ಬಿ.ಎಸ್.ಯಡಿಯೂರಪ್ಪ ಅವರನ್ನು ಒಪ್ಪದವರಿಗೆ ಬಿಜೆಪಿ ಟಿಕೆಟ್ ತಪ್ಪಿಸಲಾಗಿದೆ : ಸಿಎಂ ಸಿದ್ದರಾಮಯ್ಯ

Update: 2024-04-17 14:05 GMT

ಬೆಂಗಳೂರು : ಬಿಜೆಪಿಯಲ್ಲಿ ಎರಡು ಬಣವಿದೆ. ಬಿ.ಎಸ್.ಯಡಿಯೂರಪ್ಪ ಹಾಗೂ ಬಿ.ಎಲ್.ಸಂತೋಷ್ ಬಣ. ಆದರೆ, ಬಿ.ಎಸ್.ಯಡಿಯೂರಪ್ಪ ಅವರು ಒಪ್ಪದವರಿಗೆ ಬಿಜೆಪಿಯಿಂದ ಲೋಕಸಭೆ ಟಿಕೆಟ್ ತಪ್ಪಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಬುಧವಾರ ನಗರದ ಕ್ವೀನ್ಸ್ ರಸ್ತೆಯಲ್ಲಿ ಕೆಪಿಸಿಸಿ ಕಚೇರಿಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರಡಿ ಸಂಗಣ್ಣ ಅವರು ಕ್ಷೇತ್ರದಲ್ಲಿ ಉತ್ತಮ ಹೆಸರು ಹೊಂದಿದವರು. ಒಳ್ಳೆಯ ಕೆಲಸ ಮಾಡಿದ್ದರು. ಹಾಗಿದ್ದರೂ ಬಿಜೆಪಿಯವರು ಏಕೆ ಟಿಕೆಟ್ ತಪ್ಪಿಸಿದ್ದು ಏಕೆಂದು ಅರ್ಥವಾಗಿಲ್ಲ. ಮಗನನ್ನು ಮುಖ್ಯಮಂತ್ರಿ ಮಾಡಲು ಯಡಿಯೂರಪ್ಪ ಪ್ರಯತ್ನ ನಡೆಸುತ್ತಿದ್ದಾರೆ ಎಂದರು.

ಕರ್ನಾಟಕದಲ್ಲಿ ಗೆಲ್ಲುವ ವಿಶ್ವಾಸ ಬಿಜೆಪಿಗಿಲ್ಲ. ಹೀಗಾಗಿ ಅನೇಕ ಲೋಕಸಭಾ ಸ್ಥಾನ ಬದಲಾವಣೆ ಮಾಡಿದ್ದಾರೆ. ಆಡಳಿತ ವಿರೋಧಿ ಅಲೆ ಇದೆ. ಕಾಂಗ್ರೆಸ್ ಈ ಬಾರಿ ಹೆಚ್ಚು ಸ್ಥಾನ ಗೆಲ್ಲುತ್ತದೆ. ಕರ್ನಾಟಕದಲ್ಲಿ ಐದು ಗ್ಯಾರಂಟಿ ಅಲೆ ಇದೆ. ಜನರಿಗೆ ಕಾಂಗ್ರೆಸ್ ಬಗ್ಗೆ ವಿಶ್ವಾಸ ನಂಬಿಕೆ ಬಂದಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಬಿಜೆಪಿ ಅಂದರೆ ಸುಳ್ಳು ಹೇಳುವವರು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಜನರನ್ನು ದಾರಿ ತಪ್ಪಿಸುವ ಕೆಲಸವನ್ನು ಮೋದಿ ಮಾಡಿದ್ದಾರೆ. ಆದರೆ, ಈ ಬಾರಿ ಯಶಸ್ಸು ಸಿಗಲು ಸಾಧ್ಯವಿಲ್ಲ. 220 ಸ್ಥಾನ ಗೆದ್ದರೆ ಜಾಸ್ತಿ, ಸಮೀಕ್ಷೆಯಲ್ಲಿ 200 ಸ್ಥಾನ ಗೆಲ್ಲುವ ವರದಿ ಇದೆ. ಹಾಗಾಗಿ, 400 ಗೆಲ್ಲುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ, ಬಿಜೆಪಿ ಈ ಬಾರಿ ಅಧಿಕಾರಕ್ಕೆ ಬರಲ್ಲ. ಇಂಡಿಯಾ ಪರವಾದ ಒಲವು ಜನರಲ್ಲಿ ಇದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಲೋಕಸಭಾ ಚುನಾವಣೆಯಲ್ಲಿ ನಮ್ಮ ಆಂತರಿಕ ವರದಿಯಲ್ಲಿ ಕಾಂಗ್ರೆಸ್ 20 ಸ್ಥಾನ ಗೆಲ್ಲುತ್ತದೆ ಎಂದಿದೆ. ಕರಡಿ ಸಂಗಣ್ಣ ಬಂದ ಬಳಿಕ ಕೊಪ್ಪಳದಲ್ಲಿ ಇನ್ನಷ್ಟು ಶಕ್ತಿ ಬಂದಿದೆ. ಅವರನ್ನು ಗೌರವಯುತವಾಗಿ ನಡೆಸಿಕೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News