ವಾಲ್ಮೀಕಿ ರಚಿತ ರಾಮಾಯಣವನ್ನು ತಿರುಚಲಾಗಿದೆ: ಡಾ.ಬಂಜಗೆರೆ ಜಯಪ್ರಕಾಶ್

Update: 2024-10-17 10:33 GMT

ಬೆಂಗಳೂರು: ಮಹರ್ಷಿ ವಾಲ್ಮೀಕಿ ಮಹಾಕಾವ್ಯ ರಾಮಾಯಣದ ಮೂಲಕ ಅಂದಿನ ಸಾಮಾಜಿಕ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ವಾಲ್ಮೀಕಿ ಬರೆದ ಮೂಲಕಾವ್ಯವನ್ನು ತಿರುಚಿ ಅದಕ್ಕೆ ಬಾಲಕಾಂಡ,ಮತ್ತು ಉತ್ತರಕಾಂಡಗಳನ್ನು ಸೇರಿಸಿ ಇತಿಹಾಸವನ್ನು ಬದಲಿಸಲಾಗಿದೆ ಎಂದು ಅನೇಕ ವಿದ್ವಾಂಸರು ಅಭಿಪ್ರಾಯಪಡುತ್ತಾರೆ ಎಂದು ಪ್ರಗತಿಪರ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ಹೇಳಿದ್ದಾರೆ.

ಬೆಂಗಳೂರು ವಿಶ್ವವಿದ್ಯಾನಿಲಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಘಟಕದ ವತಿಯಿಂದ ಆಯೋಜಿಸಿದ್ದ ಶ್ರೀಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು."

ವಾಲ್ಮೀಕಿ ರಚಿತ ರಾಮಾಯಣದಲ್ಲಿನ ಶಂಭುಕನ ವಧೆಯನ್ನು ಕಾಲಾಂತರದಲ್ಲಿ ಮರೆಮಾಚುವ ಪ್ರಯತ್ನ ನಡೆದಿದೆ.ಈ ದೇಶದ ನೈಜತೆಯನ್ನು ಮರೆಮಾಚುವ ಪ್ರಯತ್ನಗಳು ಹಿಂದಿನಿಂದಲೂ ನಡೆದಿದೆ.ಕುಲಮೂಲಗಳನ್ನು ಆಧರಿಸಿ ಮೇಲು ಕೀಳು ಎಂದು ಬೇಧ ಭಾವ ಮಾಡುವ ವ್ಯವಸ್ಥೆಯಿತ್ತು.ಆದರೆ ಕುಲಮೂಲಗಳಿಂದ ಅಸಮಾನರಾಗುವ ವ್ಯವಸ್ಥೆ ಇರಕೂಡದು.ಆ ನಿಟ್ಟಿನಲ್ಲಿ ಬಸವ,ಅಂಬೇಡ್ಕರ್, ಬುದ್ದ ಶ್ರಮಿಸಿದ್ದಾರೆ.ಶರಣರ ಕಾಲದಲ್ಲಿ ಜಾತಿ ವ್ಯವಸ್ಥೆಯನ್ನು ಧಿಕ್ಕರಿಸಿ ತಮ್ಮ ತಮ್ಮ ಕುಲದ ಮೂಲಗಳನ್ನು,ಇಷ್ಟದೇವರನ್ನುಣ,ಕುಲಕಸಬು,ವೃತ್ತಿಗಳನ್ನ ವಚನಗಳಲ್ಲಿ ದಾಖಲಿಸಿದ್ದಾರೆ ಎಂದವರು ವಿವರಿಸಿದರು.

ತಳಸಮುದಾಯದಿಂದ ಬಂದವರೆ ಭಾರತದ ವಾಸ್ತವ ಚಿತ್ರಣ ಕಟ್ಟಿಕೊಟ್ಟವರು. ವಾಲ್ಮೀಕಿ, ವ್ಯಾಸ, ಕಾಳಿದಾಸರೆಲ್ಲರೂ ತಳಸಮುದಾಯದಿಂದ ಬಂದವರು. ತಮ್ಮ ಲೋಕಾನುಭವ ಮತ್ತು ತತ್ವದರ್ಶನದಿಂದ ಭಾರತದ ವಾಸ್ತವ ದರ್ಶನವನ್ನು ಪರಿಚಯಿಸಿದರು ಎಂದು ಡಾ.ಬಂಜಗೆರೆ ಅಭಿಪ್ರಾಯ ವ್ಯಕ್ತಪಡಿಸಿದರು.

ತಳಸಮುದಾಯದಿಂದ ಮೂಡಿಬಂದ ಮಹಾಚೇತನಗಳ ಜನ್ಮದಿನಾಚರಣೆ ಆಚರಿಸಬೇಕಾಗಿದೆ.

ಮಹಾವ್ಯಕ್ತಿಗಳ ಜಯಂತಿಗಳು ಜಾತಿ, ಧರ್ಮ,ಭಾಷೆ,ಗಡಿಗಳನ್ನು ಮೀರಿ ಬೆಳೆದಿದೆ.ಈ ಜಯಂತಿಗಳ ಮೂಲಕ ಭಾರತದ ಬೇರೆ ಬೇರೆ ಸಮುದಾಯಗಳ ಬೌದ್ದಿಕ,ಸಾಂಸ್ಕೃತಿಕ,ಸಾಹಿತ್ಯಕ ಕೊಡುಗೆ ಏನಿದೆ ಎಂಬುದನ್ನು ಮತ್ತೊಮ್ಮೆ ನೆನೆಯುವ ಕಾರ್ಯವಾಗುತ್ತದೆ. ಯಾವುದೇ ದೇಶದ ಚರಿತ್ರೆ ಏಕಮಯವಾದುದಲ್ಲ, ಅದರಲ್ಲೂ ವೈವಿಧ್ಯಮಯ ದೇಶವಾಗಿರುವ ಭಾರತ ರೂಪುಗೊಳ್ಳಲು ಬಹುಸಂಖ್ಯಾತರ ಕೊಡುಗೆಯನ್ನು ಸ್ಮರಿಸಬೇಕು. ಬಹುತ್ವದ ಸಾಂಸ್ಕೃತಿಕ ಕೊಡುಗೆ ಅರಿತರೆ ಸಮಾನ ಮನೋಭಾವ ಸೃಷ್ಟಿಯಾಗುತ್ತದೆ.ವಾಲ್ಮೀಕಿ ಜಯಂತಿ ಕೂಡ ಆ ಸಾಲಿಗೆ ಸೇರುತ್ತದೆ ಎಂದರು.

ತಳಸಮುದಾಯದಿಂದ ಬಂದ ವಾಲ್ಮೀಕಿ ಮಹರ್ಷಿಯಾದ ಕಥನ ಆ ಸಮುದಾಯದ ಕಟ್ಟಕಡೆಯ ವ್ಯಕ್ತಿಗೂ ಕೂಡ ಸ್ಫೂರ್ತಿದಾಯಕವಾಗಿರುತ್ತದೆ. ವ್ಯಾಸ, ಅಂಬೇಡ್ಕರ್, ಬುದ್ದ, ಕನಕದಾಸರ ಹೆಸರು ಹೇಳಿದಾಗ ಪ್ರತಿಯೊಬ್ಬರು ಹೆಮ್ಮೆಪಡಬೇಕು, ಅವರ ಕೊಡುಗೆಗಳನ್ನು ಗೌರವಿಸಿ ಸ್ಮರಿಸಬೇಕು.ಆ ಮಹಾಚೇತನವನ್ನು ಇಂದಿನ ಪೀಳಿಗೆ ಅರ್ಥ ಮಾಡಿಕೊಳ್ಳಲು ಜಯಂತಿಗಳು ಅವಶ್ಯಕ.ಶ್ರೇಷ್ಠತೆ ಮತ್ತು ಕನಿಷ್ಠತೆಯನ್ನು ಹೋಗಲಾಡಿಸಲು ನಮ್ಮ ಮೂಲಗಳನ್ನು ಅರಿತುಕೊಳ್ಳಬೇಕು.ಆದರೆ ನಮ್ಮ ಅಸ್ಮಿತೆ,ಅಸ್ತಿತ್ವಗಳು ಎಂದಿಗೂ ಪೈಪೋಟಿಯಾಗಬಾರದು, ಪ್ರಜ್ಞಾಪೂರ್ವಕರಾಗಿ ನಾವು ಸಮುದಾಯದ ಕೊಡುಗೆಗಳನ್ನು ಸ್ಮರಿಸಬೇಕು ಎಂದು ತಿಳಿಸಿದರು.

ವಾಲ್ಮೀಕಿ ಅಧ್ಯಯನ ಕೇಂದ್ರ ಸ್ಥಾಪನೆಗೆ ಚಿಂತನೆ: ಕುಲಪತಿ ಡಾ.ಜಯಕರ ಎಸ್.ಎಂ.

ಕುಲಪತಿ ಡಾ.ಜಯಕರ ಎಸ್.ಎಂ.ಮಾತನಾಡಿ "ರಾಮಾಯಣ, ಮಹಾಭಾರತಗಳು ಹಿಂದೆ ಶಿಕ್ಷಣದ ಭಾಗವಾಗಿದ್ದವೂ ಆದರೆ ಪ್ರಸ್ರುತ ಶಿಕ್ಷಣ ವ್ಯವಸ್ಥೆಯಲ್ಲಿ ರಾಮಾಯಣ,ಮಹಾಭಾರತಗಳ ಪರಿಚಯ ವಿದ್ಯಾರ್ಥಿಗಳಿಗಿಲ್ಲ. ವಿಶ್ವವಿದ್ಯಾನಿಲಯದಲ್ಲಿ ಮಹಾಪುರುಷರ ಜಯಂತಿ ಆಚರಿಸುವ ಮೂಲಕ ಅವರ ಕಾರ್ಯ, ಸಾಧನೆಗಳನ್ನು ನೆನೆಯುವ ಕೆಲಸವಾಗುತ್ತಿದೆ. ವಿಶ್ವವಿದ್ಯಾನಿಲಯದಲ್ಲಿ ವಾಲ್ಮೀಕಿ ಅಧ್ಯಯನ ಕೇಂದ್ರ ಸ್ಥಾಪಿಸುವ ಬಗ್ಗೆ ಚಿಂತಿಸಲಾಗುವುದು. ಈ ಮೂಲಕ ವಾಲ್ಮೀಕಿಯವರ ತತ್ವ,ಆದರ್ಶಗಳು ವಿದ್ಯಾರ್ಥಿಗಳಿಗೆ ತಲುಪಬೇಕು,ಆ ಕುರಿತು ಮತ್ತಷ್ಟು ಸಂಶೋಧನೆ ನಡೆಯಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಯೋಜನೆ ನಿರ್ದೇಶಕರಾದ ಪ್ರೊ.ಎನ್.ಎಂ.ತಳವಾರ್, ಕುಲಸಚಿವ ಶೇಕ್ ಲತೀಫ್, ಕುಲಸಚಿವ ಮೌಲ್ಯಮಾಪನ ಶ್ರೀನಿವಾಸ್ ಸಿ., ಪ್ರೊ.ಸುದೇಶ್ ವಿ., ಪ್ರೊ.ಜಯರಾಮ್ ನಾಯ್ಕ ಕೆ.ಜಿ., ನಾಗೇಶ್ ಪಿ.ಸಿ., ಪ್ರೊ.ಎಸ್.ನಾಗರತ್ಮಮ್ಮ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News