ರಸ್ತೆ ಗುಂಡಿ ಮುಚ್ಚಲು ಜೆಟ್ ಪ್ಯಾಚರ್ ಯಂತ್ರ ಬಳಕೆ ಮಾಡಲು ಮುಂದಾದ ಬಿಬಿಎಂಪಿ

Update: 2024-09-11 13:16 GMT

Screengrab : x/@TOIBengaluru

ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯ ರಾಜರಾಜೇಶ್ವರಿ ನಗರ ವಲಯದಲ್ಲಿ ಪ್ರಾಯೋಗಿಕವಾಗಿ ಜೆಟ್ ಪ್ಯಾಚರ್ ಯಂತ್ರದ ಮೂಲಕ ರಸ್ತೆ ಗುಂಡಿಗಳನ್ನು ಮುಚ್ಚಲಾಗುತ್ತಿದೆ ಎಂದು ವಲಯ ಜಂಟಿ ಆಯುಕ್ತ ಅಜಯ್ ತಿಳಿಸಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಟ್ ಪ್ಯಾಚರ್ ಯಂತ್ರದ ಮೂಲಕ ತ್ವರಿತಗತಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಬಹುದಾಗಿದೆ. ಹೀಗಾಗಿ ವಲಯ ವ್ಯಾಪ್ತಿಯಲ್ಲಿ ಬರುವ ಪ್ರಮುಖ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಜೆಟ್ ಪ್ಯಾಚರ್ ಯಂತ್ರದ ಮೂಲಕ ಮುಚ್ಚಲಾಗುತ್ತಿದೆ ಎಂದರು.

ಈ ಯಂತ್ರದಲ್ಲಿ ಒಂದು ಬಾರಿಗೆ 150 ರಿಂದ 180 ಚ.ಮೀ ಅಗಲದ ರಸ್ತೆ ಗುಂಡಿಗಳನ್ನು ಮುಚ್ಚುತ್ತಿದೆ. ರಸ್ತೆ ಗುಂಡಿ ಮುಚ್ಚಿದ ಕೂಡಲೆ ವಾಹನಗಳು ಅದರ ಮೇಲೆ ಸರಾಗವಾಗಿ ಸಂಚಾರ ಮಾಡಬಹುದಾಗಿರುತ್ತದೆ ಎಂದು ಅವರು ತಿಳಿಸಿದರು.

ಆರ್.ಆರ್. ನಗರ ವಲಯದಲ್ಲಿ ಸಂಪೂರ್ಣ ರಸ್ತೆ ಹಾಳಾಗಿರುವುದನ್ನು ಹೊರತುಪಡಿಸಿ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ತ್ವರಿತವಾಗಿ ಮುಚ್ಚಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹಗಲು-ರಾತ್ರಿ ರಸ್ತೆ ಗುಂಡಿಗಳನ್ನು ಮುಚ್ಚಲಾಗುತ್ತಿದ್ದು, ಉಪಮುಖ್ಯಮಂತ್ರಿಗಳು ನೀಡಿರುವ ಕಾಲಮಿತಿಯೊಳಗಾಗಿ ಗುಂಡಿಗಳನ್ನು ಮುಚ್ಚಲಾಗುವುದೆಂದು ತಿಳಿಸಿದರು.

ವಲಯ ವ್ಯಾಪ್ತಿಯಲ್ಲಿ ಬರುವ 20 ವಾರ್ಡ್‍ಗಳಲ್ಲಿ ಅಭಿಯಂತರರು 2024ರ ಮೇ 20ರಿಂದ ಇದುವರೆಗೆ 2443 ರಸ್ತೆಗುಂಡಿಗಳನ್ನು ಗುರುತಿಸಿದ್ದು, ಅದರಲ್ಲಿ 2408 ರಸ್ತೆಗುಂಡಿಗಳನ್ನು ಈಗಾಗಲೇ ಮುಚ್ಚಲಾಗಿದ್ದು, 35 ರಸ್ತೆಗುಂಡಿಗಳನ್ನು ಮುಚ್ಚುವ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಿದರು.

ಇನ್ನು "ರಸ್ತೆ ಗುಂಡಿ ಗಮನ ತಂತ್ರಾಂಶ” ದಲ್ಲಿ ಸಾರ್ವಜನಿಕರಿಂದ 461 ದೂರುಗಳು ದಾಖಲಾಗಿದ್ದು, ಅದರಲ್ಲಿ 86 ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ. 302 ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯವನ್ನು ಶೀಘ್ರ ಮುಗಿಸಲಾಗುವುದು ಎಂದು ಅವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News