ಹಿಂದಿನ ಬಜೆಟ್ ಅನುದಾನವೇ ಖರ್ಚು ಮಾಡದ ಸರಕಾರ: ಆರ್.ಅಶೋಕ್ ಆರೋಪ

Update: 2024-02-22 15:59 GMT

ಬೆಂಗಳೂರು: ಸಿಎಂ ಸಿದ್ದರಾಮಯ್ಯನವರ 15ನೆ ಬಜೆಟ್ ಒಡೆದ ಕನ್ನಡಿಯಂತಿದೆ. ಪ್ರತಿಯೊಂದರಲ್ಲೂ ಬಿಂಬ ಕಾಣುತ್ತದೆ. ಆದರೆ, ಪೂರ್ಣ ಪ್ರಮಾಣದ ಮುಖ ಮಾತ್ರ ಕಾಣುವುದಿಲ್ಲ. ಹಾಗೆಯೇ ಕಳೆದ ಸಾಲಿನ ಬಜೆಟ್ ನಲ್ಲಿ ಇಲಾಖೆಗಳಿಗೆ ಅಭಿವೃದ್ಧಿಗಾಗಿ ಒದಗಿಸಿದ್ದ ಹಣ ಖರ್ಚಾಗದೆ ಬಾಕಿ ಉಳಿದಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದರು.

ಗುರುವಾರ ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರಕಾರವಿದ್ದಾಗ ದೇವಾಲಯ ಮತ್ತು ಧಾರ್ಮಿಕ ಸಂಸ್ಥೆಗಳಿಗೆ 274 ಕೋಟಿ ರೂ. ಖರ್ಚು ಮಾಡಲಾಗಿತ್ತು. ಜೊತೆಗೆ ಸಿಎಂ ವಿಶೇಷ ಅನುದಾನದಡಿ, ಮಠ ಹಾಗೂ ದೇವಾಲಯಗಳಿಗೆ 2022-23 ರಲ್ಲಿ 154.80 ಕೋಟಿ ರೂ. ಖರ್ಚು ಮಾಡಲಾಗಿತ್ತು. ಈಗ ಕಾಂಗ್ರೆಸ್ ಸರಕಾರ ಕೇವಲ 17 ಕೋಟಿ ರೂ.ಮೀಸಲಿಟ್ಟಿದೆ ಎಂದರು.

ವಕ್ಫ್ ಮಂಡಳಿಗೆ 100 ಕೋಟಿ ರೂ.ಅನುದಾನ ನೀಡಲಾಗಿದೆ. ಹಿಂದೂ ರುದ್ರಭೂಮಿಗಳ ಅಭಿವೃದ್ಧಿಗೆ ಬಿಜೆಪಿ ಸರಕಾರ 24.7 ಕೋಟಿ ರೂ.ಖರ್ಚು ಮಾಡಿದ್ದರೆ ಈಗಿನ ಸರಕಾರ 10 ಕೋಟಿ ರೂ. ಮೀಸಲಿಟ್ಟಿದೆ. ದೇವಸ್ಥಾನಗಳ ಆಸ್ತಿ ಕೋಟ್ಯಂತರ ರೂಪಾಯಿ ಬೆಲೆ ಬಾಳುತ್ತಿದ್ದು, ಅದನ್ನು ನಿರ್ವಹಿಸಲು ಹೆಚ್ಚು ಅನುದಾನ ಬೇಕಾಗುತ್ತದೆ ಎಂದು ಅವರು ಹೇಳಿದರು.

ನಾನು ಸಾರಿಗೆ ಸಚಿವನಾಗಿದ್ದಾಗ 1,200 ಎಕರೆ ಸರಕಾರಿ ಜಮೀನನ್ನು ಹರಾಜು ಹಾಕುವುದನ್ನು ತಪ್ಪಿಸಿ ಸಾರಿಗೆ ಇಲಾಖೆಗೆ ಕೊಡಲು ಕ್ರಮ ವಹಿಸಿ ಯಶಸ್ವಿಯಾಗಿದ್ದೆ. ಈ ರೀತಿ ಸರಕಾರಿ ಜಮೀನನ್ನು ಉಳಿಸಲು ಕ್ರಮ ವಹಿಸಿ ಎಂದು ಅಶೋಕ್ ಕಿವಿಮಾತು ಹೇಳಿದರು.

ತೆರಿಗೆ ಸಂಗ್ರಹ ಇಳಿಕೆ: 2023-24 ರಲ್ಲಿ ತೆರಿಗೆ ಸಂಗ್ರಹದ ಗುರಿ 1,75,653 ಕೋಟಿ ರೂ. ಇದ್ದು, 1,61,494 ಕೋಟಿ ರೂ.ಸಂಗ್ರಹವಾಗಿದೆ. ಅಂದರೆ ಗುರಿಗಿಂತ 14,159 ಕೋಟಿ ರೂ. ಸಂಗ್ರಹ ಕಡಿಮೆಯಾಗಿದೆ. ಇದು ಕಾಂಗ್ರೆಸ್ ಸರಕಾರದ ವೈಫಲ್ಯ. 2024-25 ರಲ್ಲಿ ತೆರಿಗೆ ಸಂಗ್ರಹದ ಗುರಿ 1,89,893 ಕೋಟಿ ರೂ. ಇದ್ದು, ಕಳೆದ ಬಾರಿಗಿಂತ 28,399 ಕೋಟಿ ರೂ. ಅಧಿಕ ಗುರಿ ನೀಡಲಾಗಿದೆ ಎಂದು ಅವರು ಹೇಳಿದರು.

2022-23 ರಲ್ಲಿ ಬಜೆಟ್ ಗಾತ್ರ 2,89,653 ಕೋಟಿ ರೂ. ಹಾಗೂ ಬಂಡವಾಳ ವೆಚ್ಚ 57,348 ಕೋಟಿ ರೂ. ಇತ್ತು. 2023-24 ರಲ್ಲಿ ಬಜೆಟ್ ಗಾತ್ರ 3,27,747 ಕೋಟಿ ರೂ. ಹಾಗೂ ಬಂಡವಾಳ ವೆಚ್ಚ 51,231 ಕೋಟಿ ರೂ. ಆಗಿತ್ತು. 2024-25 ರಲ್ಲಿ ಬಜೆಟ್ ಗಾತ್ರ 3,71,383 ಕೋಟಿ ರೂ. ಆಗಿದ್ದು, ಬಂಡವಾಳ ವೆಚ್ಚ 52,903 ಕೋಟಿ ರೂ. ಆಗಿದೆ. ಇದನ್ನು ನೋಡಿದರೆ ರಾಜ್ಯದ ಆರ್ಥಿಕ ಪರಿಸ್ಥಿತಿ ಒಂದು ರೀತಿಯಲ್ಲಿ ಪ್ರಪಾತಕ್ಕೆ ಹೋಗುತ್ತಿದೆ ಎಂದು ಅಶೋಕ್ ಬೇಸರ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ 15ನೆ ಬಜೆಟ್‍ಗೆ ಸಾಲದ ಮೊತ್ತವನ್ನು ಒಂದು ಲಕ್ಷ ಕೋಟಿ ರೂ.ಗಳ ಗಡಿ ತಲುಪಿಸಿದ್ದಾರೆ. ಈವರೆಗೆ ರಾಜ್ಯದ ಸಾಲ 6,65,095 ಕೋಟಿ ರೂ.ಗೆ ಸಾಲ ತಲುಪಿದೆ. ಅಂದರೆ ಒಬ್ಬ ಪ್ರಜೆಯ ಮೇಲೆ 95,013 ರೂ.ಸಾಲ ಬೀಳಲಿದೆ. ಇನ್ನು ಸಾಲ ಮಾಡಲು ಆಗಲ್ಲ, ತೆರಿಗೆ ಹಾಕಲೂ ಆಗಲ್ಲ ಎನ್ನುವ ಸ್ಥಿತಿ ಉಂಟಾಗಿದೆ ಎಂದು ಅವರು ಹೇಳಿದರು.

ವಿತ್ತೀಯ ಕೊರತೆ 2022-23 ರಲ್ಲಿ ಶೇ.2.14, 2023-24 ರಲ್ಲಿ ಶೇ.2.67ಆಗಿದ್ದು, 2024-25 ರಲ್ಲಿ ಶೇ.2.9ಗೆ ಹೋಗುವ ಸಾಧ್ಯತೆ ಇದೆ. ಕೇವಲ ಎರಡು ವರ್ಷದಲ್ಲಿ ಸಾಲದ ಪ್ರಮಾಣ ಶೇ.13.6ರಷ್ಟು ಏರಿಕೆಯಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ಬಡ್ಡಿ ಪ್ರಮಾಣ 73 ಸಾವಿರ ಕೋಟಿ ರೂ. ತಲುಪುವ ಅಂದಾಜಿದೆ ಎಂದು ಅಶೋಕ್ ಆತಂಕ ವ್ಯಕ್ತಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News