಸೂಚಿಸಿದೆ.

ಪ್ರಕರಣ ಸಂಬಂಧ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠವು, 2010ರಲ್ಲಿ ಕಟ್ಟಡಕ್ಕೆ ಎನ್‍ಒಸಿ ವಿತರಿಸಲಾಗಿದೆ. ಹೀಗಾಗಿ, ಅರ್ಜಿದಾರರು ಆ ಮಾಲ್ ಅನ್ನು ಬಳಕೆ ಮಾಡಿಲ್ಲ. ಅರ್ಜಿದಾರರು ಒಸಿಗಾಗಿ ಮನವಿ ಸಲ್ಲಿಸಿದ್ದರೂ ಪಾಲಿಕೆ ಸಕಾಲದಲ್ಲಿ ಪರಿಗಣಿಸದೆ ವಿಳಂಬ. ಕಟ್ಟಡ ಪೂರ್ಣಗೊಂಡ ಬಳಿಕ ಒಸಿ ವಿತರಣೆ ನಂತರವೇ ತೆರಿಗೆ ವಿಧಿಸಬಹುದೇ ಹೊರತು ಮುಂಚಿತವಾಗಿ ಅಲ್ಲ. ಹೀಗಾಗಿ, ಬಿಬಿಎಂಪಿಯ ನೋಟಿಸ್ ರದ್ದುಗೊಳಿಸಲಾಗುತ್ತಿದೆ ಎಂದು ಪೀಠ ತಿಳಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಕಟ್ಟಡ ನಿರ್ಮಾಣ ಕಾರ್ಯವನ್ನು 2010ರಲ್ಲಿ ಪೂರ್ಣಗೊಳಿಸಲಾಗಿದೆ. ಆದರೆ ಮಲ್ಟಿಪೆಕ್ಸ್ ನಡೆಸಲು ಜಿಲ್ಲಾಧಿಕಾರಿಗಳು ಎನ್‍ಒಸಿ ವಿತರಿಸುವುದು ಮತ್ತು ಆಗ್ನಿಶಾಮಕ ದಳದ ಅನುಮೋದನೆ ಸಿಗುವುದು ತಡವಾಗಿದೆ. 2010ರ ಜು.5ರಂದು ಸ್ವಾಧೀನಾನುಭವ ಪತ್ರ ನೀಡುವಂತೆ ಮನವಿ ಮಾಡಲಾಗಿತ್ತು. ಆದರೆ ಅದನ್ನು ಪಾಲಿಕೆ ಪರಿಗಣಿಸಿರಲಿಲ್ಲ. ಹೀಗಾಗಿ, 2010ರ ಡಿ.2ರಂದು ಮತ್ತೊಂದು ಅರ್ಜಿ ಸಲ್ಲಿಸಲಾಗಿತ್ತು ಎಂದು ವಿವರಿಸಿದರು.

ತದನಂತರ ಪಾಲಿಕೆ ಅಧಿಕಾರಿಗಳು ಕಟ್ಟಡವನ್ನು ಪರಿಶೀಲನೆ ನಡೆಸಿ, 2011ರ ಎ.25ಕ್ಕೆ ಒಸಿ ವಿತರಿಸಿದ್ದಾರೆ. ನಿಯಮದಂತೆ ಆಸ್ತಿ ತೆರಿಗೆಯನ್ನು ಕಟ್ಟಡಕ್ಕೆ ಒಸಿ ನೀಡಿದ ಬಳಿಕವಷ್ಟೇ ವಿಧಿಸಬೇಕು. ಆದರೆ ಪಾಲಿಕೆ ಹಿಂದಿನ ದಿನಾಂಕದಿಂದಲೇ ವಿತರಣೆ ಮಾಡುವಂತೆ ಡಿಮ್ಯಾಂಡ್ ನೋಟಿಸ್ ನೀಡಿದೆ. ಅದನ್ನು ರದ್ದುಗೊಳಿಸಬೇಕು ಎಂದು ನ್ಯಾಯಪೀಠವನ್ನು ಕೋರಿದರು.

ಇದಕ್ಕೆ ಆಕ್ಷೇಪಿಸಿದ ಪಾಲಿಕೆ ಪರ ವಕೀಲರು, ಅರ್ಜಿದಾರರು ಕಟ್ಟಡ ನಿರ್ಮಾಣ ಪೂರ್ಣಗೊಂಡಿರುವ ದಿನಾಂಕವನ್ನು ತಪ್ಪಾಗಿ ನಮೂದಿಸಿದ್ದಾರೆ. ಏಕೆಂದರೆ ಕಟ್ಟಡ ನಿರ್ಮಾಣಕ್ಕೆ ನೀಡಲಾಗಿದ್ದ ನಕ್ಷೆ ಅನುಮೋದನೆ ದಿನಾಂಕ 2008ರ ಜ.17ರವರೆಗೆ ಮಾತ್ರ ಚಾಲ್ತಿಯಲ್ಲಿತ್ತು. ಹೀಗಾಗಿ, ಕಟ್ಟಡ ನಿರ್ಮಾಣ ಕಾರ್ಯ 2008ರಲ್ಲೇ ಪೂರ್ಣಗೊಂಡಿದೆ ಎಂದು ವಾದಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News