ಅಲಯನ್ಸ್ ವಿವಿಯ ಮಾಜಿ ಕುಲಪತಿ ಡಾ.ಮಧುಕರ್ ಅಂಗೂರ್ ವಿರುದ್ಧದ ಈಡಿ ಪ್ರಕರಣ ರದ್ದು

Update: 2024-03-20 17:45 GMT

ಬೆಂಗಳೂರು: ಅಲಯನ್ಸ್ ವಿವಿಯ ಮಾಜಿ ಕುಲಪತಿ ಡಾ.ಮಧುಕರ್ ಅಂಗೂರ್ ವಿರುದ್ಧದ ಜಾರಿ ನಿರ್ದೇಶನಾಲಯ‌ ದಾಖಲಿಸಿದ್ದ ಅಕ್ರಮ ಹಣ ವರ್ಗಾವಣೆ ನಿಯಂತ್ರಣಾ ಕಾಯ್ದೆಯ  ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ.

ಅಲಿಯನ್ಸ್ ವಿವಿಯ ಮಾಜಿ ಕುಲಪತಿ ಮಧುಕರ್ ಅಂಗೂರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ಪೀಠ ಪ್ರಕರಣವನ್ನು ರದ್ದುಗೊಳಿಸಿ ಆದೇಶಿಸಿದೆ. ಸುಪ್ರೀಂಕೋರ್ಟ್ ಪವನ್ ದಿಬ್ಬೂರ್ ವರ್ಸಸ್ ಜಾರಿ ನಿರ್ದೇಶಾಲಯದ ಪ್ರಕರಣದಲ್ಲಿ ನೀಡಿದ್ದ ತೀರ್ಪು ಆಧರಿಸಿ ಪ್ರಕರಣ ರದ್ದುಗೊಳಿಸಿ ಆದೇಶ ನೀಡಿರುವುದಾಗಿ ಪೀಠ ತಿಳಿಸಿದೆ.

ಪ್ರಕರಣದಲ್ಲಿ ಪ್ರತಿವಾದಿ ಜಾರಿ ನಿರ್ದೇಶನಾಲಯ ಅಗತ್ಯಬಿದ್ದರೆ ಸುಪ್ರೀಂಕೋರ್ಟ್ ಮುಂದೆ ಮರು ಪರಿಶೀಲನಾ ಅರ್ಜಿಯನ್ನು ಸಲ್ಲಿಸಿ ಅರ್ಜಿಯನ್ನು ಮತ್ತೆ ಪರಿಗಣಿಸುವಂತೆ ಕೋರಲು ಸ್ವಾತಂತ್ರ್ಯವಿದೆ. ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಐಪಿಸಿ ಸೆಕ್ಷನ್ 120 ಬಿ ಅಡಿಯಲ್ಲಿ ಕ್ರಿಮಿನಲ್ ಪಿತೂರಿ ಆರೋಪ ಇದ್ದಾಗ ಮಾತ್ರ ಅದು ಶೆಡ್ಯೂಲ್ಡ್ ಅಪರಾಧದ ವ್ಯಾಪ್ತಿಗೆ ಒಳಪಡುತ್ತದೆ ಎಂದು ಹೇಳಿರುವುದಾಗಿ ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.

ವಾದ-ಪ್ರತಿವಾದ ಆಲಿಸಿದ ಪೀಠ, ಪ್ರಕರಣದ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಐಪಿಸಿ ಸೆಕ್ಷನ್ 120ಬಿ ಆರೋಪ ಹೊರತುಪಡಿಸಿ ಇತರೆ ಅರೋಪಗಳು ಪಿಎಂಎಲ್‌ಎ ಕಾಯ್ದೆ ಶೆಡ್ಯೂಲ್ಡ್ ಅಪರಾಧಗಳ ಪಟ್ಟಿಯಲ್ಲಿ ಬರುವುದಿಲ್ಲ. ಆದ್ದರಿಂದ ಸುಪ್ರೀಂಕೋರ್ಟ್ ತೀರ್ಪು ನೀಡಿರುವಂತೆ ಪ್ರಕರಣ ಊರ್ಜಿತವಾಗುವುದಿಲ್ಲ. ಹಾಗಾಗಿ ಅದನ್ನು ಆಧರಿಸಿ ಪ್ರಕರಣವನ್ನು ರದ್ದುಪಡಿಸಲಾಗುತ್ತಿದೆ ಎಂದು ಆದೇಶ ನೀಡಿದೆ.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News